ದಶಮಾನೋತ್ಸವ ಸಂಭ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್

Picture of Savistara

Savistara

Bureau Report

15 ಕೋಟಿ ರೂ.ಮೊತ್ತದ ಸೇವೆ…!!! ಹಣದ ಹೊಳೆ ಹರಿದು ಬರುವಂತೆ ಮಾಡುತ್ತಿರುವುದು ಅಪರೂಪದ ಕಾರ್ಯ

ಕರಾವಳಿಯ ಯಕ್ಷಗಾನದ ಇತಿಹಾಸದಲ್ಲಿ ವಿಕಸನದ ಒಂದು ಮೈಲಿಗಲ್ಲು ಎನ್ನುವಂತೆ ಯಕ್ಷಧ್ರುವ ಪಟ್ಲ ದಶಮ ಸಂಭ್ರಮವು ಜೂನ್ 1 ರಂದು ಮಂಗಳೂರಿನ ಅಡ್ಯಾ‌ರ್ ಗಾರ್ಡನ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ವೈವಿಧ್ಯತೆಯನ್ನೂ ವಿಶಾಲವ್ಯಾಪ್ತಿಯನ್ನೂ ಹೊಂದಿದ್ದು ಅದರ ಆಮಂತ್ರಣವು ಒಂದು ಸಾರ್ವಕಾಲಿಕ ದಾಖಲೆಯಾಗಿ ಸಂಗ್ರಹಯೋಗ್ಯವಾಗಿದೆ. ಯಕ್ಷಗಾನದ ಬಲವರ್ಧನೆಗೆ ಕಳೆದ ಹತ್ತು ವರ್ಷಗಳಿಂದ ಪಟ್ಲ ಫೌಂಡೇಶನ್ ಕೈಗೊಂಡಿರುವ ಯೋಜನೆಗಳ ಪ್ರಯೋಜನದ ಒಂದು ಸ್ಪಷ್ಟ ಚಿತ್ರಣವು ಈ ಆಮಂತ್ರಣದಲ್ಲಿ ಗೋಚರಿಸುತ್ತದೆ.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸೇವಾಯಾನದ ಸಾಧನೆಯು ನಿಜಕ್ಕೂ ತಲೆ ಗಿರೆನಿಸುವಂತಹದ್ದು (ಇಂಗ್ಲಿಷ್ ನಲ್ಲಿ ಹೇಳುವುದಾದರೆ mind blowing). ಕಳೆದ ಹತ್ತು ವರ್ಷಗಳಲ್ಲಿ 15 ಕೋಟಿ ಮೊತ್ತದ ಸೇವಾಯೋಜನೆಗಳನ್ನು ನಿರ್ವಹಿಸಿರುವುದು ಒಂದು ಅಸಾಮಾನ್ಯ ಸಂಗತಿಯೇ ಹೌದು. ಕೇವಲ ಬಯಲಾಟ ಪ್ರದರ್ಶನಗಳು ಹಾಗೂ ಕಲಾವಿದರ ಸನ್ಮಾನಗಳಿಗೆ

ಹಣವನ್ನು ಮುಗಿಸದೆ ಅನೇಕ ರಚನಾತ್ಮಕ ಶಾಶ್ವತ ಸೌಲಭ್ಯಗಳ ನಿರ್ಮಾಣಕ್ಕಾಗಿ ಮುಗಿಸಿರುವುದು ಪ್ರಶಂಸನೀಯ ಸಂಗತಿ, ಯಕ್ಷಾಶ್ರಯ ಯೋಜನೆಯಲ್ಲಿ 57 ಮನೆಗಳ ನಿರ್ಮಾಣ ಹಾಗೂ ಮನೆ ರಿಪೇರಿಗೆ ತಲಾ 25,000ರೂ. ನಂತೆ 180 ಕಲಾ ವಿದರಿಗೆ ಸಹಾಯಧನ, ತಲಾ 50,000 ರೂ. 175 ತೀರಾ ಅಶಕ್ತ ಕಲಾವಿದರಿಗೆ ಧನಸಹಾಯ, ಅಪಘಾತ ವಿಮಾ ಯೋಜನೆಯ ಅಡಿಯಲ್ಲಿ ಪ್ರತಿವರ್ಷ 2450 ಕಲಾವಿದರಿಗೆ ರೂ. 60,000 ರೂ. ನಂತೆ ಅಪಘಾತ ಚಿಕಿತ್ಸಾ ವೆಚ್ಚ ಹಾಗೂ ಆಕಸ್ಮಿಕ ಜೀವಹಾನಿಯಾದಲ್ಲಿ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರಧನ. ರಂಗಸ್ಥಳದಲ್ಲೇ ಇಹಲೋಕ ತ್ಯಜಿಸಿದ ಕಲಾವಿದರಿಗೆ ಹಾಗೂ ದೈವನರ್ತಕರಿಗೆ ತಲಾ ರೂ. ಒಂದು ಲಕ್ಷದಂತೆ ಪರಿಹಾರ ಧನ ವಿತರಿಸಿ ನಿಜವಾದ ಅಶಕ್ತರಿಗೆ ನೆರವಾದ ಶ್ರೇಯಸ್ಸು ಈ ಸಂಘಟನೆಯ ಅಸಾಧಾರಣ ಶಕ್ತಿಯ ಪ್ರತೀಕವಾಗಿದೆ.

ಇನ್ನು ಯಕ್ಷಧ್ರುವ ಪ್ರಭದ ಆಶ್ರಯದಲ್ಲಿ 150 ಕಲಾವಿದರಿಗೆ ತಲಾ 25,000 ರೂ. ತುರ್ತು ಚಿಕಿತ್ಸಾ ವೆಚ್ಚ, ಅಪಘಾತ ಹಾಗೂ ಆನಾರೋಗ್ಯದಿಂದ ವಿಧಿವಶರಾದ 30 ಮಂದಿ ಕಲಾವಿದರಿಗೆ ರೂ 50,000 ರೂ ನಂತೆ ಪರಿಹಾರಧನ, ಅಪಘಾತಕ್ಕೀಡಾಗಿ ಮೃತ ಪಟ್ಟ ನಾಲ್ಕು ಮಂದಿ ಕಲಾವಿದರ ಕುಟುಂಬಗಳಿಗೆ ವಿಮಾಯೋಜನೆಯ ಮೂಲಕ ರೂ 36 ಲಕ್ಷ ರೂ.ಪರಿಹಾರ ಧನ, ಶೈಕ್ಷಣಿಕ ಸಾಧನೆ ಗೈದ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿವೇತನ, ಪ್ರಸಿದ್ಧ 85 ಕಲಾವಿದರಿಗೆ ರೂ 13 ಲಕ್ಷ ರೂ.ಗೌರವಧನ, ಕಲಾವಿದರಿಗೆ ಹಾಗೂ ಕುಟುಂಬದವರಿಗೆ ರಕ್ತದಾನ ಶಿಬಿರವಲ್ಲದೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಔಷಧ ವಿತರಣೆ, 87 ಸರಕಾರಿ ಶಾಲೆಗಳಲ್ಲಿ 48 ಯಕ್ಷ ಗುರುಗಳ ಮೂಲಕ 9,500 ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ, ಆಸಹಾಯಕ ಕಲಾವಿದರಿಗೆ ವಾರ್ಷಿಕ ರೂ 12,000 ರೂ. ಮಾಸಾಶನ, ಕೋವಿಡ್ ಬಾಧಿಸಿದ ಎರಡೂ ವರ್ಷಗಳಲ್ಲಿ ಸುಮಾರು 3500 ಕಲಾವಿದರಿಗೆ ಒಟ್ಟು ರೂ 70 ಲಕ್ಷ ರೂ. ಮೊತ್ತದ ಆಹಾರ ಕಿಟ್ ವಿತರಣೆ, ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನದಲ್ಲಿ ಆಳ್ವಾಸ್‌ ಸಹಕಾರದೊಂದಿಗೆ ಸುಮಾರು 3500 ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಾನೈಪುಣ್ಯತೆಯ ಸ್ಪರ್ಧೆಗಳು ಮತ್ತು 1700 ವಿದ್ಯಾರ್ಥಿಗಳು

ವೇಷಭೂಷಣದೊಂದಿಗೆ ರಂಗ ಪ್ರವೇಶ ಇತ್ಯಾದಿ ಕಲಾ ಸಂಪನ್ನತೆಯ ಕಾರ್ಯಕ್ರಮಗಳಿಗೆ ಮುಕುಟ ಪ್ರಾಯವಾಗಿ ಹಿರಿಯ ಪ್ರಸಿದ್ದ ಭಾಗವತರುಗಳ ಹಾಗೂ ವಿದ್ವಾಂಸರ ಕಲಾಕೃತಿಗಳ ಪ್ರಕಟನೆಯ ಕೆಲಸವನ್ನು ಮಾಡಿದ್ದಾರೆ.

ಯಕ್ಷಗಾನ ಕಲೆಯ ಆರೋಗ್ಯ ಪೂರ್ಣ ಬೆಳವಣಿಗೆಗಾಗಿ ಕಲೆಯ ಶೈಕ್ಷಣಿಕ ಆಯಾಮದ ಪೋಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯಕ್ಷಧ್ರುವ ಶಿಕ್ಷಣವನ್ನು ಸಶಕ್ತಿಕರಣಗೊಳಿಸುವ ಮಹಾಸ್ ಉದ್ದೇಶದಿಂದ ದಶಮ ಸಂಭ್ರಮದ ಸಂದರ್ಭದಲ್ಲಿ ಗಣ್ಯಮಾನ್ಯರ ಉಪಸ್ಥಿತಿಯಲ್ಲಿ ಮೂರು ರಾಷ್ಟ್ರೀಯ ಕಲಾ ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ಅಲ್ಲದೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಲಾಗೌರವ ಪ್ರದಾನದ ಕಾರ್ಯಕ್ರಮವೂ ಇದೆ. ಆಯ್ಕೆ ಯಕ್ಷಗಾನ ತಂಡಗಳಿಗೆ ಯಕ್ಷಗಾನ ಪ್ರದರ್ಶನ ಸ್ಪರ್ಧೆ ಹಾಗೂ ಎಂಟು ಖ್ಯಾತ ಭರತನಾಟ್ಯ ತಂಡಗಳಿಂದ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.

ಯಕ್ಷಗಾನ ಕಲೆಗೆ ಪ್ರತಿಷ್ಠೆಯನ್ನು ಮತ್ತು ಕಲಾವಿದರಲ್ಲಿ ಆತ್ಮಗೌರವವನ್ನು ಬೆಳೆಸುವ ಈ ಒಂದು ಮಹಾನ್ ಸಮ್ಮೇಳನವು ಕಲೆಯ ವಿಕಸನಕ್ಕೆ ಐತಿಹಾಸಿಕ ತಿರುವನ್ನು ನೀಡಿ ಯಕ್ಷಗಾನದ ಮುಂದಿನ ಹೆಜ್ಜೆಯನ್ನು ಗುರುತಿಸಲಿದೆ. ಈ ಒಟ್ಟು ಕಾರ್ಯಕ್ರಮದ ಸೂತ್ರಧಾರಿ ಭಾಗವತ ಪಟ್ಲ ಸತೀಶ ಶೆಟ್ಟಿ ಅವರು ಒಂದು ಮಾಧ್ಯಮವಾಗಿ ನಿಂತು ಯಕ್ಷಗಾನದ ಬೆಳವಣಿಗೆಗೆ ಹಣದ ಹೊಳೆ ಹರಿದು ಬರುವಂತೆ ಮಾಡುತ್ತಿರುವುದು ಅಪರೂಪದ ಕಾರ್ಯ. ಇದು ಅವರಿಗೆ ಮಾತ್ರ ಸಾಧ್ಯ ಎನ್ನುವುದರೊಂದಿಗೆ ಇದನ್ನು ಕಾಣುವ ಭಾಗ್ಯ ನಮ್ಮದೆಂದು ಈ ದಶಕದಲ್ಲಿರುವ ಕಲಾಸಕ್ತರು ತಮ್ಮನ್ನು ಪುಣ್ಯವಂತರು ಎಂದುಕೊಳ್ಳಬಹುದು.

ಡಾ. ಚಂದ್ರಶೇಖರ್ ದಾಮ್ಮೆ, ಸುಳ್ಯ

[t4b-ticker]
error: Content is protected !!