ರಾಷ್ಟ್ರ ರಾಜಕಾರಣಕ್ಕೆ ಗುಡ್ ಬೈ : NDA ಮೈತ್ರಿಕೂಟಕ್ಕೆ ಶಾಕ್ ಕೊಡಲು ಹೊರಟ್ರಾ ’ಮೋದಿ ಕಾ ಹನುಮಾನ್ ’?

Picture of Savistara

Savistara

Bureau Report

ತನ್ನನ್ನು ತಾನು ಪ್ರಧಾನಿ ನರೇಂದ್ರ ಮೋದಿಯ ಹನುಮಾನ್ ಎಂದೇ ಹೇಳಿಕೊಳ್ಳುತ್ತಿದ್ದ ಲೋಕಜನಶಕ್ತಿ ಪಾರ್ಟಿಯ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ರಾಜ್ಯ ರಾಜಕಾರಣಕ್ಕೆ ಮರಳುವ ಮುನ್ಸೂಚನೆಯನ್ನು ನೀಡಿದ್ದಾರೆ. ಜೊತೆಗೆ, ಮುಂಬರುವ ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆಯಿದೆ.

ಹೊಸದಿಲ್ಲಿ : ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ನನ್ನ ಪಾಲಿಗೆ ಭಗವಾನ್ ಶ್ರೀರಾಮಚಂದ್ರ ಇದ್ದಂತೆ, ನಾನು ಅವರ ಹನುಮಾನ್. ನನ್ನ ಹೃದಯದಲ್ಲಿ ಸದಾ ಅವರು ಉನ್ನತ ಸ್ಥಾನವನ್ನು ಹೊಂದಿದ್ದಾರೆ ಎಂದಿದ್ದ ಲೋಕಜನಶಕ್ತಿ ಪಾರ್ಟಿಯ ಅಧ್ಯಕ್ಷ ಮತ್ತು ಕೇಂದ್ರ ಸಚಿವರೂ ಆಗಿರುವ ಚಿರಾಗ್ ಪಾಸ್ವಾನ್, ಎನ್ಡಿಎ ಮೈತ್ರಿಕೂಟಕ್ಕೆ ಶಾಕ್ ಕೊಡಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ.

ನಾನು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇ ನಿರ್ದಿಷ್ಟ ಉದ್ದೇಶವನ್ನು ಇಟ್ಟುಕೊಂಡು, ಕೇಂದ್ರದಲ್ಲಿ ಸಚಿವನಾಗಿ ಮುಂದುವರಿಯಬೇಕು ಎನ್ನುವ ಗುರಿ ನನ್ನದಲ್ಲ. ನಾನು ರಾಜ್ಯ ರಾಜಕಾರಣದಲ್ಲಿ ಮುಂದುವರಿಯುವುದು ನನ್ನ ಮುಂದಿನ ಗುರಿ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

” ನನ್ನ ಹುಟ್ಟೂರು ಬಿಹಾರದ ಅಭಿವೃದ್ದಿಗೆ ಕೊಡುಗೆ ಕೊಡುವುದು ನನ್ನ ಉದ್ದೇಶ, ಈ ಕಾರಣಕ್ಕಾಗಿಯೇ ನಮ್ಮ ತಂದೆ (ರಾಮ್ ವಿಲಾಸ್ ಪಾಸ್ವಾನ್) ಲೋಕಜನಶಕ್ತಿ ಪಾರ್ಟಿಯನ್ನು ಹುಟ್ಟು ಹಾಕಿದ್ದು. ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡೇ ನಾನು ರಾಜಕೀಯಕ್ಕೆ ಬಂದಿದ್ದು ” ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಕೇಂದ್ರದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಮಂತ್ರಿಯೂ ಆಗಿರುವ ಚಿರಾಗ್ ಪಾಸ್ವಾನ್, ಬಿಹಾರ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆಯನ್ನು ಕೊಟ್ಟರೂ, ನಿತೀಶ್ ಕುಮಾರ್ ಅವರೇ ನಮ್ಮ ಮುಖ್ಯಮಂತ್ರಿಗಳು ಎಂದು ಹೇಳಿದ್ದಾರೆ. ಆ ಮೂಲಕ, ಕೇಂದ್ರದಲ್ಲಿ ಹೆಚ್ಚುದಿನ ಮಂತ್ರಿಯಾಗಿ ಮುಂದುವರಿಯುವುದಿಲ್ಲ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಬೇಡವೇ ಎನ್ನುವ ವಿಚಾರ ಪಕ್ಷದಲ್ಲಿ ಚರ್ಚೆಯಾಗುತ್ತಿದೆ. ಕಾರ್ಯಕರ್ತರು ಮತ್ತು ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದ ಎನ್ನುವ ಮೂಲಕ, ಅಕ್ಟೋಬರ್ – ನವೆಂಬರ್ ನಲ್ಲಿ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸುವ ಮುನ್ಸೂಚನೆಯನ್ನು ನೀಡಿದ್ದಾರೆ.

ಲೋಕಜನಶಕ್ತಿ ಪಾರ್ಟಿಯ ಭದ್ರಕೋಟೆಯಾಗಿರುವ ಬಿಹಾರದ ಹಾಜಿಪುರ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಚಿರಾಗ್ ಪಾಸ್ವಾನ್, ಪ್ರಧಾನಿ ಮೋದಿಯವರ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇವರ ತಂದೆ ಹುಟ್ಟುಹಾಕಿರುವ ಈ ಪಕ್ಷದ ಐವರು ಸಂಸದರು ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.

ನನ್ನ ಹಿಂದಿನ ಹೇಳಿಕೆಯನ್ನು ನಾನು ಪುನರುಚ್ಚಿಸುತ್ತಿದ್ದೇನೆ, ನಾನು ದೀರ್ಘ ಕಾಲ ರಾಷ್ಟ್ರ ರಾಜಕಾರಣದಲ್ಲಿ ಮುಂದುವರಿಯಲು ಬಯಸುವುದಿಲ್ಲ. ನಾನು ರಾಜಕೀಯಕ್ಕೆ ಬಂದಿದ್ದು, ಬಿಹಾರದ ಅಭಿವೃದ್ದಿಗೆ ನನ್ನಿಂದ ಏನು ಮಾಡಲು ಸಾಧ್ಯವೋ, ಅದನ್ನು ಮಾಡಲು ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ನಾನು ಮೊದಲು ಬಿಹಾರಿ, ನನ್ನ ರಾಜ್ಯವನ್ನು ಅಭಿವೃದ್ದಿ ಹೊಂದಿದ ರಾಜ್ಯವನ್ನಾಗಿ ನೋಡಲು ಬಯಸುತ್ತೇನೆ. ಸಂಸದನಾಗಿ ಕೂತರೆ ಇದು ಸಾಧ್ಯವಿಲ್ಲ ಎನ್ನುವ ಅರಿವು ನನಗಿದೆ, ಶೀಘ್ರದಲ್ಲೇ ರಾಜ್ಯ ರಾಜಕಾರಣಕ್ಕೆ ಮರಳಲಿದ್ದೇನೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಚಿರಾಗ್, ಮೋದಿಯವರ ಕಟ್ಟಾ ಅಭಿಮಾನಿಗಳಲ್ಲಿ ಒಬ್ಬರು.

ಚಿರಾಗ್ ಪಾಸ್ವಾನ್ ರಾಜ್ಯ ರಾಜಕಾರಣಕ್ಕೆ ತೆರಳಿದರೆ, ಲೋಕಜನಶಕ್ತಿ ಪಾರ್ಟಿಯ ಬೆಂಬಲ ಎನ್ಡಿಎ ಮೈತ್ರಿಕೂಟಕ್ಕೆ ಮುಂದುವರಿಯಲಿದೆ ಎಂದು ಪಾರ್ಟಿಯ ಮುಖಂಡರು ಸ್ಪಷ್ಟ ಪಡಿಸಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ಮೋದಿಗೆ ಬಲಗೈ ಬಂಟನಂತಿದ್ದ ಚಿರಾಗ್ ಪಾಸ್ವಾನ್, ರಾಜ್ಯ ರಾಜಕಾರಣಕ್ಕೆ ತೆರಳಲು ಬಯಸಿರುವುದಕ್ಕೆ ಬಿಜೆಪಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!