ಇ.ಡಿ ಹೆಸರಲ್ಲಿ ಹಲವು ದರೋಡೆಯಾಗಿದೆ..! ಪೊಲೀಸರ ಹೆಸರಲ್ಲಿ ಮನೆಯಿಂದ ಹೊರ ಕರೆಸಿ ಹಿಂದೂ ನಾಯಕರ ಹತ್ಯೆಯಾದರೆ ಯಾರು ಹೊಣೆ..? ಹಿಂದೂ ಜಾಗರಣ ವೇದಿಕೆ ಪ್ರಶ್ನೆ

Picture of Savistara

Savistara

Bureau Report

ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳ ನಂತರ ನಡೆದ ಬೆಳವಣಿಗೆಗಳ ಬಗ್ಗೆ ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ.

ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳ ನಂತರ ನಡೆದ ಬೆಳವಣಿಗೆಗಳ ಬಗ್ಗೆ ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ.

ಹಿಂಜಾವೇ ಕರ್ನಾಟಕ ದಕ್ಷಿಣ ಪ್ರಾಂತದ ಸಂಚಾಲಕರಾದ ದೋ.ಕೇಶವಮೂರ್ತಿ ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಅದರಲ್ಲಿ ಈ ರೀತಿ ವಿವರಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳು ಸಮಾಧಾನಕರವಲ್ಲ. ಹಿಂದೂ ಸಮಾಜ ಹಿಂಸೆಯನ್ನ ಎಂದಿಗೂ ಒಪ್ಪುವುದಿಲ್ಲ. ಎಂದಿಗೂ ಸಮರ್ಥಿಸುವುದಿಲ್ಲ. ಈಗ ನಡೆದಿರುವ ಘಟನೆಗಳು, ಹತ್ಯೆಗಳ ಬಗ್ಗೆ ಮತ್ತಷ್ಟು ಅನಾವಶ್ಯಕ ಚರ್ಚೆಗಳನ್ನು ಎಸಗದೆ, ಪ್ರತೀಕಾರವೂ ಪ್ರಚೋದನೆಯೂ ಇತ್ಯಾದಿಗಳ ವಿಮರ್ಶೆಗಳನ್ನ ನಿಲ್ಲಿಸಿ ಕರಾವಳಿ ಜಿಲ್ಲೆಗಳಲ್ಲಿ ಸಾಮಾಜಿಕ ಶಾಂತಿಯನ್ನು ತರುವಂತಹ ಎಲ್ಲಾ ಪ್ರಯತ್ನಗಳನ್ನು ಹಿಂದು ಜಾಗರಣ ವೇದಿಕೆ ಸ್ವಾಗತಿಸುತ್ತದೆ. ಆ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ದಿಟ್ಟ ಕ್ರಮಗಳನ್ನು ಹಿಂದೂ ಸಮಾಜವಾಗಿ ನಾವು ಬೆಂಬಲಿಸುತ್ತೇವೆ. ಆದರೆ ಸರ್ಕಾರದ ನಿಲುವುಗಳು, ಧೋರಣೆಗಳು ಅನುಮಾನಾಸ್ಪದವಾಗಿ ಕಂಡಿದ್ದು ಅಲ್ಪಸಂಖ್ಯಾತರನ್ನು ಓಲೈಸುವ ಕಡೆಗೆ ತನ್ನ ಪಕ್ಷಪಾತಿ ನಿಲುವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿರುವಂತಹ ವಾತಾವರಣ ಕಂಡುಬರುತ್ತಿದೆ. ಇದು ಕರಾವಳಿ ಜಿಲ್ಲೆಗಳಲ್ಲಿ ಶಾಂತಿಯನ್ನು ಸ್ಥಾಪಿಸುವ ಬದಲು ಶಾಂತಿ ಕದಡುವ ಕ್ರಮಗಳಾಗಿ ಪರಿವರ್ತನೆಯಾಗುವ ಸಾಧ್ಯತೆಗಳು ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

ಸರ್ಕಾರದ ರಾಜಕೀಯ ನಿಲುವುಗಳು ಏನೇ ಇದ್ದರೂಕಾನೂನು ಸುವ್ಯವಸ್ಥೆಯನ್ನು ಸಾಮಾಜಿಕ ಶಾಂತಿಯನ್ನು ಪ್ರತಿಷ್ಠಾಪಿಸುವ ಹೊಣೆಗಾರಿಕೆ ಜಿಲ್ಲೆಯ ಆಡಳಿತದ್ದಾಗಿದೆ. ಈ ಜಿಲ್ಲಾಡಳಿತವು ಜಿಲ್ಲಾಧಿಕಾರಿಯಾಗಿರಬಹುದು ಅಥವಾ ಪೊಲೀಸ್ ಇಲಾಖೆಯೇ ಆಗಿರಬಹುದು ಅವರು ಪಕ್ಷಪಾತಿಯಾಗಿ ನಡೆದುಕೊಳ್ಳದೆ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕೆನ್ನುವುದು ಭಾರತದ ಸಂವಿಧಾನದ ಆಶಯ. ಆ ಸಂವಿಧಾನದ ಆಶಯದಂತೆ ಜಿಲ್ಲಾಡಳಿತವು ಕರ್ತವ್ಯವನ್ನ ನಿರ್ವಹಿಸಬೇಕಾಗಿದೆ. ಪೊಲೀಸ್‌ ಇಲಾಖೆ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ. ಶಾಂತಿಯ ಪ್ರತಿಷ್ಠಾಪನೆಯ ಹೆಸರಿನಲ್ಲಿ ಕೈಗೊಳ್ಳುತ್ತಿರುವ ಕ್ರಮಗಳು ಮೇಲ್ನೋಟಕ್ಕೆ ಕಾನೂನು ಬಾಹಿರವಾಗಿ ಕಂಡಿದ್ದು ಜವಾಬ್ದಾರಿಯುತ ಪೊಲೀಸ್ ಅಧಿಕಾರಿಗಳ ಹೇಳಿಕೆಗಳು ಪಕ್ಷಪಾತಿಯಾಗಿ ಕಂಡುಬರುತ್ತಲಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಹಿಂದೂ ಸಮಾಜ ಭಾವಿಸುತ್ತದೆ ಎಂದು ಅವರು ಹೇಳಿದರು.

ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಪೊಲೀಸ್‌ ಅಧಿಕಾರಿಯೋರ್ವರೂ ಒಂದು ಕೋಮಿನ ಪರವಾಗಿ ಮತ್ತೊಂದು ಸಮುದಾಯವನ್ನು ಹತ್ತಿಕ್ಕುವ ಯತ್ನದಲ್ಲಿ ತೊಡಗಿದ್ದಾರೆಯೇ ಎಂಬ ಅನುಮಾನ ಬಹುಸಂಖ್ಯಾತ ಸಮಾಜದ್ದಾಗಿದೆ. ಈ ತೋರ್ಪಡಿಕೆಯನ್ನ. ಈ ದೃಶ್ಯವನ್ನು ಇಲಾಖೆಯು ಎಚ್ಚರಿಕೆಯಿಂದ ಗಮನಿಸಬೇಕೆಂದು ಹಿಂದು ಜಾಗರಣ ವೇದಿಕೆಯು ಆಗ್ರಹಿಸುತ್ತದೆ.ಮನೆ ಮನೆಗಳಿಗೆ ನುಗ್ಗಿ ಸಾಮಾಜಿಕ ಕಾರ್ಯಕರ್ತರನ್ನು ಅವರ ಕುಟುಂಬ ವರ್ಗವನ್ನು ಬೆದರಿಸುವ ತಂತ್ರಕ್ಕೆ ಕೈ ಹಾಕಿರುವುದು ಸಮರ್ಥನೀಯವಲ್ಲ ಮತ್ತು ಆ ಕುರಿತು ಸ್ಪಷ್ಟನೆಯನ್ನ ಕೊಡುವ ಬರದಲ್ಲಿ ಕಮ್ಯುನಲ್ ಸಂಘಟನೆಗಳೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿರುವವರು ಎಂಬ ಪದವನ್ನು ಬಳಸಿರುವುದು ಅರ್ಥಹೀನವಾಗಿದೆ. ಯಾವ ಸಂಘಟನೆ ಕಮ್ಯುನಲ್‌ ಎನ್ನುವುದನ್ನು ನಿರ್ಧರಿಸುವುದಕ್ಕೆ ಅಧಿಕಾರಿಗಳು ಅನುಸರಿಸುವ ಮಾನದಂಡ ಏನು? ಎನ್ನುವುದು ಪ್ರಶ್ನೆಯಾಗಿದೆ.

ಅಲ್ಲದೇ ಕರಾವಳಿ ಜಿಲ್ಲೆಗಳ ಬಹುತೇಕ ಸಂಘಟನೆಗಳು ಕಾನೂನು ಬದ್ಧವಾದ ಸಂಘಟನೆಗಳಾಗಿದೆ. ಯಾವುದೇ ಸರ್ಕಾರಗಳು ಆ ಸಂಘಟನೆಗಳನ್ನ ನಿರ್ಬಂಧಿಸಿರುವುದಿಲ್ಲ. ನಿಷೇಧಿಸಿರುವುದಿಲ್ಲ. ಕಾನೂನು ಬಾಹಿರ ಸಂಘಟನೆ, Unlawful ಸಂಘಟನೆ ಎಂದು ಘೋಷಿಸಿರುವುದಿಲ್ಲ. ಅಂತಹ ಸಂಘಟನೆಗಳ ಕಾರ್ಯಕರ್ತರ ಮನೆಗಳಿಗೆ ಮಧ್ಯರಾತ್ರಿಯಲ್ಲಿ ನುಗ್ಗುವ ಪೊಲೀಸರು ಅನಾವಶ್ಯಕವಾದ ಬೆದರಿಕೆಯನ್ನು ಒಡ್ಡುತ್ತಿದ್ದು, ಅದನ್ನ ಪ್ರಶ್ನಿಸುವವರನ್ನ ಬಂಧಿಸುವ ಮತ್ತು ಅವರ ಮೇಲೆ ಉಗ್ರ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆಯನ್ನು ಅಧಿಕಾರಿಯು ಬಹಿರಂಗವಾಗಿ ಒಡ್ಡುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುವಂತಹದ್ದು ಆಗಿರುವುದಿಲ್ಲ.

ಉದಾಹರಣೆಗೆ ಕಡಬದಲ್ಲಿ ಕಾನೂನುಬಾಹಿರ ಸಂಘಟನೆ ಅಥವಾ ಕಮ್ಯುನಲ್ ಸಂಘಟನೆ ಎಂದು ನಿರ್ಧರಿಸಿದ್ದು ಯಾರು? ಅದಕ್ಕೆ ಇರುವ ಮಾನದಂಡ ಏನು? ಕೆಲವು ಕಡೆಗಳಲ್ಲಿ ಯಾವುದೇ ಸಂಘಟನೆಗಳೊಂದಿಗೆ ಸಂಬಂಧ, ಸಂಪರ್ಕವೇ ಇಲ್ಲದಿರುವಂತಹ ಹಿಂದೂ ಯುವಕರ ಮನೆಗಳಿಗೆ ತೆರಳುವ ಪೊಲೀಸರು ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಜಿಪಿಎಸ್ ಫೋಟೋ ತೆಗೆಯುವ, ತಂತ್ರವನ್ನು, ಬೆದರಿಕೆಯನ್ನ ಒಡ್ಡುತ್ತಿದ್ದಾರೆ. ಇದ್ಯಾವುದೂ ಕೂಡ ಸಹಿಸುವ ಕ್ರಮ ಅಲ್ಲ ಹಾಗೂ ಶಾಂತಿಯನ್ನು ಕಾನೂನು ಸುವ್ಯವಸ್ಥೆಯನ್ನು ಪ್ರತಿಷ್ಠಾಪಿಸುವ ದಾರಿ ಅಲ್ಲ ಎನ್ನುವುದನ್ನು ಹಿಂದು ಜಾಗರಣ ವೇದಿಕೆ ತಿಳಿಸಲು ಇಷ್ಟಪಡುತ್ತದೆ. ಈ ರೀತಿ ಮುಂದುವರಿದಲ್ಲಿ,ಕಾನೂನುಬಾಹಿರವಾಗಿ ಕ್ರಮಕ್ಕೆ ಕೈ ಹಾಕಿದಲ್ಲಿ ಬೇಲಿಯೇ ಎದ್ದು ಹೊಲವನ್ನು ಮೆಂದಂತೆ ಆಗುವುದು ನಿಶ್ಚಿತ. ಅದನ್ನ ಕರಾವಳಿಯ ಜಾಗೃತ ಸಮಾಜ ಸಹಿಸುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಹಿಂದು ಜಾಗರಣ ವೇದಿಕೆ ನೀಡಲು ಬಯಸುತ್ತದೆ ಎಂದು ತಿಳಿಸಿದ್ದಾರೆ.

ಮಧ್ಯರಾತ್ರಿಯಲ್ಲಿ ಪೊಲೀಸರು ಮನೆ ಮನೆಗೆ ನುಗ್ಗುವುದನ್ನು ಸಮರ್ಥಿಸುವ ಅಧಿಕಾರಿಗಳೇ, ಈ ರೀತಿಯಲ್ಲಿ ಮಧ್ಯರಾತ್ರಿಯಲ್ಲಿ ಪೊಲೀಸರ ಹೆಸರಿನಲ್ಲಿ ಮನೆಮನೆಗಳಿಗೆ ನುಗ್ಗುವುದನ್ನು ದುಷ್ಕರ್ಮಿಗಳು ದುರುಪಯೋಗಪಡಿಸಿಕೊಂಡು ಪೊಲೀಸರ ವೇಷದಲ್ಲಿ ಬಂದು ಅವರನ್ನು ಮನೆಯಿಂದ ಹೊರಗೆ ಕರೆತಂದು ಹತ್ಯೆಗೈದರೆ ಇದರ ಹೊಣೆಯನ್ನ ಯಾರು ಹೊತ್ತುಕೊಳ್ಳುತ್ತಾರೆ? ಇದೇ ಕರಾವಳಿಯ ಜಿಲ್ಲೆಯಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪೊಲೀಸರ ವೇಷಧರಿಸಿ ಮಧ್ಯರಾತ್ರಿ ರಾಜಕೀಯ ನಾಯಕರೊಬ್ಬರ ಮನೆಗೆ ಬಂದು ಅಪಹರಿಸಿ ಹತ್ಯೆಗೈದ ಇತಿಹಾಸ ಇನ್ನೂ ಹಸಿರಾಗಿದೆ. ED ಅಧಿಕಾರಿಗಳ ಹೆಸರಿನಲ್ಲಿ ಮನೆ ದರೋಡೆ ಯತ್ನ ನಡೆದಿರುವುದೂ ಕಣ್ಣಮುಂದಿದೆ.

ಪೊಲೀಸರ ಈ ರೀತಿಯ ವರ್ತನೆಗಳು ಹತ್ಯೆ ಮಾಡುವಂತಹ ಮತಾಂದರಿಗೆ ಪ್ರೇರಣೆ ಆಗಬಹುದು. ಈ ರೀತಿಯಲ್ಲಿ ಯಾವುದಾದರೂ ಹಿಂದುಗಳ ಹತ್ಯೆ ಆದಲ್ಲಿ ಅದರ ಹೊಣೆಯನ್ನ ಪೊಲೀಸರು ಅಥವಾ ಜಿಲ್ಲಾಡಳಿತ ಹೊತ್ತುಕೊಳ್ಳಲು ತಯಾರಿದೆಯೇ? ಇಂತಹ ಅಸಂಬದ್ಧ ಕ್ರಮಗಳನ್ನು ಕೈಗೊಂಡು ಅದನ್ನ ಸಮರ್ಥಿಸಿಕೊಳ್ಳುವ ಬದಲು ಕಾನೂನು ಬದ್ದವಾದ ಕ್ರಮಗಳಿಗೆ ಇಲಾಖೆ ಮುಂದಾಗಬೇಕೆ ಹೊರತು ಮಧ್ಯರಾತ್ರಿಗಳಲ್ಲಿ ಮನೆಗಳಿಗೆ ನುಗ್ಗುವ ಆ ಮೂಲಕ ದುಷ್ಕರ್ಮಿಗಳಿಗೆ ಉತ್ತೇಜನ ಕೊಡುವ ಕೆಲಸಕ್ಕೆ ಇಲಾಖೆ ಕೈಹಾಕಬಾರದು. ಇಂತಹ ಕಾನೂನುಬಾಹಿರ ಕ್ರಮಗಳಿಂದ ಜಿಲ್ಲಾಡಳಿತ ಹಿಂದಕ್ಕೆ ಸರಿಯಬೇಕೆಂದು ಇಲಾಖೆಯನ್ನು ಹಿಂದು ಜಾಗರಣ ವೇದಿಕೆಯು ಆಗ್ರಹಿಸುತ್ತದೆ. ಅದನ್ನು ಮೀರಿಯೂ ವರ್ತನೆಗಳು ಆರಂಭವಾದಲ್ಲಿ ಸಮಾಜವು ಅದರ ವಿರುದ್ಧ ಪ್ರಜಾಸತ್ತಾತ್ಮಕವಾದಂತಹ ಪ್ರಚಂಡ ಆಂದೋಲನಕ್ಕೆ ಕರೆ ಕೊಡುವುದು ಅನಿವಾರ್ಯವಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಹಿಂದು ಜಾಗರಣ ವೇದಿಕೆ ನೀಡಬಯಸುತ್ತದೆ.

ಮತ್ತೊಮ್ಮೆ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ವರ್ತಿಸಬೇಕು ರಾಜಕೀಯ ಪಕ್ಷಗಳ ಆಡಳಿತದ ಕೈಗೊಂಬೆ ಆಗಬಾರದೆಂದು ಆ ಮೂಲಕ ಬಹುಸಂಖ್ಯಾತ ಸಮಾಜದ ಸ್ವಾತಂತ್ರ್ಯವನ್ನ ಹತ್ತಿಕ್ಕುವ ಕ್ರಮಕ್ಕೆ ಕೈಹಾಕಬಾರದೆಂದು ಹಿಂದು ಜಾಗರಣ ವೇದಿಕೆಯು ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

[t4b-ticker]
error: Content is protected !!