ಮೈಸೂರು | ಸಾಲ ಮನ್ನಾ, ವೈಜ್ಞಾನಿಕ ಪರಿಹಾರಕ್ಕೆ ರೈತರ ಆಗ್ರಹ

Picture of Savistara

Savistara

Bureau Report

ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50ರಅನುಪಾತದಲ್ಲಿ ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ಕಬ್ಬಿಗೆ ಹೆಚ್ಚುವರಿ ಬೆಲೆ ನಿಗದಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಜಿಲ್ಲಾ ಘಟಕದವರು ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಸಿದ್ದಾರ್ಥನಗರದ ಬುದ್ದ ವೃತ್ತ ಸಮೀಪದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.’ಭೀಕರ ಬರಗಾಲದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಸ್ಪಂದಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.’ಮಳೆ ಇಲ್ಲದೇ ಕೆರೆ-ಕಟ್ಟೆಗಳು ಒಣಗಿವೆ. ಅಲ್ಲಲ್ಲಿ ರೈತರು ಹಾಕಿದ ಬೆಳೆ ನಷ್ಟಕ್ಕೀಡಾಗಿದೆ. ಬೋರ್‌ವೆಲ್‌ಗಳಲ್ಲಿ ನೀರಿಲ್ಲದೇ ತೋಟಗಾರಿಕೆ ಬೆಳೆಗಳೂ ಹಾಳಾಗಿವೆ. ಜನರು ಜೀವನೋಪಾಯಕ್ಕಾಗಿ ಉದ್ಯೋಗ ಅರಸಿ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೂ ಸರ್ಕಾರಗಳು ರೈತರನ್ನು ಕಡೆಗಣಿಸಿ, ಅಮಾನವೀಯವಾಗಿ ನಡೆದುಕೊಳ್ಳುತ್ತಿವೆ’ ಎಂದು ದೂರಿದರು.

‘ಬ್ಯಾಂಕ್‌ಗಳು ಸಾಲ ವಸೂಲಿ ಮಾಡುವುದಕ್ಕೆ ತಡೆ ನೀಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 7 ತಾಸು ವಿದ್ಯುತ್ ಪೂರೈಸಬೇಕು. ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕು. ವಿಮಾ ಕಂಪನಿಗಳು ಸಂಪೂರ್ಣ ಬೆಳೆ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಹೆಚ್ಚಿನ ಪಡಿತರ ಒದಗಿಸಬೇಕು. ಖರೀದಿ ಕೇಂದ್ರದ ಮೂಲಕ ಖರೀದಿಸಲಾದ ಭತ್ತ, ಜೋಳ, ರಾಗಿ ‘ಕನಿಷ್ಠ ಬೆಂಬಲ ಬೆಲೆ’ಯ ಬಾಕಿಯನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕು’ ಎಂದು ಆಗ್ರಹಿಸಿದರು.’ತೀವ್ರ ಬರಗಾಲ ಇರುವುದರಿಂದ, ಮೈಸೂರು ದಸರಾ ಸರಳವಾಗಿ ಆಚರಿಸಬೇಕು ಮತ್ತು ಕಂಬಳ ಆಯೋಜನೆ ನಿಲ್ಲಿಸಬೇಕು’ ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಸಂಘದ ವಿಭಾಗೀಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಮರಂಕಯ್ಯ ಪಾಲ್ಗೊಂಡಿದ್ದರು.

[t4b-ticker]
error: Content is protected !!