ಏರೋಸ್ಪೇಸ್ ಕ್ಷೇತ್ರದಲ್ಲಿ ಭಾರತವು ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ‘ಮೇಕ್ ಇನ್ ಇಂಡಿಯಾ’ ಭಾಗವಾಗಿ ‘ಟಾಟಾ ಅಡ್ವಾನ್ಸ್ ಸಿಸ್ಟಮ್ಸ್’ ಹಾಗೂ ಯುರೋಪಿನ ಏರೋಸ್ಪೇಸ್ ಸಂಸ್ಥೆಯಾದ ಏರ್‌ಬಸ್ ಡಿಫೆನ್ಸ್ ಸಹಯೋಗದಲ್ಲಿ ತಯಾರಾದ ಮೊದಲ ಸ್ವದೇಶಿ ನಿರ್ಮಿತ ‘ಸಿ-295’ ಸಾರಿಗೆ ಮಿಲಿಟರಿ ವಿಮಾನವು ಮೊದಲ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿದೆ.
ಸಿ -295 ವಿಮಾನದ ತಯಾರಿ ಆರಂಭವಾಗಿದ್ದು ಯಾವಾಗ?ದೇಶದ ರಕ್ಷಣಾ ಕ್ಷೇತ್ರಕ್ಕೆ ಏನೆಲ್ಲಾ ಅನುಕೂಲವಾಗಲಿದೆ. ಈ ವಿಮಾನದ ಸಾಮರ್ಥ್ಯವೇನು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಯೋಜನೆಯ ಆರಂಭ
2021ರ ಸೆಪ್ಟೆಂಬರ್‌ನಲ್ಲಿ ಭಾರತವು ಯುರೋಪಿಯನ್ ಒಕ್ಕೂಟದ ಬಹುರಾಷ್ಟ್ರೀಯ ಸಂಸ್ಥೆ, ಏರ್‌ಬಸ್ ಡಿಫೆನ್ಸ್ ಅಂಡ್ ಸ್ಪೇಸ್‌ನೊಂದಿಗೆ ₹21 ಸಾವಿರ ಕೋಟಿಯ ಒಪ್ಪಂದ ನಡೆದಿತ್ತು. ಈ ಒಪ್ಪಂದದ ಅನ್ವಯ ಭಾರತದಲ್ಲಿ ಈಗಾಲೇ ಕೆಲಸ ಮಾಡುತ್ತಿರುವ ಅವೋ-748 ಸಾರಿಗೆ ವಿಮಾನಗಳಿಗೆ ಪರ್ಯಾಯವಾಗಿ, ಹೊಸದಾಗಿ ಐವತ್ತಾರು ಸಿ-295 ವಿಮಾನಗಳ ಖರೀದಿಗೆ ಅನುಮೋದನೆ ನೀಡಿತ್ತು.
ಇದರ ಭಾಗವಾಗಿ ಹದಿನಾರು ಸಿ-295 ವಿಮಾನಗಳನ್ನು ಏರ್‌ಬಸ್ ಡಿಫೆನ್ಸ್ ಅಂಡ್ ಸ್ಪೇಸ್ ಪೊರೈಸುವುದು, ಉಳಿದ 40 ವಿಮಾನಗಳನ್ನು ಭಾರತದಲ್ಲಿಯೇ ನಿರ್ಮಾಣ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೀಗ ಭಾರತದಲ್ಲಿ ತಯಾರಾದ ಮೊದಲ ಸಿ-295 ವಿಮಾನವು ತನ್ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಮುಗಿಸಿದೆ. 2031 ರ ಆಗಸ್ಟ್ ವೇಳೆಗೆ 40 ಸಿ -295 ವಿಮಾನಗಳು ಭಾರತೀಯ ವಾಯುಪಡೆಗೆ ಸೇರಿಸುವ ಗುರಿ ಹೊಂದಿರುವುದಾಗಿ ರಕ್ಷಣಾ ಇಲಾಖೆ ತಿಳಿಸಿದೆ.
ಸಿ-295 ವಿಮಾನ ಏನೆಲ್ಲಾ ಮಾಡುತ್ತದೆ?
- ಏರ್‌ಬಸ್ ಸಿ-295 ಬಹುಪಯೋಗಿ ವಿಮಾನವಾಗಿದೆ. ಕಠಿಣ ಪರಿಸ್ಥಿತಿಗಳಲ್ಲಿಯೂ ಕಾರ್ಯಾಚರಣೆ ಮಾಡಬಲ್ಲ ಮಧ್ಯಮ ದರ್ಜೆಯ ಸಾರಿಗೆ ವಿಮಾನವಾಗಿದೆ. ಸೈನಿಕ ಮತ್ತು ನಾಗರಿಕ ಕಾರ್ಯಾಚರಣೆಗಳಲ್ಲಿ ಬಳಸಬಹುದು.
- ಒಂದು ಬಾರಿಗೆ 71 ಮಂದಿ ಸಶಸ್ತ್ರ ಸೈನಿಕರು ಅಥವಾ 50 ಜನ ಪ್ಯಾರಾಟ್ರಪರ್‌ಗಳನ್ನು ಯುದ್ಧಭೂಮಿಗೆ ಸಾಗಿಸಬಹುದು.
- ಮಿಲಿಟರಿ ಕಾರ್ಯಾಚರಣೆಗೆ ಬೇಕಾದ ಸಶಸ್ತ್ರಗಳು, ಮಧ್ಯಮ ವರ್ಗದ ಮಿಲಿಟರಿ ವಾಹನಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ವಿಮಾನಕ್ಕಿದೆ.
- ಸಾಮಾನ್ಯವಾದ ನೆಲದ ರನ್‌ವೇಗಳು ಅಥವಾ ಕಿರಿದಾದ ರನ್‌ವೇಗಳ ಮೇಲೂ ಇದು ಸುಲಭವಾಗಿ ಇಳಿಯಬಲ್ಲದು.
- ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ, ಪ್ರದೇಶಗಳ ಮೇಲೆ ನಿಗಾ ಇಡಲು, ಪ್ರವಾಹ, ಭೂಕಂಪ ಅಥವಾ ಸಮುದ್ರದಲ್ಲಿ ಸಿಲುಕಿದ ಜನರನ್ನು ಹುಡುಕಲು ಮತ್ತು ಅವರಿಗೆ ಅಗತ್ಯ ಆಹಾರ, ಔಷಧಗಳನ್ನು ಆಕಾಶದಿಂದಲೇ ತಲುಪಿಸಲು ಸಹಾಯವಾಗಲಿದೆ.
- ಈ ವಿಮಾನದಲ್ಲಿ ವಿಶೇಷ ಬಗೆಯ ರೇಡಾರ್ ಮತ್ತು ಸೆನ್ಸರ್‌ಗಳಿದ್ದು, ಕಡಲ ತೀರದ ಮೇಲೆ ಕಣ್ಣಾವಲಿಗೆ, ಕಳ್ಳಸಾಗಣೆ ತಡೆಯಲು ಹಾಗೂ ನುಸುಳುಕೋರರ ಪತ್ತೆಗೆ ಬಳಸಬಹುದು. ಮಾತ್ರವಲ್ಲದೆ, ಶತ್ರು ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚಲು ಬಳಸಬಹುದು.
- ಒಮ್ಮೆ ಆಗಸಕ್ಕೆ ಹಾರಿದರೆ, ಸತತ 11 ರಿಂದ 13 ಗಂಟೆಗಳ ಕಾಲ ಆಕಾಶದಲ್ಲೇ ಕಾರ್ಯಾಚರಣೆ ನಡೆಸಬಲ್ಲದು. ಜೊತೆಗೆ ಆಕಾಶದಲ್ಲಿಯೇ ಇಂಧನ ತುಂಬಿಸುವ ಸಾಮರ್ಥ್ಯ ಹೊಂದಿದೆ.
- ಕ್ಷಿಪಣಿಗಳನ್ನು ದಾರಿ ತಪ್ಪಿಸುವ ತಂತ್ರಜ್ಞಾನವೂ ಈ ವಿಮಾನಕ್ಕಿದೆ.
ಸಿ-295ನ ಸಾಮರ್ಥ್ಯ ಹೀಗಿದೆ…
ಎರಡು ಟರ್ಬೋಪ್ರೊಪ್ ಎಂಜಿನ್‌ಗಳನ್ನು ಒಳಗೊಂಡಿದ್ದು, ಪ್ರತಿ ಇಂಜಿನ್ 1,972 ಕಿಲೋವ್ಯಾಟ್ ಸಾಮರ್ಥ್ಯ ಹೊಂದಿವೆ. ಗರಿಷ್ಠ 9,250 ಕೆಜಿ ತೂಕದ ಪೆಲೋಡ್ ಹೊರುವ ಸಾಮರ್ಥ್ಯವಿದ್ದು, ಗಂಟೆಗೆ 480 ಕಿ.ಮೀ ವೇಗದಲ್ಲಿ ಹಾರಬಲ್ಲದು.ಸುಮಾರು 30,000 ಅಡಿ ಎತ್ತರದಲ್ಲಿ ಹಾರಾಟ ಮಾಡುವ ಸಾಮರ್ಥ್ಯವಿದ್ದು, ಇಂಧನ ಸಾಮರ್ಥ್ಯ 7,650 ಲೀಟರ್ ಆಗಿದೆ.
ಆವೋ-748 ವಿಮಾನದ ಸ್ಥಾನ ತುಂಬಲಿರುವ ಏರ್‌ಬಸ್ ಸಿ-295
ಭಾರತೀಯ ವಾಯುಪಡೆಯಲ್ಲಿ ಸದ್ಯ ‘ಆವೋ-748’ ವಿಮಾನಗಳು ಸೇನಾ ಸಾರಿಗೆಯ ವಿಮಾನಗಳಾಗಿ ಸೇವೆ ಸಲ್ಲಿಸುತ್ತಿವೆ. ಈ ವಿಮಾನಗಳ ಮೂಲ ಬ್ರಿಟನ್ ಕಂಪನಿಯಾದರೂ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪರವಾನಗಿ ಪಡೆದು ‘ಹೆಚ್‌ಎಎಲ್-748’ ಹೆಸರಿನಲ್ಲಿ ಉತ್ಪಾದಿಸಿತ್ತು. ದೇಶದಲ್ಲಿ ಈ ವಿಮಾನಗಳು ಸೈನ್ಯ ಸಾಗಣೆ, ನೆವಿಗೇಶನ್ ಮತ್ತು ತರಬೇತಿಗೆ ಬಳಕೆಯಾಗುತ್ತಿದ್ದು. ಇದೀಗ ಈ ವಿಮಾನಗಳ ಜಾಗವನ್ನು ಏರ್‌ಬಸ್ ಸಿ-295 ತುಂಬಲಿವೆ ಎಂಬುದು ರಕ್ಷಣಾ ತಜ್ಞರ ಅಭಿಪ್ರಾಯವಾಗಿದೆ.












































