ಸದ್ಯದ ರಾಜ್ಯ ಸರಕಾರದ ನಡವಳಿಕೆಯಿಂದ ಮತ್ತಷ್ಟು ಸಮಸ್ಯೆ ಹೆಚ್ಚಾಗಿದೆ. ಹಿಂದೂ ಪರ ಸಂಘಟನೆಗಳು ಹೋರಾಟಕ್ಕಿಳಿಯುವ ಮೊದಲು ಆದಷ್ಟು ಬೇಗ ಸರಕಾರ ತನ್ನ ನಡುವಳಿಕೆ ಬದಲಾಯಿಸಿಕೊಳ್ಳಬೇಕು ಎಂದು ವಿಜಯೇಂದ್ರ ಸಲಹೆ ನೀಡಿದ್ದಾರೆ.
ಕೊಪ್ಪಳ: ಕರಾವಳಿ ಭಾಗದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೊಲೆ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಬಂಧಿಸಲಾಗುತ್ತಿದೆ. ಕೆಲವರನ್ನು ಓಲೈಕೆ ಮಾಡಲು ರಾಜ್ಯ ಸರಕಾರ ಹೀಗೆ ಮಾಡುತ್ತಿದೆ. ತಪ್ಪಿತಸ್ಥರನ್ನು ಬಂಧಿಸಲು ನಮ್ಮ ಅಭ್ಯಂತರ ಇಲ್ಲ. ಆದರೆ, ಹಿಂದೂ ಪರ ಸಂಘಟನೆ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಇದನ್ನೆಲ್ಲ ನೋಡಿಕೊಂಡು ನಾವು ಸುಮ್ಮನಿರಲ್ಲ ಎಂದು ಸರಕಾರಕ್ಕೆ ಬಿ ವೈ ವಿಜಯೇಂದ್ರ ಎಚ್ಚರಿಕೆ ನೀಡಿದರು.ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮಿತಿಮೀರಿದೆ. ಮೇಲಿಂದ ಮೇಲೆ ಕೊಲೆ ಪ್ರಕರಣ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಸದ್ಯದ ರಾಜ್ಯ ಸರಕಾರದ ನಡವಳಿಕೆಯಿಂದ ಮತ್ತಷ್ಟು ಸಮಸ್ಯೆ ಹೆಚ್ಚಾಗಿದೆ. ಹಿಂದೂ ಪರ ಸಂಘಟನೆಗಳು ಹೋರಾಟಕ್ಕಿಳಿಯುವ ಮೊದಲು ಆದಷ್ಟು ಬೇಗ ಸರಕಾರ ತನ್ನ ನಡುವಳಿಕೆಯನ್ನ ಬದಲಾಯಿಸಿಕೊಳ್ಳಬೇಕು. ರಾಜ್ಯ ಸರಕಾರಕ್ಕೆ ಪರಿಸ್ಥಿತಿ ನಿರ್ವಹಣೆ ಮಾಡಲು ಸಾಧ್ಯವಾಗದೇ ಹೋದಲ್ಲಿ ನಾವು ಸುಮ್ಮನಿರಲ್ಲ ಎಂದು ವಿಜಯೇಂದ್ರ ಹೇಳಿದರು.
ಆಪರೇಷನ್ ಸಿಂದೂರದಿಂದ ದೇಶಕ್ಕೆ ಆಗಿರುವ ನಷ್ಟದ ಬಗ್ಗೆ ಕೇಂದ್ರ ಸರಕಾರ ಮಾಹಿತಿ ನೀಡಬೇಕು ಎಂಬ ಸಚಿವ ಪ್ರಿಯಾಂಕಾ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ದೇಶಾದ್ಯಂತ ನಡೆದ ತಿರಂಗಾ ಯಾತ್ರೆಯಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ಫೋಟೊ ಬಳಕೆ ಮಾಡಿಕೊಂಡಿಲ್ಲ. ಇದು ನಮ್ಮ ಬದ್ಧತೆ. ಕಾಂಗ್ರೆಸ್ ನವರಿಗೆ ಆಪರೇಷನ್ ಸದೂರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಅವರಿಗೆ ದೇಶದ ವಿಚಾರದಲ್ಲಿ ಅಷ್ಟೇ ಅಲ್ಲ ಯಾವುದರಲ್ಲಿಯೂ ಬದ್ದತೆ ಇಲ್ಲ. ಪ್ರಿಯಾಂಕಾ ಖರ್ಗೆ ತಮ್ಮ ಖಾತೆಯ ಜವಾಬ್ದಾರಿ ನೋಡಿಕೊಳ್ಳಲಿ. ಆಪರೇಷನ್ ಸಿಂದೂರದ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆ ಇದೆ. ಲೆಕ್ಕ ಕೇಳಲು ಕೇಂದ್ರೆಲ್ಲಿ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಎಂದು ತಿರುಗೇಟು ನೀಡಿದರು.
ನೋ ಗ್ಯಾರಂಟಿ:
ಕಾಂಗ್ರೆಸ್ ಸರಕಾರ ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯಿಂದ ಕೊಡುವುದು, ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಅನುಷ್ಠಾನ ಸಮಿತಿ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕುವ ಕೆಲಸ ಮಾಡುತ್ತಿದ್ದಾರೆ. ಬೆಲೆ ಏರಿಕೆಯಿಂದ ರಾಜ್ಯದ ಜನರು ಪರದಾಡುತ್ತಿದ್ದಾರೆ.
ಕನ್ನಡ ಭಾಷೆ ಬಗ್ಗೆ ಅಭಿಮಾನವಿರಲಿ:
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಕಮಲ ಹಾಸನ್ ಗೆ ತಮಿಳಿನ ಬಗ್ಗೆ ಅಭಿಮಾನ ಇರಲಿ. ಆದರೆ, ತಪ್ಪು ಮಾಹಿತಿಯಿಂದ ಕನ್ನಡ ಭಾಷೆ ಬಗ್ಗೆ ಮಾತನಾಡುವುದು ಸರಿಯಲ್ಲ.
ಖಾಸಗಿ ಸಂಸ್ಥೆಯ ಅಗತ್ಯವಿಲ್ಲ:
ಸಚಿವರ ಕಾರ್ಯವೈಖರಿ ಅರ್ಥ ಮಾಡಿಕೊಳ್ಳಲು ಖಾಸಗಿ ಸಂಸ್ಥೆಯ ಅಗತ್ಯವಿಲ್ಲ. ಸಿಎಂ, ಡಿಸಿಎಂ ಕೇವಲ ಬೆಂಗಳೂರಿಗೆ ಸೀಮಿತ ಆಗದೇ ನಾಡಿನ ಜನರ ಮುಂದೆ ಬಂದು ಸಚಿವರ ಕಾರ್ಯ ವೈಖರಿ ಬಗ್ಗೆ ಮಾಹಿತಿ ಕೇಳಬೇಕು. ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ಎಲ್ಲರಿಗೂ ಮಾದರಿ ಆಗಬೇಕು. ಆದರೆ, ಮಾಧ್ಯಮ ಪ್ರತಿನಿಧಿಗಳ ಬಗ್ಗೆ ಧಮ್ಕಿ ಹಾಕುವುದು ಸರಿಯಲ್ಲ ಎಂದು ಬಿ.ವೈ ವಿಜಯೆಂದ್ರ ಹೇಳಿದರು.













































