ಕುಕ್ಕೆ ಸುಬ್ರಹ್ಮಣ್ಯ ಜಾಗ ವಿವಾದ: ದೇವಾಲಯದ ಪರ ಸುಪ್ರೀಂ ಕೋರ್ಟ್ ತೀರ್ಪು – ಸೆ.30 ರೊಳಗೆ ಅಂಗಡಿ, ವಸತಿ ಗೃಹಗಳ ತೆರವಿಗೆ ಗಡುವು

Picture of Savistara

Savistara

Bureau Report

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಜಾಗಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಸುದೀರ್ಘ ಕಾನೂನು ಹೋರಾಟದಲ್ಲಿ ದೇವಾಲಯದ ಪರವಾಗಿ ತೀರ್ಪು ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿಯು ಸೆಪ್ಟೆಂಬರ್ 30ರೊಳಗೆ ಜಾಗವನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದು, ಕಟ್ಟಡಗಳಲ್ಲಿದ್ದ ಅಂಗಡಿ ಹಾಗೂ ವಸತಿ ಗೃಹಗಳ ಮಾಲೀಕರು ಸ್ವಯಂಪ್ರೇರಿತರಾಗಿ ಸಾಮಗ್ರಿಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

​ಪ್ರಕರಣದ ಹಿನ್ನೆಲೆ:ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿರುವ ‘ಶ್ರೀನಿಕೇತನ’ ಕಟ್ಟಡ ಹಾಗೂ ಕೆಲವು ಖಾಸಗಿ ಆಸ್ತಿಗಳ ಕುರಿತಂತೆ ದೇವಾಲಯ ಮತ್ತು ಖಾಸಗಿ ವ್ಯಕ್ತಿಗಳ ನಡುವೆ ವಿವಾದವಿತ್ತು. ಖಾಸಗಿಯವರು ಸುಪ್ರೀಂ ಕೋರ್ಟ್‌ನಲ್ಲಿ ಹೂಡಿದ್ದ ದಾವೆಯನ್ನು ಇತ್ತೀಚೆಗೆ ನ್ಯಾಯಾಲಯವು ತಿರಸ್ಕರಿಸಿ, ದೇವಾಲಯದ ಪರ ತೀರ್ಪು ನೀಡಿದೆ.​

ಅಧಿಕಾರಿಗಳ ಭೇಟಿ ಹಾಗೂ ಸೂಚನೆ:ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡಿದ್ದ ಅಪರ ಕಾರ್ಯದರ್ಶಿ ರಾಜೇಂದರ್ ಕಟಾರಿಯಾ ಅವರು, ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದರೂ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಈ ಬೆನ್ನಲ್ಲೇ ಆಡಳಿತ ಮಂಡಳಿಯು ತೆರವು ಕಾರ್ಯಾಚರಣೆಗೆ ಚುರುಕು ನೀಡಿದೆ.

​ತೆರವು ಕಾರ್ಯ ಮತ್ತು ಮಾಸ್ಟರ್ ಪ್ಲಾನ್:ರಥಬೀದಿಯ ಶ್ರೀನಿಕೇತನ ಕಟ್ಟಡದಲ್ಲಿರುವ ವಸತಿ ಕೊಠಡಿಗಳು, ಹೋಟೆಲ್, ಫ್ಯಾನ್ಸಿ ಮಳಿಗೆಗಳು ಹಾಗೂ ದೇವಾಲಯದ ಮಾಸ್ಟರ್ ಪ್ಲಾನ್ ಯೋಜನೆಗೆ ಅಗತ್ಯವಿರುವ ಇತರೆ ಸ್ಥಳಗಳಲ್ಲಿನ ಕಟ್ಟಡಗಳನ್ನು ಸೆ.30 ರೊಳಗೆ ತೆರವುಗೊಳಿಸಲು ಸೂಚಿಸಲಾಗಿತ್ತು. ಈ ನೋಟಿಸ್ ಬೆನ್ನಲ್ಲೇ ವರ್ತಕರು ತಮ್ಮ ಅಂಗಡಿಗಳ ಸಾಮಗ್ರಿಗಳನ್ನು ಸ್ವಯಂಪ್ರೇರಿತರಾಗಿ ಖಾಲಿ ಮಾಡುತ್ತಿದ್ದಾರೆ. ಇದರೊಂದಿಗೆ ದೇವಾಲಯದ ಹಳೆಯ ಕಟ್ಟಡವಾದ ‘ಸ್ಕಂದ ಕೃಪಾ’ ಕೂಡ ತೆರವಾಗಲಿದೆ.​

ಸಿಇಒ ಸ್ಪಷ್ಟನೆ:ಈ ಕುರಿತು ಮಾಹಿತಿ ನೀಡಿದ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅರವಿಂದ ಅಯ್ಯಪ್ಪ ಸುತಗುಂಡಿ ಅವರು, “ಮಾಸ್ಟರ್ ಪ್ಲಾನ್ ಯೋಜನೆಯ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗೊಳಿಸುವ ಉದ್ದೇಶದಿಂದ ಅಪರ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯಂತೆ ತುರ್ತು ಕ್ರಮ ಕೈಗೊಳ್ಳಲಾಗಿದೆ. ಸೆ.30 ರಿಂದ ಕಟ್ಟಡ ತೆರವು ಮಾಡಲಾಗುವುದು ಹಾಗೂ ಇಂದಿನಿಂದಲೇ ಕಟ್ಟಡಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು” ಎಂದು ತಿಳಿಸಿದ್ದಾರೆ.

[t4b-ticker]
error: Content is protected !!