ಜೂನ್‌ 4 ರಿಂದ ಮತ್ತೆ ಮಳೆ ಆರ್ಭಟ: ಬೆಂಗಳೂರು ಸೇರಿ ಈ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಗುರುವಾರ ಒಳನಾಡಿಗೆ ವ್ಯಾಪಕ ಮಳೆ

Picture of Savistara

Savistara

Bureau Report

ಕರಾವಳಿಯಲ್ಲಿ ಮಳೆ ತಗ್ಗಿದ್ದರೂ, ಒಳನಾಡಿನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ನಾಳೆಯಿಂದ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಜಲಾಶಯಗಳ ಒಳಹರಿವು ಹೆಚ್ಚಾಗಿದ್ದು, ಚಾರ್ಮಾಡಿ ಘಾಟಿಯಲ್ಲಿ ಮರ ಬಿದ್ದ ಪರಿಣಾಮ ಸಂಚಾರಕ್ಕೆ ಅಡ್ಡಿಯಾಗಿದೆ.

ಬೆಂಗಳೂರು: ಕರಾವಳಿಯಲ್ಲಿ ಮಳೆ ಆರ್ಭಟ ತಗ್ಗಿದೆ. ಒಳನಾಡಲ್ಲಿ ನಾಳೆಯಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಾಳೆಯ ಹವಾಮಾನ

ಇಂದು ಎಲ್ಲಾ ಕಡೆ ಒಣಹವೆ ಇರಲಿದೆ. ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣ ಇರಲಿದ್ದು, ತಂಪಾದ ವಾತಾವರಣ ಇರಲಿದೆ. ಬುಧವಾರ ಜೂನ್ 4 ರಂದು ಮಾತ್ರ 18 ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ ಇದ್ದು ಯೆಲ್ಲೋ ಅಲರ್ಟ್ ಕೊಡಲಾಗಿದೆ.

ಎಲ್ಲೆಲ್ಲಿ ಭಾರಿ ಮಳೆ ಅಲರ್ಟ್?

ಬೆಳಗಾವಿ, ಹಾವೇರಿ, ಧಾರವಾಡ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಬಿರುಗಾಳಿಯೊಂದಿಗೆ (30-40 ಕಿ.ಮೀ ವೇಗದಲ್ಲಿ) ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಿಕ್ಕಬಳ್ಳಾಪುರ, ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ತುಮಕೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಬಿರುಗಾಳಿಯೊಂದಿಗೆ (30-40 ಕಿ.ಮೀ ವೇಗದಲ್ಲಿ) ಹಗುರದಿಂದ ಸಾಧಾರಣ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ

ಜೂನ್‌ 5 ರಂದು ಈ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ. ಕರಾವಳಿಯ ಮೂರು ಜಿಲ್ಲೆ ಹೊರತುಪಡಿಸಿ ಎಲ್ಲಾ ಕಡೆ ಮಳೆಯಾಗಲಿದೆ.

ಜಲಾಶಯಗಳ ಒಳಹರಿವು ಹೆಚ್ಚಳ

ರಾಜ್ಯದಾದ್ಯಂತ ಅಲ್ಲಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜಲಾಶಯಗಳ ಒಳಹರಿವು ಏರಿಕೆಯಾಗಿದೆ. ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯ ( 27.167 ಟಿಎಂಸಿ), ಕೊಡಗಿನಲ್ಲಿರುವ ಹಾರಂಗಿ ಜಲಾಶಯ (6.046 ಟಿಎಂಸಿ), ಹಾಸನದ ಹೇಮಾವತಿ ಜಲಾಶಯ (23.802 ಟಿಎಂಸಿ), ಮೈಸೂರಿನಲ್ಲಿರುವ ಕಬಿನಿ (17.44 ಟಿಎಂಸಿ) ಸೇರಿದಂತೆ ಅನೇಕ ಜಲಾಶಯಗಳಲ್ಲಿ ನೀರಿನ ಒಳಹರಿವು ಏರಿಕೆಯಾಗಿದೆ. ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮೈಸೂರು, ಚಾಮರಾಜನಗರ, ಹಾಸನ ಸೇರಿದಂತೆ ಇನ್ನಿತರ ಭಾಗಗಳಲ್ಲಿಉತ್ತಮ ಮಳೆಯಾಗುತ್ತಿದೆ. ಮುಂದಿನ ಒಂದು ವಾರವೂ ಇದೇ ರೀತಿಯ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಎಲ್ಲೆಲ್ಲಿ ಮಳೆ-ಎಲ್ಲಿ ಒಣಹವೆ?

ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಹಾವೇರಿ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಬಿರುಗಾಳಿಯೊಂದಿಗೆ (30-40 ಕಿ.ಮೀ ವೇಗದಲ್ಲಿ) ಹಗುರ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಗದಗ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ದಕ್ಷಿಣ ಒಳನಾಡು ಕರ್ನಾಟಕ: ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಬಿರುಗಾಳಿಯೊಂದಿಗೆ (30-40 ಕಿ.ಮೀ ವೇಗದಲ್ಲಿ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಚಾಮರಾಜನಗರ, ಹಾಸನ, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಬಿರುಗಾಳಿಯೊಂದಿಗೆ (30-40 ಕಿ.ಮೀ ವೇಗದಲ್ಲಿ) ಹಗುರ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸ್ಥಳೀಯ ಮುನ್ಸೂಚನೆ:

ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮುಖ್ಯವಾಗಿ ಒಣ ಹವೆ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸರಿಸುಮಾರು 31°C ಮತ್ತು 21°C ಇರಲು ಬಹಳಷ್ಟು ಸಾಧ್ಯತೆಗಳಿವೆ.

ಚಾರ್ಮಾಡಿ ಘಾಟಿಯಲ್ಲಿ ಬೃಹತ್‌ ಮರ ಬಿದ್ದು ಸಂಚಾರಕ್ಕೆ ಅಡ್ಡಿ

ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗ ಚಾರ್ಮಾಡಿ ಘಾಟಿಯಲ್ಲಿ ಸೋಮವಾರ ಭಾರಿ ಮಳೆಯಿಂದಾಗಿ ಬೃಹತ್‌ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸಿದರು.ಪಶ್ಚಿಮ ಘಟ್ಟದಲ್ಲಿ ಮಾನ್ಸೂನ್‌ ಮಳೆ ಶುರುವಾಗಿದ್ದು, ಘಾಟಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಮಣ್ಣಿನ ಜರಿತ, ಮರ ಬೀಳುವ ಮುಂತಾದ ಪ್ರಾಕೃತಿಕ ಅಡಚಣೆಗಳು ಹೆಚ್ಚಾಗಿವೆ. ಸೋಮವಾರ ಬೆಳಗ್ಗೆ ಮರ ಬಿದ್ದ ಕಾರಣ ಎರಡೂ ದಿಕ್ಕಿನಲ್ಲಿ ನೂರಾರು ವಾಹನಗಳು ಕಿ.ಮೀ. ಗಟ್ಟಲೆ ದೂರದವರೆಗೆ ಸಾಲಾಗಿ ನಿಂತಿದ್ದವು.

ವಾಹನ ಸವಾರರು ಹಾಗೂ ಪ್ರವಾಸಿಗರು ಪರದಾಡುವಂತಾಯಿತು. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಆಗಮಿಸಿ, ಮರ ತೆರವುಗೊಳಿಸುವ ಕಾರ್ಯ ಕೈಗೊಂಡರು.

[t4b-ticker]
error: Content is protected !!