ರಾಷ್ಟ್ರೀಯ ಭದ್ರತೆಗಿಂತ ಮತ ಬ್ಯಾಂಕ್‌ಗೆ ಆದ್ಯತೆ…ಹಿಂದೂಗಳನ್ನು ರಕ್ಷಿಸುವಲ್ಲಿ ವಿಫಲ
ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ಬಾಂಗ್ಲಾದೇಶದಿಂದ ಒಳನುಸುಳುವಿಕೆಗೆ ಅನುಕೂಲ ಮಾಡಿಕೊಟ್ಟು,ರಾಷ್ಟ್ರೀಯ ಭದ್ರತೆಗಿಂತ ತಮ್ಮ ಮತಬ್ಯಾಂಕ್‌ಗೆ ಆದ್ಯತೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಪಶ್ಚಿಮ ಬಂಗಾಳಕ್ಕೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ವಿಜಯ್ ಸಂಕಲ್ಪ ಕಾರ್ಯಕರ್ತರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಶಾ, “ಮಮತಾ ಬ್ಯಾನರ್ಜಿ ಬಾಂಗ್ಲಾದೇಶಿಗಳಿಗೆ ದೇಶದ ಗಡಿಗಳನ್ನು ತೆರೆದು ಒಳನುಸುಳುವಿಕೆಗೆ ಅವಕಾಶ ನೀಡುತ್ತಿದ್ದಾರೆ. ಅವರಿಂದ ಒಳನುಸುಳುವಿಕೆ ತಡೆಯಲು ಸಾಧ್ಯವಿಲ್ಲ,ಬಿಜೆಪಿ ಸರಕಾರ ಮಾತ್ರ ಅದನ್ನು ಮಾಡಬಹುದು. ಬೇಲಿ ನಿರ್ಮಿಸಲು ನಾವು ಅವರಿಂದ ಭೂಮಿ ಕೇಳಿದ್ದೇವೆ. ಅವರು ಗಡಿಗಳಲ್ಲಿ ಭೂಮಿಯನ್ನು ಒದಗಿಸುತ್ತಿಲ್ಲ, ಹೀಗಾಗಿ ಒಳನುಸುಳುವಿಕೆ ಮುಂದುವರಿಯುತ್ತದೆ ಮತ್ತು ಅವರ ಮತ ಬ್ಯಾಂಕ್ ಹೆಚ್ಚುತ್ತಲೇ ಇರುತ್ತದೆ. ಮಮತಾ ಬ್ಯಾನರ್ಜಿ ನಂತರ ಅವರ ಸೋದರಳಿಯ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ” ಎಂದು ತೀವ್ರ ವಾಗ್ದಾಳಿ ನಡೆಸಿದರು.
2026 ರ ವಿಧಾನಸಭಾ ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ಚುನಾವಣ ಪ್ರಚಾರವನ್ನು ಆರಂಭಿಸಿದ ಶಾ, ರಾಜ್ಯದ ಚುನಾವಣೆಗಳು ಬಂಗಾಳದ ಭವಿಷ್ಯವನ್ನು ನಿರ್ಧರಿಸುವುದಲ್ಲದೆ, ರಾಷ್ಟ್ರೀಯ ಭದ್ರತೆಯ ಮೇಲೂ ಪರಿಣಾಮ ಬೀರುತ್ತವೆ ಎಂದರು.“ಮಮತಾ ಬ್ಯಾನರ್ಜಿ ಪಾಕಿಸ್ತಾನಿ ಭ*ಯೋತ್ಪಾದಕರ ಪರ ಎಷ್ಟು ಬೇಕಾದರೂ ಒಲವು ತೋರಬಹುದು, ಆದರೆ ನಾನು ಅವರಿಗೆ ಹೇಳಲು ಬಯಸುತ್ತೇನೆ ಇದು ಪ್ರಧಾನಿ ಮೋದಿ ಸರಕಾರ. ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ.ಯಾರು ಏನಾದರೂ ಮಾಡಲು ಧೈರ್ಯ ಮಾಡಿದರೂ ಅವರಿಗೆ ಸರಿಯಾದ ಉತ್ತರ ನೀಡಲಾಗುವುದು” ಎಂದರು.ಮುರ್ಷಿದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿದ ಶಾ, “ರಾಜ್ಯ ಸರಕಾರವು ಹಿಂದೂಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಕೇಂದ್ರ ಗೃಹ ಸಚಿವಾಲಯವು ಬಿಎಸ್‌ಎಫ್ ಕರೆಯಲು ಪದೇ ಪದೇ ಕೇಳಿತು, ಆದರೆ ಟಿಎಂಸಿ ಸರಕಾರ ಕರೆಯಲಿಲ್ಲ. ನಂತರ ನಮ್ಮ ಕಾರ್ಯಕರ್ತರು ಹೈಕೋರ್ಟ್ ಮೊರೆ ಹೋಗಬೇಕಾಯಿತು. ನ್ಯಾಯಾಲಯದ ಆದೇಶವನ್ನು ಅನುಸರಿಸಿ, ಬಿಎಸ್‌ಎಫ್ ಆಗಮಿಸಿ ಹಿಂದೂಗಳನ್ನು ರಕ್ಷಿಸಿತು” ಎಂದರು.













































