ದಕ್ಷಿಣದಲ್ಲಿ ಜಲಪ್ರಳಯದ ಕೋಡಿ ಶ್ರೀಗಳ ಭವಿಷ್ಯ ಮತ್ತು ವಿಜ್ಞಾನಿಗಳ El Nino ಎಚ್ಚರಿಕೆ: ಎರಡರ ಮಧ್ಯೆ ಅಸಲಿ ವ್ಯತ್ಯಾಸವೇನು?

Picture of Savistara

Savistara

Bureau Report

ಬೆಂಗಳೂರು : ಅಮೆರಿಕದ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ಅಧ್ಯಯನದ ಪ್ರಕಾರ, ಸೂಪರ್ ಎಲ್ ನಿನೋ ಎಫೆಕ್ಟ್, ಭಾರತಕ್ಕೆ ಬಹುವಾಗಿ ಕಾಡಲಿದೆ. ಈ ಅಧ್ಯಯನದ ವರದಿಯ ಪ್ರಕಾರ, ದಕ್ಷಿಣ ಭಾರತದ ರಾಜ್ಯಗಳು ಇದರಿಂದ ಹೆಚ್ಚು ಅಪಾಯಕ್ಕೆ ಸಿಲುಕಲಿದೆ. ಈ ವರದಿ ವೈರಲ್ ಆದ ಬೆನ್ನಲ್ಲೇ, ಕೋಡಿಮಠದ ಶ್ರೀಗಳು ವಾರದ ಹಿಂದೆ ಹೇಳಿದ್ದ ಭವಿಷ್ಯ ಮತ್ತೆ ಮುನ್ನಲೆಗೆ ಬಂದಿದೆ.

’ಕಟ್ಟೆಯಿಲ್ಲದ ಬಾವಿ ಹುಟ್ಟಿ, ನೆಟ್ಟನೀ ಸುರಂಗವ ಕೊರೆದು, ಗಟ್ಟಿಭೂಮಿ ಬಟ್ಟಬಯಲಾಯ್ತು’ ಎಂದು ಕೋಡಿಮಠದ ಶ್ರೀಗಳು ಹೇಳಿದ್ದರು. ಈಗ, ಚಿಕಾಗೋ ವಿಶ್ವವಿದ್ಯಾಲಯದ ವರದಿಯ ಪ್ರಕಾರ, ಎಲ್ ನಿನೋ ಎಫೆಕ್ಟ್ ಭಾರತದಲ್ಲಿ ಕಾಡಲಿದೆ. ಅದರಲ್ಲೂ ದಕ್ಷಿಣದ ರಾಜ್ಯಗಳು ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಆದರೆ, ಕೋಡಿಮಠದ ಶ್ರೀಗಳ ಭವಿಷ್ಯಕ್ಕೂ, ಎಲ್ ನಿನೋ ವರದಿಗೂ ವ್ಯತ್ಯಾಸವಿದೆ. ಏನದು?

ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ ಸಂಶೋಧನಾ ವಿಭಾಗ

ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ ಸಂಶೋಧನಾ ವಿಭಾಗದ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಉಲ್ಲೇಖವಾದಂತೆ, ಜಾಗತಿಕವಾಗಿ ತಾಪಮಾನವು ಸಾಮಾನ್ಯಕ್ಕಿಂತ 1.2 ಡಿಗ್ರಿ ಸೆಲ್ಸಿಯಸ್’ನಷ್ಟು ಹೆಚ್ಚಲಿದೆ. ಇದು, ಉಷ್ಣತೆಯ ತೀವ್ರತೆಯಿಂದಾಗಿ, ಹವಾಮಾನ ಬದಲಾವಣೆಗೆ ಕಾರಣವಾಗಲಿದೆ. ಇದು ಭಾರತದ ಮುಂಗಾರಿನ ಮೇಲೆ ಪರಿಣಾಮವರನ್ನು ಬೀರಲಿದ್ದು, ಸುಮಾರು 15,800 ಸಾವು ಸಂಭವಿಸಬಹುದು, ಇದರ ಎಫೆಕ್ಟ್ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಹೆಚ್ಚು ಎನ್ನುವ ಮುನ್ಸೂಚನೆಯನ್ನು ವರದಿಯಲ್ಲಿ ನೀಡಲಾಗಿದೆ.

ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯವೇನು?

ಇನ್ನೊಂದು ಕಡೆ ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿಯುತ್ತಾ, “ನೇಪಾಳದಲ್ಲಿ ಉಂಟಾದಂತಹ ಭೀಕರ ಪ್ರವಾಹದ ರೀತಿಯಲ್ಲೇ ದಕ್ಷಿಣ ಭಾರತದಲ್ಲೂ ಆಗಲಿದೆ. ಸಮುದ್ರದ ನೀರು ಒಳನುಗ್ಗಿ, ಊರಿಗೆ ಊರೇ ಮುಳುಗಿ ಹೋಗಲಿದೆ. ವಿಪರೀತ ಪ್ರವಾಹಗಳು ಅಪ್ಪಳಿಸಲಿದೆ, ಮುಂದೆ ಇನ್ನಷ್ಟು ಕಷ್ಟಗಳು ಹೆಚ್ಚಾಗಲಿದೆ” ಎಂದು ಹಾಸನ ಜಿಲ್ಲೆ ಅರಸೀಕೆರೆ ಹಾರನಹಳ್ಳಿ, ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯವನ್ನು ನುಡಿದಿದ್ದರು.

ಎಲ್ ನಿನೋ ವರದಿಗೂ, ಕೋಡಿಶ್ರೀಗಳ ಭವಿಷ್ಯದ ನಡುವೆ ಇರುವ ವ್ಯತ್ಯಾಸವೇನು?

  • ಎನ್ ನಿನೋ ವರದಿ ಮತ್ತು ಕೋಡಿಶ್ರೀಗಳ ಭವಿಷ್ಯವನ್ನು ಒಂದಕ್ಕೊಂದು ತುಲನೆ ಮಾಡಲಾಗುತ್ತಿದೆ. ವರದಿಯಲ್ಲೂ ಮತ್ತು ಕೋಡಿಶ್ರೀಗಳ ಭವಿಷ್ಯದಲ್ಲಿ ಸಂಕಷ್ಟ ಎದುರಾಗಲಿದೆ ಎನ್ನುವುದು ಸ್ಪಷ್ಟವಾಗಿದೆ. ಆದರೆ, ಕೋಡಿಶ್ರೀಗಳ ಭವಿಷ್ಯದಲ್ಲಿ ಪ್ರವಾಹ, ಜಲಪ್ರವಾಹ ಎಂದು ಹೇಳಿದ್ದಾರೆ. ವರದಿಯಲ್ಲಿ ಅನಾವೃಷ್ಟಿ, ತಾಪಮಾನದ ಏರಿಕೆ ಎಂದು ಉಲ್ಲೇಖವಾಗಿದೆ. ಎರಡರಲ್ಲೂ, ಸಾವುನೋವಿನ ಬಗ್ಗೆ ಉಲ್ಲೇಖವಾಗಿದೆ.
  • ಇನ್ನೊಂದು ಕಡೆ, ಕೋಡಿಶ್ರೀಗಳ ಭವಿಷ್ಯದ ಪ್ರಕಾರ, ’ಮುಂಗಾರು ಮಳೆ ವಿರಳವಾಗಿದ್ದರೂ, ರೈತರು ಕುಗ್ಗುವ ಅವಶ್ಯಕತೆಯಿಲ್ಲ. ಹಿಂಗಾರು ಮಳೆ ಉತ್ತಮವಾಗಿ ಸುರಿಯಲಿದೆ. ನಾಡಿನ ಕೆರೆ-ಕಟ್ಟೆಗಳೆಲ್ಲವೂ ಭರ್ತಿಯಾಗಲಿವೆ. ಮುಂಗಾರಿನಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ಹಿಂಗಾರು ಮಳೆಯಿಂದ ಪರಿಹಾರ ಸಿಗಲಿದೆ’ ಎಂದು ಹೇಳಿದ್ದರು.
  • ಮತ್ತೊಂದು ಕಡೆ ಎಲ್ ನಿನೋ ಅಧ್ಯಯನದ ವರದಿ ಪ್ರಕಾರ, ಡಿಸೆಂಬರ್ 2026 – ಫೆಬ್ರವರಿ 2027ರ ಅವಧಿಯಲ್ಲಿ ಸುಮಾರು 7,400ಕ್ಕೂ ಸಾವು ಸಂಭವಿಸಬಹುದು. ಇತರ ಪ್ರದೇಶಗಳಲ್ಲಿ ಇದರ ಭೀಕರತೆ ಕಡಿಮೆಯಾಗುತ್ತಾ ಬಂದರೂ, ಭಾರತದಲ್ಲಿ ಇದರ ಅಪಾಯ ಕಮ್ಮಿಯಾಗುವುದಿಲ್ಲ. ಚಳಿಗಾಲದಲ್ಲಿ ದಕ್ಷಿಣ ಭಾರತದ ಹವಾಮಾನದಲ್ಲಿ ಬದಲಾವಣೆ ಆಗುವುದರಿಂದ, ಎಫೆಕ್ಟ್ ಜಾಸ್ತಿ ಇರಲಿದೆ. ಆಮೂಲಕ, ಮಳೆ ಸುರಿಯದೇ, ಉಷ್ಣಾಂಶ ಏರಿಕೆಯಾಗಿ, ಸಾವುನೋವು ಸಂಭವಿಸಲಿದೆ ಎಂದು ಉಲ್ಲೇಖವಾಗಿದೆ. ಕೋಡಿಶ್ರೀಗಳು ಸಮೃದ್ದಿಯ ಮಳೆ ಎಂದರೆ, ವರದಿಯಲ್ಲಿ ಅನಾವೃಷ್ಟಿ ಎಂದು ಹೇಳಲಾಗಿದೆ.
[t4b-ticker]
error: Content is protected !!