ಮಂಗಳೂರಿನ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಇದೀಗ ಹಿಂದೂ ಮುಖಂಡರ ಮನೆಗಳ ಶೋಧ ಆರಂಭಿಸಿದ್ದರೆ. ಈ ಪೈಕಿ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದಿರು ಹೆಸರು ಭಜರಂಗದಳ ಮುಖಂಡ ಭರತ್ ಕುಮ್ದೆಲ್ ಮನೆಯನ್ನು ಪೊಲೀಸರು ಶೋಧಿಸಿದ್ದಾರೆ. ಮನೆ ಬಾಗಿಲು ಒಡೆದು ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಮಂಗಳೂರು(ಜೂ.05) ಪ್ರಕ್ಷುಬ್ದಗೊಂಡಿರುವ ಮಂಗಳೂರಿನಲ್ಲಿ ಇದೀಗ ಪೊಲೀಸರ ಕಾರ್ಯಾಚರಣೆಗಳು ತೀವ್ರಗೊಳ್ಳುತ್ತಿದೆ. ಒಂದೆಡೆ ಹಿಂದೂ ನಾಯಕರ ಟಾರ್ಗೆಟ್ ಮಾಡಲಾಗುತ್ತಿದೆ ಅನ್ನೋ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಆರೋಪದ ಬೆನ್ನಲ್ಲೇ ಇದೀಗ ಪೊಲೀಸರು ಶೋಧ ಮತ್ತೆ ಪರ ವಿರೋಧಕ್ಕೆ ಕಾರಣವಾಗಿದೆ. ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ ಸಂಬಂಧ ಇದೀಗ ಪೊಲೀಸರು ಭಜರಂಗದಳ ಮುಖಂಡ ಭರತ್ ಕುಮ್ದೆಲ್ ಮನೆ ಶೋಧಿಸಿದ್ದರೆ. ಮನೆ ಬಾಗಿಲು ಒಡೆದು ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಶೋಧ
ಅಬ್ದುಲ್ ರೆಹಮಾನ್ ಹತ್ಯೆ ಸೇರಿದಂತೆ ಸಾಲು ಸಾಲು ಹತ್ಯೆ ಪ್ರಕರಣಗಳು ದಕ್ಷಿಣ ಕನ್ನಡದ ಶಾಂತಿ ಕೆಡೆಸಿದೆ. ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಬಂಟ್ವಾಳದಲ್ಲಿ ಅಬ್ದುಲ್ ರಹೆಮಾನ್ ಹತ್ಯೆ ನಡದಿದೆ. ಈ ಪ್ರಕರಣ ಸಂಬಂಧ ಹಲವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ಪೈಕಿ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣದ ಹಿಂದೆ ಕೆಲ ಹಿಂದೂ ಮುಖಂಡರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಈ ಪೈಕಿ ಭಜರಂಗದಳ ಮುಖಂಡ ಭರತ್ ಕುಮ್ದೆಲ್ ಹೆಸರು ಕೂಡ ಒಂದು. ಇದೀಗ ಪೊಲೀಸರು ನ್ಯಾಯಾಲದದಿಂದ ಸರ್ಚ್ ವಾರೆಂಟ್ ಪಡೆದು ಭರತ್ ಕುಮ್ದೆಲ್ ಮನೆ ಶೋಧಿಸಿದ್ದಾರೆ.
ತಲೆಮರೆಸಿಕೊಂಡಿರುವ ಭರತ್ ಕುಮ್ದೆಲ್
ಅಬ್ದುಲ್ ರಹಮಾನ್ ಹತ್ಯೆ ಪ್ರಕರಣ ಸಂಬಂಧ ತನಿಖೆ ತೀವ್ರಗೊಳ್ಳುತ್ತಿದೆ. ಪೊಲೀಸರ ಮಾಹಿತಿ ಪ್ರಕಾರ ಭರತ್ ಕುಮ್ದೆಲ್ ತಲೆಮರೆಸಿಕೊಂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ನಿವಾಸಿಯಾಗಿರುವ ಕುಮ್ಡೇಲ್ ತಲೆಮರೆಸಿಕೊಂಡಿರುವ ಕಾರಣ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಮನೆ ಶೋಧಿಸಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಮನೆ ಬಾಗಿಲು ಒಡೆದು ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಇನ್ನು ಶಾಂತಿ ಕದಡುತ್ತಿರುವ, ಪ್ರಚೋದನಕಾರಿ ಭಾಷಣ ಮಾಡುತ್ತಿರುವ ಆರೋಪದಡಿ ಹಲವರನ್ನು ಗಡೀಪಾರು ಮಾಡಲು ಪೊಲೀಸರು ಮುಂದಾಗಿದ್ದಾರೆ.
ಗಡೀಪಾರು ವಿರೋಧಿಸಿದ ಯುವಕನ ವಿರುದ್ಧ ಪ್ರಕರಣ
ಹಿಂದೂ ಮುಖಂಡ ಅರುಣ್ ಪುತ್ತಿಲ ಗಡೀಪಾರು ಮಾಡಲು ಪೊಲೀಸರು ಮುಂದಾಗಿದ್ದಾರೆ. ಹಲವು ಹಿಂದೂ ನಾಯಕರನ್ನು ಪ್ರಚೋದನಕಾರಿ ಭಾಷಣ ಆರೋಪದಡಿ ಗಡೀಪಾರು ಮಾಡಲು ಲಿಸ್ಟ್ ತಯಾರಿಸಿದ್ದಾರೆ. ಈ ಪೈಕಿ ಅರುಣ್ ಪುತ್ತಿಲ ಗಡೀಪಾರಿಗೆ ಅಕ್ಷೇಪ ವ್ಯಕ್ತಪಡಿಸಿ ಯುವಕ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ. ಕಬಕ ನಿವಾಸಿ ಗಣೇಶ್ ಪ್ರಸಾದ್ ಈ ವಿಡಿಯೋ ಮಾಡಿ ಹರಿಬಿಟ್ಟ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಬ್ದುಲ್ ರೆಹಮಾನ್ ಮನೆಗೆ ಬಿ.ಕೆ.ಹರಿಪ್ರಸಾದ್ ಭೇಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಹಿನ್ನಲೆ ಇಂದು ಮಂಗಳೂರಿಗೆ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಭೇಟಿ ನೀಡಲಿದ್ದಾರೆ. ಕಾಂಗ್ರೆಸ್ ನಿಯೋಗ ಮಂಗಳೂರು ಭೇಟಿ ನಡುವೆ ಬಿಕೆ ಹರಿಪ್ರಾಸದ್ ಪ್ರತ್ಯೇಕ ಭೇಟಿ ಮಾಡುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಂಗಳೂರಿಗೆ ಆಗಮಿಸಲಿರುವ ಬಿಕೆ ಹರಿಪ್ರಸಾದ್ ಮಂಗಳೂು ಸರ್ಕ್ಯೂಟ್ ಹೌಸ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಬಳಿಕ ಬಿಕೆ ಹರಿಪ್ರಸಾದ್ ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಮುಸ್ಲಿಮ್ ಉಲಾಮಾ ಕೋ ಆರ್ಡಿನೇಷನ್ ಕರ್ನಾಟಕ ಖಾಜಿಗಳ ಭೇಟಿ ಮಾಡಲಿದ್ದಾರೆ. ಇದೇ ವೇಳೆ ಹತ್ಯೆಯಾದ ಅಬ್ದುಲ್ ರಹೆಮಾನ್ ಮನೆಗೆ ಭೇಟಿ ನೀಡಲಿದ್ದಾರೆ. ಕೊಳ್ತಮಜಲಿನಲ್ಲಿರುವ ಅಬ್ದುಲ್ ರಹಮಾನ್ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಲಿದ್ದಾರೆ.













































