ನವದೆಹಲಿ: ಫಾಸ್ಟಾಗ್ ವಾರ್ಷಿಕ ಪಾಸ್ ಬಳಸುತ್ತಿರುವವರಸಂಖ್ಯೆ 1 ಕೋಟಿ ಗಡಿ ದಾಟಿದೆ. ಇದು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಲ್ಲಿರುವ ವಿಶ್ವಾಸಾರ್ಹತೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ) ಹೇಳಿದೆ.
ವಾರ್ಷಿಕ ಪಾಸ್ ಸೌಲಭ್ಯವನ್ನು 2025ರ ಆಗಸ್ಟ್ 15ರಿಂದ ಜಾರಿಗೆ ತರಲಾಗಿದೆ. ಈ ವಾರ್ಷಿಕ ಪಾಸ್‌ನ ಮೌಲ್ಯ ₹3,075 ಆಗಿದೆ. ಈ ದರವು 2026-27ನೇ ಹಣಕಾಸು ವರ್ಷದ ಉದ್ದಕ್ಕೂ ಜಾರಿಯಲ್ಲಿ ಇರಲಿದೆ.ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಸುಗಮ ಹಾಗೂ ಮಿತವ್ಯಯಕಾರಿ ಪ್ರಯಾಣದ ಆಯ್ಕೆಯನ್ನು ಒದಗಿಸಲಾಗಿದೆ. ಖಾಸಗಿ ವಾಹನ ಮಾಲೀಕರು ಈ ಪಾಸ್ ಬಳಕೆ ಮಾಡುವುದು ಹೆಚ್ಚಾಗುತ್ತಿದೆ ಎಂದೂ ಎನ್‌ಎಚ್‌ಎಐ ಹೇಳಿದೆ.ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿನ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ವಾರ್ಷಿಕ ಪಾಸ್ ಅನ್ವಯವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್ ವೇಗಳನ್ನು ಬಳಸುವ ವಾಣಿಜೇತರ ವಾಹನಗಳು (ಖಾಸಗಿ ಕಾರು, ಜೀಪ್, ವ್ಯಾನ್‌ಗಳು) 200 ಟ್ರಿಪ್‌ಗಳವರೆಗೆ ಈ ಪಾಸ್ ಬಳಸಬಹುದು.
`ರಾಜ್‌ಮಾರ್ಗ್ ಯಾತ್ರಾ’ ಆ್ಯಪ್ ಮೂಲಕ ಒಮ್ಮೆ ಶುಲ್ಕ ಪಾವತಿಸಿದ ನಂತರ, ವಾಹನಕ್ಕೆ ಲಿಂಕ್ ಮಾಡಲಾದ ಹಾಲಿ ಇರುವ ಫಾಸ್ಟಾಗ್‌ನಲ್ಲೇ ಈ ವಾರ್ಷಿಕ ಪಾಸ್ ಸಕ್ರಿಯಗೊಳ್ಳುತ್ತದೆ.`ರಾಜ್‌ಮಾರ್ಗ್ ಯಾತ್ರಾ’ ಆ್ಯಪ್ ಮೂಲಕ ತಮ್ಮ ಪ್ರೀತಿಪಾತ್ರರಿಗೆ ವಾರ್ಷಿಕ ಫಾಸ್ಟಾಗ್ ಉಡುಗೊರೆಯಾಗಿ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ.
















































