ಮಂಗಳೂರು ಖಾಕಿ ಕ್ರಮಕ್ಕೆ ಶೋಭಾ ಕರಂದ್ಲಾಜೆ ಗರಂ: ಕರ್ನಾಟಕ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಕೇಂದ್ರ ಸಚಿವೆ ಪತ್ರ!

Picture of Savistara

Savistara

Bureau Report

ಮಂಗಳೂರಿನಲ್ಲಿ ಕೋಮುಗಲಭೆಯಿಂದ ಆಶ್ರಫ್, ಸುಹಾಸ್ ಶೆಟ್ಟಿ ಹಾಗೂ ಅಬ್ದುಲ್ ರೆಹ್ಮಾನ್ ಕೊಲೆ ಪ್ರಕರಣಗಳ ನಡೆದಿತ್ತು. ಆ ಬೆನ್ನಲ್ಲೇ ಪೊಲೀಸರು ಜಿಲ್ಲೆಯಲ್ಲಿ ಹದ್ದಿನ ಕಣ್ಣು ಇಟ್ಟಿದ್ದರು. ಜೊತೆಗೆ ಹಿಂದುತ್ವ ಸಂಘಟನೆಗಳ ಮುಖಂಡರು ಹಾಗೂ ಬಿಜೆಪಿ ಮುಖಂಡರ ಮನೆಗಳಿಗೆ ಪೊಲೀಸರು ತೆರಳುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಈ ಬಗ್ಗೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು: ಆಶ್ರಫ್, ಸುಹಾಸ್ ಶೆಟ್ಟಿ ಹಾಗೂ ಅಬ್ದುಲ್ ರೆಹ್ಮಾನ್ ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕೆಲವೊಂದು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಂಘಪರಿವಾರ ಹಾಗೂ ಎಸ್ ಡಿ ಪಿ ಐ ನಲ್ಲಿ ಗುರುತಿಸಿಕೊಂಡಿರುವ ಹಾಗೂ ಮತೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ವಿರುದ್ಧ ಗಡಿಪಾರು ಕೈಗೊಂಡಿದೆ. ಆದರೆ ಪೊಲೀಸರ ಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ‌.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಡರಾತ್ರಿ ಹಿಂದುತ್ವ ಸಂಘಟನೆಗಳ ಮುಖಂಡರು ಹಾಗೂ ಬಿಜೆಪಿ ಮುಖಂಡರ ಮನೆಗಳಿಗೆ ಪೊಲೀಸರು ತೆರಳುತ್ತಿದ್ದಾರೆ ಎಂದು ಆರೋಪಿಸಿ, ಪ್ರಾಧಿಕಾರದ ಅಧ್ಯಕ್ಷ ನ್ಯಾ. ಎನ್.ಕೆ. ಸುಧೀಂಧ್ರ ರಾವ್ ಗೆ ಪತ್ರ ಮೂಲಕ ದೂರು ನೀಡಿದ್ದಾರೆ. ಅಲ್ಲದೆ, ದ.ಕ. ಪೊಲೀಸರ ಕ್ರಮದ ವಿಚಾರವಾಗಿ ತುರ್ತು ಮಧ್ಯ ಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ.

ಇಷ್ಟೇ ಅಲ್ಲದೆ, ಪೊಲೀಸರ ಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದಾರೆ. ಅಲ್ಲದೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ಪತ್ರದ ಪ್ರತಿಯನ್ನು ಶೋಭಾ ಕರಂದ್ಲಾಜೆ ರವಾನಿಸಿದ್ದಾರೆ‌.

ಕೇಸ್‌ ಹಾಕಿ, ಗಡಿಪಾರು ಮಾಡಿದ್ರೆ ಭಯ ಬರುತ್ತೆ ಅನ್ಕೊಂಡಿದ್ರೆ ಅದು ನಿಮ್ಮ ಭ್ರಮೆ; ಕಾಂಗ್ರೆಸ್‌ಗೆ ನಳಿನ್‌ ಕುಮಾರ್‌ ಕಟೀಲ್‌ ವಾರ್ನ್‌

ಪತ್ರದಲ್ಲಿ ಏನಿದೆ?

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಹಿಂದೂ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

ವಿಶೇಷವಾಗಿ ಆತಂಕಕಾರಿ ವಿಷಯವೆಂದರೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಸ್ವರೂಪವಾಗಿದೆ. ಪೊಲೀಸ್ ಅಧಿಕಾರಿಗಳು ತಡರಾತ್ರಿಯಲ್ಲಿ ಈ ವ್ಯಕ್ತಿಗಳ ಮನೆಗಳಿಗೆ ಭೇಟಿ ನೀಡಿ, ಅವರ ಮನೆಗಳ ಫೋಟೋ ತೆಗೆದುಕೊಂಡು, ಯಾವುದೇ ಕಾನೂನು ವಾರಂಟ್‌ಗಳು ಅಥವಾ ಕಾನೂನು ಪ್ರಕ್ರಿಯೆ ಇಲ್ಲದೆ ಜಿಪಿಎಸ್ ಸೆರೆಹಿಡಿಯುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಕ್ರಮಗಳು ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತವೆ, ಇದರಲ್ಲಿ ಗೌಪ್ಯತೆಯ ಹಕ್ಕು ಮತ್ತು ಆರ್ಟಿಕಲ್ 21 ರ ಅಡಿಯಲ್ಲಿ ಬದುಕುವ ಹಕ್ಕು ಹಾಗೂ ಆರ್ಟಿಕಲ್ 14 ರ ಅಡಿಯಲ್ಲಿ ಸಮಾನತೆಯ ಹಕ್ಕು ಸೇರಿವೆ.

ಪೊಲೀಸ್ ಬದಲಾವಣೆಯಾದ ಬಳಿಕ ಬೆದರಿಕೆ

ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಇತ್ತೀಚೆಗೆ ಬದಲಾವಣೆಯಾದ ಬಳಿಕ ಈ ರೀತಿಯ ಬೆದರಿಕೆಯ ಮಾದರಿ ಪ್ರಾರಂಭವಾಗಿದೆ. ಬಹುತೇಕ ಹಿಂದೂ ಸಮುದಾಯದ ಸದಸ್ಯರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದು ಕಳವಳಕಾರಿಯಾಗಿದೆ.

ಪೊಲೀಸರಿಂದ ಕಿರುಕುಳಕ್ಕೊಳಗಾದವರಲ್ಲಿ ಅನೇಕರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಅಥವಾ ಕಾನೂನುಬಾಹಿರ ಚಟುವಟಿಕೆಯ ಇತಿಹಾಸವಿಲ್ಲ. ಹೀಗಿದ್ದರೂ ರಾಜಕೀಯ ಸೇಡಿನ ಸಾಧನವಾಗಿ ಪೊಲೀಸ್ ಪಡೆಯನ್ನು ದುರುಪಯೋಗ ಪಡಿಸಲಾಗುತ್ತಿದೆ.

ನಾಗರಿಕರನ್ನು ಬೆದರಿಸಲು ಮತ್ತು ಕಿರುಕುಳ ನೀಡಲು ರಾಜ್ಯ ಸರ್ಕಾರ ವ್ಯವಸ್ಥೆಯನ್ನು ಬಳಸುತ್ತಿದೆ. ಇದು ಜನರ ಸಾಂವಿಧಾನಿಕ ರಕ್ಷಣೆಗಳನ್ನು ಉಲ್ಲಂಘಿಸುವುದಲ್ಲದೆ, ಪೊಲೀಸ್ ನಡವಳಿಕೆಯ ಕುರಿತು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಅಂತಹ ಕ್ರಮಗಳು, ಅನಿಯಂತ್ರಿತವಾಗಿ ಮುಂದುವರಿಯಲು ಬಿಟ್ಟರೆ, ಕಾನೂನು ಜಾರಿ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುವ ಮತ್ತು ಈ ಪ್ರದೇಶದಲ್ಲಿ ಕೋಮು ಸಾಮರಸ್ಯವನ್ನು ಕದಡುವ ಅಪಾಯವಿದೆ‌.

[t4b-ticker]
error: Content is protected !!