ಗೃಹಲಕ್ಷ್ಮೀ ಯೋಜನೆಯ 20ನೇ ಕಂತು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಜನರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ ಮತ್ತು ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಮಹದಾಯಿ ಯೋಜನೆಗೆ ಪರಿಸರವಾದಿಗಳು ಅಡ್ಡಿಪಡಿಸಬಾರದು ಎಂದು ಅವರು ಮನವಿ ಮಾಡಿದ್ದು, ಕಮಲ್ ಹಾಸನ್ ಅವರು ಕನ್ನಡದ ಕುರಿತು ನೀಡಿದ ಹೇಳಿಕೆಗೆ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.
ಬೆಳಗಾವಿ : ಗೃಹಲಕ್ಷ್ಮೀ ಯೋಜನೆಯ 19 ಕಂತು ಈಗಾಗಲೇ ಹಾಕಲಾಗಿದೆ. ಶೀಘ್ರವೇ 20ನೇ ಕಂತನ್ನೂ ಹಾಕುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯ ಗೃಹ ಕಚೇರಿಯಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ” ಗೃಹ ಲಕ್ಷ್ಮೀ ಯೋಜನೆಯ 19 ಕಂತು ಈಗಾಗಲೆ ಹಾಕಲಾಗಿದೆ. ಶೀಘ್ರವೇ 20ನೇ ಕಂತನ್ನೂ ಹಾಕುತ್ತೇವೆ. ಮಾರ್ಚ್ ತಿಂಗಳದ್ದು ಸ್ವಲ್ಪ ತಾಂತ್ರಿಕ ಸಮಸ್ಯೆಯಾಗಿದೆ, ಏಪ್ರಿಲ್ ಹಣ ಇಷ್ಟರಲ್ಲೇ ಜಮಾ ಆಗಲಿದೆ ” ಎಂದು ತಿಳಿಸಿದರು. (ಗೃಹಲಕ್ಷ್ಮೀ ಸಂಘ ಆರಂಭಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್)
ಸರಕಾರ 2 ವರ್ಷ ಪೂರೈಸಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಜನರ ಜೀವನದಲ್ಲಿ ಒಳ್ಳೆಯದಾಗಲಿ, ಜನರಿಗೆ ಅನುಕೂಲವಾಗಲಿ ಎನ್ನುವ ನೀತಿ, ಸಿದ್ದಾಂತದಿಂದ ಆಡಳಿತ ನಡೆಸುತ್ತಿದೆ. ನಾವು ಚುನಾವಣೆಗೆ ಮುನ್ನ ನೀಡಿದ ಎಲ್ಲ ವಾಗ್ದಾನಗಳನ್ನೂ ಈಡೇರಿಸಿದ್ದೇವೆ. ಹಾಗಾಗಿ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಉಪಮುಖ್ಯಮಂತ್ರಿಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಇನ್ನಷ್ಟು ಶಕ್ತಿ ತುಂಬುತ್ತಾರೆ ಎನ್ನುವ ಭರವಸೆ ಇದೆ. ನಾವು ಅಧಿಕಾರಕ್ಕೆ ಬಂದ ತಕ್ಷಣ ಸಂವಿಧಾನ ಪೀಠ ಓದು ಜಾರಿಗೆ ತಂದಿದ್ದೇವೆ.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವುದು ನಮ್ಮ ತತ್ವ. ಮಹಿಳೆಯರ ಸಬಲೀಕರಣ ಗುರಿ ಇಟ್ಟುಕೊಂಡು ಹಲವಾರು ಯೋಜನೆ ತಂದಿದ್ದೇವೆ. ಈ ದಿಸೆಯಲ್ಲಿ ದೃಢ ಹೆಜ್ಜೆ ಇಟ್ಟಿದ್ದೇವೆ ಎಂದು ಅವರು ಹೇಳಿದರು.
ಕಮಲ್ ಹಾಸನ್ ಕ್ಷಮೆ ಕೇಳಲಿ
ಕನ್ನಡದ ಕುರಿತು ತಪ್ಪು ಹೇಳಿಕೆ ನೀಡಿರುವ ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದರೆ ಮುಗಿದು ಹೊಗುತ್ತದೆ. ಕನ್ನಡಿಗರು ಹೃದಯವಂತರು, ಕ್ಷಮಿಸುತ್ತಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಹಿರಿಯರಾದ ಅವರು ಕ್ಷಮೆ ಕೇಳಿ ವಿವಾದವನ್ನು ಮುಗಿಸಬೇಕು. ಅನಗತ್ಯವಾಗಿ ಮುಂದುವರಿಸಬಾರದು ಎಂದು ಸಚಿವರು ಹೇಳಿದರು.
ಪರಿಸರವಾದಿಗಳು ಸಹಕಾರ ಕೊಡಲಿ
ಮಹದಾಯಿ ಯೋಜನೆ ವಿರುದ್ಧ ಪರಿಸರ ವಾದಿಗಳು ಈಗ ಹೋರಾಟ ನಡೆಸುತ್ತಿರುವ ಕುರಿತು ಪ್ರಶ್ನಿಸಿದಾಗ, ಬಹಳ ವರ್ಷಗಳ ಹೋರಾಟದ ಫಲವಾಗಿ ಮಹದಾಯಿ ಯೋಜನೆ ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಇದಕ್ಕೆ ಪರಿಸರವಾದಿಗಳು ಅಡ್ಡಿಪಡಿಸಬಾರದು ಎಂದು ವಿನಂತಿಸುತ್ತೇನೆ. ಜನರ ಹಗೂ ಜಾನುವಾರುಗಳ ಜೀವದ ಪ್ರಶ್ನೆ ಇದರಲ್ಲಿದೆ. ದಯಮಾಡಿ ಅಡ್ಡಿಪಡಿಸಬೇಡಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದರು.
ಪರಿಸರವಾದಿಗಳ ಹೋರಾಟ ಗೋವಾ ಪ್ರಾಯೋಜಿತ ಎನ್ನುವ ಆರೋಪವಿದೆಯಲ್ಲ ಎನ್ನುವ ಪ್ರಶ್ನೆಗೆ, ಇದು ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಷಯ ಮಾತನಾಡುವುದಿಲ್ಲ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ, ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ, ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ. ಅವರು ಎಲ್ಲ ಶಾಸಕರ ಅಭಿಪ್ರಾಯ ಪಡೆದು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧಳಾಗಿ ನಡೆದುಕೊಳ್ಳುವವಳು, ಶಿಸ್ತು ಪಾಲಿಸುವವಳು. ಈ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.













































