ವಿಧಾನಪರಿಷತ್‌ ಸದಸ್ಯ ಕಿಶೋ‌ರ್ ಕುಮಾರ್‌ ಗೆ ಮೂಲಭೂತವಾದಿ ಸಂಘಟನೆಗಳಿಂದ ಜೀವ ಬೆದರಿಕೆ; ಗನ್‌ಮ್ಯಾನ್ ಒದಗಿಸಿದ ಸರಕಾರ

Picture of Savistara

Savistara

Bureau Report

ಪುತ್ತೂರು: ಮೂಲಭೂತವಾದಿ ಸಂಘಟನೆಗಳಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಕಿಶೋ‌ರ್ ಕುಮಾ‌ರ್ ಪುತ್ತೂರು ಅವರಿಗೆ ಸರಕಾರ ಗನ್‌ಮ್ಯಾನ್ ಒದಗಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಸಾಮಾಜಿಕ ಜೀವನಕ್ಕೆ ಕಾಲಿರಿಸಿರುವ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬೊಟ್ಯಾಡಿಯ ಕಿಶೋರ್ ಕುಮಾರ್ ಅವರು ಬಿಜೆಪಿ ಯುವಮೋರ್ಚಾದ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡವರು. ವಿಧಾನಸಭಾ ಚುನಾವಣೆಯ ವೇಳೆ ಕಿಶೋ‌ರ್ ಕುಮಾ‌ರ್ ಅವರು ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಆ ವೇಳೆ ಅವಕಾಶ ನಿರಾಕರಣೆಯಾಗಿತ್ತು. ಬಳಿಕ ಅವರಿಗೆ ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದ್ದು ಅವರು ಜಯಭೇರಿ ಬಾರಿಸಿದ್ದರು. ಆ ನಂತರ ರಾಜ್ಯ ರಾಜಕಾರಣದಲ್ಲಿ ಮುಂಚೂಣಿಯ ಯುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಹಿಂದೂ ಪರ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿ ಕಿಶೋರ್ ಕುಮಾರ್ ಅವರನ್ನು ಮೂಲಭೂತವಾದಿ ಸಂಘಟನೆಗಳು ಗುರಿಯಾಗಿಸಿಕೊಂಡಿದೆ ಮತ್ತು ಕಿಶೋರ್ ಅವರ ಚಲನವಲನಗಳನ್ನು ಗಮನಿಸಿ ಅವರನ್ನು ಹಲವು ಬಾರಿ ಹಿಂಬಾಲಿಸಲಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದೆ.

ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕಿಶೋರ್ ಕುಮಾರ್ ಅವರಿಗೆ ತಿಳಿಸಿದ್ದಾರೆ. ಮಾತ್ರವಲ್ಲದೆ ಇಲಾಖೆಯಿಂದ ಗನ್‌ ಮ್ಯಾನ್ ಒದಗಿಸಲಾಗಿದೆ. ಪೊಲೀಸ್ ಇಲಾಖೆಯ ಮಂಜು ಎಂಬವರು ಕಿಶೋ‌ರ್ ಅವರ ಗನ್‌ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಕಿಶೋರ್ ಅವರಿಗೆ ಬೆದರಿಕೆ ಇರುವುದು ಮತ್ತು ಅವರಿಗೆ ಗನ್‌ಮ್ಯಾನ್ ಒದಗಿಸಿರುವುದು ಇನ್ನೂ ಬಹಿರಂಗವಾಗಿಲ್ಲ. ಈ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅವರನ್ನು ಸುದ್ದಿ ಬಿಡುಗಡೆಯಿಂದ ಸಂಪರ್ಕಿಸಿದಾಗ ಅವರು ಸ್ಪಷ್ಟವಾಗಿ ಯಾವುದೇ ಮಾಹಿತಿ ಒದಗಿಸಿಲ್ಲ. ನಾಳೆ ಪುತ್ತೂರಿನಲ್ಲಿರುತ್ತೇನೆ ಎಂದಷ್ಟೇ ತಿಳಿಸಿದ್ದಾರೆ.

[t4b-ticker]
error: Content is protected !!