ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಬೆಂಗಳೂರು: “ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿವೇಚನೆಯಿಂದ ನಡೆದುಕೊಳ್ಳಬೇಕಿತ್ತು. ಕಾಲ್ತುಳಿತ ಘಟನೆಗೆ ರಾಜ್ಯ ಸರ್ಕಾರವೇ ಜವಾಬ್ದಾರಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ ಅವರು ಗಾಯಾಳುಗಳನ್ನು ಮಾತನಾಡಿಸಿ, ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಪೂರ್ವಸಿದ್ಧತೆ ಇಲ್ಲದೇ ಕಾರ್ಯಕ್ರಮ ನಿಯೋಜನೆ ಮಾಡುವ ಅನಿವಾರ್ಯತೆ ಏನಿತ್ತು?” ಎಂದು ಪ್ತಶ್ನಿಸಿದರು.
“ವಿಧಾನಸೌಧದ ಮುಂಭಾಗ ಸಂಭ್ರಮಾಚರಣೆ ಮಾಡುವುದು ಬೇಡ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದರೂ, ಮುಖ್ಯಮಂತ್ರಿಗಳು ಒತ್ತಾಯ ಮಾಡಿ ಆಗಲೇಬೇಕು ಎಂದು ಸೂಚನೆ ನೀಡಿದ್ದರು. ವಿಧಾನಸೌಧದ ಮುಂಭಾಗ ಸಂಭ್ರಮಾಚರಣೆಗೆ ಅನುವು ಮಾಡಿಕೊಡಲಾಯಿತು. ಅಲ್ಲಿಯೂ ಸಹ ನೂಕುನುಗ್ಗಲು ಉಂಟಾಯಿತು. ಚಪ್ಪಲಿ ಎಸೆದಾಡಿದರು. ವಿರಾಟ್ ಕೊಹ್ಲಿ ಅವರು ಸಹ ಬೇಸರ ಮಾಡಿಕೊಂಡು ಬಸ್ ಹತ್ತಿ ಹೋದರು “ಎಂದು ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ: “ರಾಜಕಾರಣಿಗಳು, ಮಂತ್ರಿಗಳು ಹಾಗೂ ಅಧಿಕಾರಿಗಳ ಮಕ್ಕಳು ಆಟೋಗ್ರಾಫ್ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು. ದೇಶದಲ್ಲೆಡೆ ಸಂಭ್ರಮಾಚರಣೆ ಮಾಡಬೇಕಾದ ಸಂದರ್ಭದಲ್ಲಿ ಈಗ ಸೂತಕದ ಮನೆಯಾಗಿದೆ. ರಾಜ್ಯ ಸರ್ಕಾರದ ಬೇಜವಾಬ್ದಾರಿ, ಪ್ರಚಾರದ ಹುಚ್ಚಿನಿಂದ ಈ ಘಟನೆ ನಡೆದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ” ಎಂದು ಕಿಡಿಕಾರಿದರು.
“ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು” ಎಂದು ಆಗ್ರಹಿಸಿದರು.
ಕೇಂದ್ರ ಸಚಿವ ಹೆಚ್.ಡಿ.ಕೆ ಬೇಸರ:
“ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭ ಉಂಟಾದ ಕಾಲ್ತುಳಿತಕ್ಕೆ ಹತ್ತಕ್ಕೂ ಹೆಚ್ಚು ಜನರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ” ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ಗೆಲುವಿನ ಸಂಭ್ರಮಕ್ಕೆ ಮುನ್ನವೇ ಮುಗ್ಧರ ಜೀವ ನಷ್ಟವಾಗಿರುವುದು ನನಗೆ ಅತೀವ ದುಃಖ ತಂದಿದೆ. ಸರಿಯಾದ ಪೂರ್ವಸಿದ್ಧತೆ ಮಾಡಿಕೊಳ್ಳದೇ, ಯಾವುದೇ ಮುನ್ನೆಚ್ಚರಿಕೆ ವಹಿಸದಿರುವುದೇ ಈ ಮಹಾ ದುರಂತಕ್ಕೆ ನೇರ ಕಾರಣ. ದುರಂತದ ಹೊಣೆಯನ್ನು ರಾಜ್ಯ ಕಾಂಗ್ರೆಸ್ ಸರಕಾರವೇ ಹೊತ್ತುಕೊಳ್ಳಬೇಕು” ಎಂದಿದ್ದಾರೆ.
“ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸುವುದರ ಜತೆಗೆ ಮೃತರ ಕುಟುಂಬಗಳ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕು” ಎಂದು ಆಗ್ರಹಿಸಿದ್ದಾರೆ.”ಕ್ರೀಡಾಂಗಣ ಹಾಗೂ ವಿಧಾನಸೌಧದ ಬಳಿ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಕ್ರಿಕೆಟ್ ಪ್ರೇಮಿಗಳು ಗಾಬರಿ, ಆತುರಕ್ಕೆ ಒಳಗಾಗದೆ ಕ್ಷೇಮವಾಗಿ ಮನೆ ತಲುಪಬೇಕು ಎಂಬುದು ನನ್ನ ಕಳಕಳಿ. ಪೊಲೀಸರು ಈ ನಿಟ್ಟಿನಲ್ಲಿ ತುರ್ತುಕ್ರಮ ವಹಿಸಿ ಜನರಿಗೆ ನೆರವಾಗಬೇಕು” ಎಂದು ಹೆಚ್ ಡಿಕೆ ಒತ್ತಾಯಿಸಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಬೊಮ್ಮಾಯಿ ಆಗ್ರಹ:
ಐಪಿಎಲ್ನಲ್ಲಿ ಆರ್‌ಸಿಬಿ ತಂಡ ಜಯಗಳಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಾವುದೇ ಸರಿಯಾದ ಸಿದ್ದತೆ ಇಲ್ಲದೇ ತರಾತುರಿಯಲ್ಲಿ ಏರ್ಪಡಿಸಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಹತ್ತಕ್ಕೂ ಹೆಚ್ಚು ಜನ ಅಮಾಯಕರು ಕಾಲ್ತುಳಿತದಲ್ಲಿ ಸಾವಿಗೀಡಾಗಿದ್ದು ಅತ್ಯಂತ ದುಖದ ಸಂಗತಿ. ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.ಈ ಕುರಿತು ಎಕ್ಸ್ ಮಾಡಿರುವ ಅವರು, ಯಾವುದೇ ಪೂರ್ವ ತಯಾರಿ ಇಲ್ಲದೆ ಅವಸರದಲ್ಲಿ ಎರಡು ಕಾರ್ಯಕ್ರಮ ಮಾಡಿದ್ದು, ಅದರಲ್ಲೂ ಎರಡೂ ಕಾರ್ಯಕ್ರಮಗಳಲ್ಲಿ ಅಷ್ಡೊಂದು ಜನ ಸೇರಲು ಅವಕಾಶ ಮಾಡಿಕೊಟ್ಟಿದ್ದು, ರಾಜ್ಯ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ವಿಶ್ವಕಪ್ ಮತ್ತು ಇತರ ಕಪ್ ಗೆದ್ದಾಗ ಮುಂಬೈನಲ್ಲಿ ಮೆರವಣಿಗೆ ಮಾಡುವ ಮುಖಾಂತರ ಜನರಿಗೆ ಅಲ್ಲಲ್ಲಿ ಕ್ರಿಕೆಟ್ ಆಟಗಾರರನ್ನು ನೋಡಲು ಅವಕಾಶ ಕಲ್ಪಿಸಿದ್ದು ಸಾಕಷ್ಟು ಉದಾಹರಣೆ ಇದೆ. ಈ ವಿಚಾರದಲ್ಲಿ ಜನರ ಸಂಖ್ಯೆಯ ಅಂದಾಜು ಇಲ್ಲದೆ ಆರ್‌ಸಿಬಿ ಪರವಾಗಿರುವ ಜನರ ಭಾವನಾತ್ಮಕ ಸಂಬಂಧ ಅರಿಯದೆ ಪೊಲಿಸರು ಮತ್ತು ಆಯೋಜಕರ ನಡುವೆ ಹೊಂದಾಣಿಕೆ ಇಲ್ಲದಿರುವುದು ಸ್ಪಷ್ಟವಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಕಾರಣ. ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ತಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಆರಗ ಜ್ಞಾನೇಂದ್ರ ಆರೋಪ:
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರ ನೇರ ಹೊಣೆ ಎಂದು ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕೂಡ ಆರೋಪಿಸಿದ್ದಾರೆ.ತೀರ್ಥಹಳ್ಳಿಯಲ್ಲಿ ಮಾತನಾಡಿರುವ ಅವರು, ಐಪಿಎಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಆರ್ ಸಿ ಬಿ ಗೆದ್ದ ಸಂಭ್ರಮದಲ್ಲಿ ನಡೆದ ವೇಳೆ ಕಾಲ್ತುಳಿತದಲ್ಲಿ 11 ಜನ ಅಮಾಯಕರು ಬಲಿಯಾದ ಸುದ್ದಿ ಕೇಳಿ ನೋವಾಗಿದೆ. ಸರ್ಕಾರದ ಮೂಗಿನ ಅಡಿಯಲ್ಲಿ ಈ ಘಟನೆ ನಡೆದಿದೆ. ಇಂದು ಅಪಾರ ಸಂಖ್ಯೆಯ ಜನ ಸೇರುತ್ತಾರೆ ಎಂಬ ಮಾಹಿತಿ ಇದ್ದರೂ ಸಹ ಭದ್ರತಾ ವ್ಯವಸ್ಥೆಯನ್ನು ಯಾಕೆ ಮಾಡಿಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.













































