Sudha Yadav: ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಅಧಿಕಾರ ಸ್ವೀಕಾರ

Picture of Savistara

Savistara

Bureau Report

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾಯಾದವ್ (Sudha Yadav) ಇಂದು ಅಧಿಕಾರ ಸ್ವೀಕರಿಸಿದರು. ಲೋಕ ಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಅವರು, ಪ್ರಮಾಣ ವಚನ ಬೋಧಿಸಿದರು.ನಿರ್ಗಮಿತ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್, ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆ, ರಾಷ್ಟ್ರಪತಿ ದೌಪದಿ ಮುರ್ಮು ಅವರು, ಸುಧಾ ಯಾದವ್ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಿದ್ದರು.ವಿ.ಎಸ್.ರಮಾದೇವಿ (1999 ರಿಂದ 2002) ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಸದ್ಯ, ಸುಧಾ ಯಾದವ್ 2ನೇ ರಾಜ್ಯಪಾಲರಾಗಿದ್ದಾರೆ.

ಬಿಎಸ್‌ಎಫ್‌ ಡೆಪ್ಯುಟಿ ಕಮಾಂಡೆಂಟ್ ಆಗಿದ್ದ ಅವರ ಪತಿ ಸುಖೀರ್ ಸಿಂಗ್ ಯಾದವ್, 1999ರ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದರು. ಅವರಿಗೆ ಮರಣೋತ್ತರವಾಗಿ ‘ಸೇನಾ ಮೆಡಲ್’ ನೀಡಿ ಗೌರವಿಸಲಾಯಿತು. ಆ ಬಳಿಕ ಸುಧಾ ಯಾದವ್ ಸಾರ್ವಜನಿಕ ಜೀವನಕ್ಕೆ ಬಂದರು.ಅದೇ ವರ್ಷ ಹರಿಯಾಣದ ಮಹೇಂದ್ರಗಢದಿಂದ ಲೋಕಸಭೆಗೆ ಆಯ್ಕೆಯಾದರು. ರಸಾಯನಶಾಸ್ತ್ರದಲ್ಲಿ ಪಿಹೆಚ್‌ಡಿ ಪಡೆದಿರುವ ಅವರು, ಐಐಟಿ ರೂರ್ಕಿಯಿಂದ ಎಂಎಸ್ಸಿ ಅಧ್ಯಯನ ಮಾಡಿದ್ದಾರೆ.ಅಲ್ಲಿ ಚಿನ್ನದ ಪದಕವನ್ನು ಪಡೆದಿದ್ದರು.

ಸುಧಾ ಯಾದವ್ ಬಿಜೆಪಿಯಲ್ಲಿ ರಾಷ್ಟ್ರೀಯ ಉಸ್ತುವಾರಿ ಸೇರಿದಂತೆ ವಿವಿಧ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ‘ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ’ದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 2022ರಲ್ಲಿ ಬಿಜೆಪಿ ಸಂಸದೀಯ ಮಂಡಳಿಗೂ ನೇಮಕಗೊಂಡಿದ್ದರು. ಸುಷ್ಮಾ ಸ್ವರಾಜ್ ನಂತರ ಈ ಮಂಡಳಿಯಲ್ಲಿ ಸೇವೆ ಸಲ್ಲಿಸಿದ 2ನೇ ಮಹಿಳೆಯೂ ಇವರಾಗಿದ್ದಾರೆ.ಈ ಪ್ರಮಾಣ ವಚನ ಸಮಾರಂಭದಲ್ಲಿ ನಿರ್ಗಮಿತ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವ ಶರಣ ಪ್ರಕಾಶ್ ಪಾಟೀಲ್, ಕೆ.ಜೆ.ಜಾರ್ಜ್ ಮತ್ತು ಪ್ರಿಯಾಂಕ್ ಖರ್ಗೆ, ವಿಧಾನಸಭೆ ವಿಪಕ್ಷ ನಾಯಕ ಆ‌ರ್.ಅಶೋಕ, ವಿಧಾನ ಪರಿಷತ್ತಿನ ವಿಪಕ್ಷದ ನಾಯಕ ಚಲವಾದಿ ಟಿ.ನಾರಾಯಣಸ್ವಾಮಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾ‌ರ್ ಸಿಂಗ್‌ ಸೇರಿದಂತೆ ಅನೇಕ ಗಣ್ಯರು ಇದ್ದರು.

[t4b-ticker]
error: Content is protected !!