ಭಾರತದ 32 ವಿಮಾನ ನಿಲ್ದಾಣಗಳು ತಾತ್ಕಾಲಿಕವಾಗಿ ಬಂದ್ ಇರಲಿವೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಮಾಹಿತಿ ನೀಡಿದೆ.
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಮಧ್ಯದ ಸಂಘರ್ಷ ಮುಂದುವರಿದ ಹಿನ್ನೆಲೆ ಶ್ರೀನಗರ, ಅಮೃತಸರ ಸೇರಿದಂತೆ ದೇಶದ 32 ವಿಮಾನ ನಿಲ್ದಾಣಗಳನ್ನು ಮೇ 15ರವರೆಗೆ ಬಂದ್ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಮತ್ತು ಸಂಬಂಧಿತ ವಾಯುಯಾನ ಅಧಿಕಾರಿಗಳು ವಾಯುಪಡೆಯ ಸಿಬ್ಬಂದಿಗೆ (NOTAMs) ಸರಣಿ ನೋಟಿಸ್‌ಗಳನ್ನು ನೀಡಿದ್ದು, ಉತ್ತರ ಮತ್ತು ಪಶ್ಚಿಮ ಭಾರತದ 32 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿದ್ದಾರೆ.”ಮೇ 9, 2025 ರಿಂದ ಮೇ 15 ರವರೆಗೆ ದೇಶದ 32 ವಿಮಾನ ನಿಲ್ದಾಣಗಳು ಬಂದ್ ಇರಲಿವೆ” ಎಂದು DGCA ಪ್ರಕಟಣೆಯಲ್ಲಿ ತಿಳಿಸಿದೆ.
ಅಧಂಪುರ್, ಅಂಬಾಲ, ಅಮೃತಸರ, ಅವಂತಿಪುರ, ಬಟಿಂಡಾ, ಭುಜ್, ಬಿಕಾನೇರ್, ಚಂಡೀಗಢ, ಹಲ್ವಾರಾ, ಹಿಂದನ್,ಜಮ್ಮು, ಜೈಸಲ್ಮೇರ್, ಜಾಮ್‌ನಗರ, ಜೋಧ್‌ಪುರ, ಕಾಂಡ್ಲಾ, ಕಾಂಗ್ರಾ (ಗಗ್ಗಲ್), ಕೇಶೋಡ್, ಕಿಶನ್‌ಗಢ, ಕುಲ್ಲು ಮನಾಲಿ (ಭುಂತರ್) ಲೇಹ್,ಲುಧಿಯಾನ, ಮುಂದ್ರಾ, ನಲಿಯಾ, ಪಠಾಣ್‌ಕೋಟ್, ಪಟಿಯಾಲ, ಪೋರ್ಬಂದರ್, ರಾಜ್‌ಕೋಟ್ (ಹಿರಾಸರ್), ಸರ್ಸಾವಾ, ಶಿಮ್ಲಾ, ಶ್ರೀನಗರ, ಥೋಯಿಸೆ ಮತ್ತು ಉತ್ತರಲೈ ವಿಮಾನ ನಿಲ್ದಾಣಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗತಗೊಳಿಸಲಿವೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.ಇದಕ್ಕೂ ಮೊದಲು, ಕನಿಷ್ಠ 24 ವಿಮಾನ ನಿಲ್ದಾಣಗಳನ್ನು ಮೇ 10ರವರೆಗೆ ಬಂದ್ ಮಾಡಲಾಗಿತ್ತು. ಹಾಗೆಯೇ ಕಾರ್ಯಾಚರಣೆ ಕಾರಣಗಳಿಂದ ದೆಹಲಿ ಮತ್ತು ಮುಂಬೈ ವಿಮಾನ ಮಾಹಿತಿ ಪ್ರದೇಶಗಳ (FIRs) 25 ವಿಭಾಗಗಳ ವಾಯು ಸಂಚಾರ ಸೇವೆ (ATS) ಮಾರ್ಗಗಳ ತಾತ್ಕಾಲಿಕ ಸ್ಥಗಿತವನ್ನು ಮೇ 14ರವರೆಗೆ AAI ವಿಸ್ತರಿಸಿದೆ.
ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಡಚಣೆಯನ್ನು ಕಡಿಮೆ ಮಾಡಲು ಸಂಬಂಧಿತ ATC ಘಟಕಗಳೊಂದಿಗೆ ಸಮನ್ವಯದಿಂದ ತಾತ್ಕಾಲಿಕ ಸ್ಥಗಿತವನ್ನು ನಿರ್ವಹಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಚಂಡೀಗಢ, ಭುಜ್, ಜಾಮ್‌ನಗರ ಮತ್ತು ರಾಜ್‌ಕೋಟ್ ವಿಮಾನ ನಿಲ್ದಾಣಗಳು ಬಂದ್ ಆಗಿರುವುದರಿಂದ ಇಲ್ಲಿ ತೆರಳುವ ಮತ್ತು ಇಲ್ಲಿಗೆ ಆಗಮಿಸುವ ವಿಮಾನಗಳನ್ನ ಮೇ 15ರವರೆಗೆ ರದ್ದು ಪಡಿಸಲಾಗಿದೆ ಎಂದು ಏರ್ ಇಂಡಿಯಾ ಪೋಸ್ಟ್ ಮಾಡಿದೆ.ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರತೀಕಾರದ ಕ್ರಮಗಳ ಭಾಗವಾಗಿ ಭಾರತವು ಪಾಕಿಸ್ತಾನ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಹಾಗೆಯೇ ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರಾಗಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಭಾರತ ಆಪರೇಷನ್ ಸಿಂಧೂರ ಮೂಲಕ ಧ್ವಂಸಗೊಳಿಸಿತ್ತು. ಬಳಿಕ ಪಾಕಿಸ್ತಾನವು ಭಾರತದ ಮೇಲೆ ಡ್ರೋನ್ ದಾಳಿಗೆ ಮುಂದಾಗಿದೆ. ಇದರಿಂದ ಉಭಯ ದೇಶಗಳ ಮಧ್ಯೆ ಸಂಘರ್ಷ ಉಂಟಾಗಿದೆ.













































