ಪ್ಯಾರಿಸ್: ನೇಪಾಳ ಹಿಂಸಾಚಾರದ ಕಾವು ಇನ್ನೂತಣ್ಣಗಾಗದಿರುವ ಮಧ್ಯೆಯೇ ಅತ್ತ ಐರೋಪ್ಯ ಒಕ್ಕೂಟದ ಫ್ರಾನ್ಸ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಆಕ್ರೋಶಿತರ ಕಿಚ್ಚಿಗೆ ರಾಜಧಾನಿ ಪ್ಯಾರಿಸ್, ಬೋರ್ಡೆಕ್ಸ್ ಮಾರ್ಸಿಲ್ಲೆಯಂಥ ಕೆಲವು ನಗರಗಳು ಧಗಧಗಿಸುತ್ತಿದೆ. ಪ್ರತಿಭಟನಾಕಾರರು ಬಾಟಲಿ ಸೇರಿ ಕೈಗೆ ಸಿಕ್ಕ ವಸ್ತುಗಳನ್ನು ಪೊಲೀಸರ ಮೇಲೆ ಎಸೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.ಸಂಸತ್ತಿನ ವಿಶ್ವಾಸಮತ ಕಳೆದುಕೊಂಡ ಪ್ರಧಾನಿ ಫ್ರಾಂಕೊಯಿಸ್ ಬೆರೊಯೊ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಬಲಪಂಥೀಯ ಸಂಘಟನೆಗಳಿಂದ ಆಕ್ರೋಶ ಭುಗಿಲೆದ್ದಿದೆ. ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಆನ್ ಲೈನ್‌ನಲ್ಲಿ ಶುರುವಾದ ‘ಬ್ಲಾಕ್ ಎವರಿಥಿಂಗ್’ (ಎಲ್ಲವನ್ನೂ ನಿರ್ಬಂಧಿಸಿ) ಆಂದೋಲನವು ತೀವ್ರ ಸ್ವರೂಪ ಪಡೆದಿದೆ. ಪ್ರತಿಭಟನಾಕಾರರು ಪ್ಯಾರಿಸ್ ಸೇರಿ ವಿವಿಧ ನಗರಗಳ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ, ಸಿಕ್ಕ ಸಿಕ್ಕ ಕಡೆ ಕಸ ಸುರಿದು ಡಸ್ಟ್ ಬಿನ್ ಸಮೇತ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಕಟ್ಟಡಗಳು ಹಾಗೂ ವಾಹನಗಳೂ ಕ್ರೋಧಾಗ್ನಿಗೆ ಆಹುತಿಯಾದವು.ಪ್ರತಿಭಟನೆಗೂ ಮುನ್ನವೇ ಅಧ್ಯಕ್ಷ ಮಾಕ್ರನ್ ಅವರು ತಮ್ಮ ನಂಬಿಗಸ್ಥ ನಾಯಕ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೊರ್ನೊ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಿದ್ದು, ಇದರೊಂದಿಗೆ 2 ವರ್ಷದ ಅವಧಿಯಲ್ಲಿ ಫ್ರಾನ್ಸ್ ಐದು ಪ್ರಧಾನಿಗಳನ್ನು ನೋಡಿದಂತಾಗಿದೆ.
ನೂರಾರು ಜನರ ಬಂಧನ: ಗಲಭೆಕೋರರನ್ನುನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದರು. ರಸ್ತೆ ಬ್ಲಾಕ್ ಮಾಡಿ, ಕಸ ಸುರಿದು ಬೆಂಕಿ ಹಚ್ಚಿದ 200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಭದ್ರತೆಗೆ 80 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ರೈಲು ಸೇವೆ ಸ್ತಬ್ಧ: ಪಶ್ಚಿಮ ಭಾಗದ ರೆನ್ನೆಸ್ ನಗರದಲ್ಲಿಪ್ರತಿಭಟನಾಕಾರರರ ಆಕ್ರೋಶಕ್ಕೆ ಬಸ್ ಆಹುತಿಯಾಗಿದೆ. ವಿದ್ಯುತ್ ಮಾರ್ಗಕ್ಕೆ ಅಡೆತಡೆಯಾಗಿದ್ದರಿಂದ ರೈಲು ಸೇವೆ ಸ್ತಬ್ಧವಾಗಿದೆ ಎಂದು ಫ್ರಾನ್ಸ್ ಆಂತರಿಕ ಭದ್ರತೆ ಸಚಿವ ಬ್ರುನೊ ರಿಟೆಲ್ಲಿಯೊ ತಿಳಿಸಿದ್ದಾರೆ.ವೆಚ್ಚ ತಗ್ಗಿಸುವ ಉದ್ದೇಶದಿಂದ ಸೋಮವಾರ ಪ್ರಧಾನಿ ಬೆರೊಯ ಅವರು ಬಜೆಟ್‌ನಲ್ಲಿ 44 ಬಿಲಿಯನ್ ಯುರೊ ಉಳಿಸುವ ಯೋಜನೆ ಪ್ರಸ್ತಾಪಿಸಿದ್ದರು. ಇದರಲ್ಲಿ ಕಲ್ಯಾಣ ಯೋಜನೆಗಳ ಸ್ಥಗಿತ, ಸಾರ್ವಜನಿಕ ವೆಚ್ಚ ಕಡಿತ ಸೇರಿ ಹಲವು ಕ್ರಮಗಳಿದ್ದವು. ಇದಕ್ಕೆ ವ್ಯಾಪಕ ಟೀಕೆ ಕೇಳಿಬಂದಿತ್ತು. ಕೊನೆಗೆ ಅವರು ಸಂಸತ್ತಿನಲ್ಲಿ ವಿಶ್ವಾಸಮತ ಕಳೆದುಕೊಂಡು ಪ್ರಧಾನಿ ಹುದ್ದೆ ತ್ಯಜಿಸಿದರು.











































