ವಿವಿಧ ಬಗೆಯ ಸಾಮಾಜಿಕ ಪಿಂಚಣಿ ಯೋಜನೆಯ ದುರುಪಯೋಗ ತಡೆಗೆ ಸಮರೋಪಾದಿಯಲ್ಲಿ ಪರಿಶೀಲನಾ ಅಭಿಯಾನ ಕೈಗೊಳ್ಳಲು ಸಿದ್ಧತೆ ಆರಂಭಿಸಿರುವ ಸರ್ಕಾರ 29 ಲಕ್ಷ ಅನರ್ಹ ಪಿಂಚಣಿದಾರರ ಶೋಧ ಕಾರ್ಯಕ್ಕೂ ಪಣತೊಟ್ಟಿದೆ. ವರ್ಷವೊಂದರಲ್ಲಿ ಸರ್ಕಾರ ಸಾಮಾಜಿಕ ಪಿಂಚಣಿ ನೀಡುವುದಕ್ಕಾಗಿ 10,500 ಕೋಟಿ ರೂ. ವೆಚ್ಚ ಮಾಡುತ್ತಿದೆ. ಇದರಲ್ಲಿ ಲಕ್ಷಾಂತರ ಮಂದಿ ಅನರ್ಹರಿದ್ದಾರೆಂಬ ಅನುಮಾನ ಮೂಡಿದೆ. ಇದೇ ಕಾರಣಕ್ಕೆ ವಿವಿಧ ಆಯಾಮದಲ್ಲಿ ದಾಖಲೆಗಳ ತಾಳೆ ನೋಡುವ ಪ್ರಕ್ರಿಯೆ ನಡೆಸಿದ ಬಳಿಕ ನೇರವಾಗಿ ಫಲಾನುಭವಿಗಳ ಮನೆಗೆ ಭೇಟಿಕೊಟ್ಟು ವಸ್ತುಸ್ಥಿತಿ ಅರಿಯಲು ತೀರ್ಮಾನಿಸಿದೆ. ಈ ಪ್ರಕ್ರಿಯೆಗಾಗಿ ಕಂದಾಯ ಇಲಾಖೆ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಿದ್ದು, ಅದನ್ನು ಗ್ರಾಮ ಪಂಚಾಯಿತಿ ಮುಖೇನ ಬಳಸಿಕೊಂಡು ಅನರ್ಹರ ಬೇಟೆಗೆ ರೂಪುರೇಷೆ ಸಿದ್ಧಪಡಿಸಲಾಗಿದೆ.ಸರ್ಕಾರಕ್ಕೆ ಶಾಕ್: ಪಿಂಚಣಿ ಫಲಾನುಭವಿಗಳ ಮಾಹಿತಿಯನ್ನು ಅವರು ನೀಡಿರುವ ಆಧಾರ್ ನಲ್ಲಿರುವ ಮಾಹಿತಿ ಜತೆ ತಾಳೆ ನೋಡಿದಾಗ ಅನುಮಾನ ಬಲಗೊಂಡಿದೆ. ವೃದ್ಧಾಪ್ಯವೇತನ ಪಡೆಯುತ್ತಿರುವವರು 60 ಮೇಲ್ಪಟ್ಟವರಾಗಿರಬೇಕೆಂಬುದು ಸಾಮಾನ್ಯ
ನಿಯಮ. ಆದರೆ, ಆಧಾರ್ ದಾಖಲೆಯನ್ನು 40-45 ವರ್ಷ ಇರುವವರೂ ಪಡೆಯುತ್ತಿದ್ದಾರೆಂಬುದು ಕಂಡುಬಂದಿದೆ. 60 ವರ್ಷದೊಳಗಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನು ದೈಹಿಕ ಅಂಗವೈಕಲ್ಯ ಪ್ರಮಾಣ ಪತ್ರ ನೀಡಿ ಸಾಮಾಜಿಕ ಪಿಂಚಣಿ ಪಡೆಯುತ್ತಿರುವವರ ಪಟ್ಟಿಯಲ್ಲಿ ಬಹಳಷ್ಟು ಅನರ್ಹರು ಇದ್ದಾರೆಂಬ ವಿಚಾರ ಸರ್ಕಾರದ ಕಿವಿಗೆ ಬಿದ್ದಿದೆ. ಈ ಸೌಲಭ್ಯ ಪಡೆಯಲು ನಿಗದಿಪಡಿಸಿದ ಷರತ್ತು ಬದಿಗಿಡಲಾಗಿದೆ, ಬೆರಳು ತುಂಡಾದವರೂ ಸೌಲಭ್ಯ ಪಡೆಯುತ್ತಿರುವ ಪ್ರಕರಣವೂ ಕಂಡುಬಂದಿದೆ. ಸರ್ಕಾರದ ಸ್ಥಳೀಯ ಅಧಿಕಾರಿ, ಸಿಬ್ಬಂದಿಯ ಸಹಕಾರ ಇಲ್ಲದೇ ಈ ರೀತಿ ವ್ಯತ್ಯಾಸ ಸಾಧ್ಯವಿಲ್ಲ. ಈ ಕಾರಣಕ್ಕೆ ವ್ಯವಸ್ಥಿತವಾಗಿ ಅನರ್ಹರ
ಪತ್ತೆಗೆ ಕ್ರಮಕೈಗೊಳ್ಳಲಾಗುತ್ತಿದೆ.ಫಲಾನುಭವಿಗಳ ಮಾಹಿತಿ, ಆಧಾರ್‌ನಲ್ಲಿರುವ ಮಾಹಿತಿ ಎಲ್ಲವನ್ನೂ ಮೊಬೈಲ್ ಅಪ್ಲಿಕೇಷನ್ ಲ್ಲಿ ಲಭ್ಯವಾಗುವಂತೆ ಮಾಡಿ, ಫಲಾನುಭವಿಗಳು ಸಾಮಾಜಿಕ ಪಿಂಚಣಿ ಪಡೆಯಲು ಅರ್ಹರೇ ಎಂದು ಪತ್ತೆ ಮಾಡುವ ಕೆಲಸ ಶೀಘ್ರ ಆರಂಭವಾಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜನನ ಪ್ರಮಾಣ ಪತ್ರ, ವಿವಾಹ ಪ್ರಮಾಣ ಪತ್ರ, ಫಲಾನುಭವಿಯ ಮಕ್ಕಳ ಜನನ ಪ್ರಮಾಣ ಪತ್ರವನ್ನು ಬಳಸಿಕೊಂಡು ಫಲಾನುಭವಿಗಳ ಪರಿಶೀಲನೆ ನಡೆಯಲಿದೆ ಎಂದು ವಿವರಿಸಿದ್ದಾರೆ.
ಮಾಸಿಕ ನೂರು ಕೋಟಿ ಪೋಲು
ಕಳೆದ ನಾಲೈದು ವರ್ಷದಿಂದ ಮಾಸಿಕ ಒಂದು ನೂರು ಕೋಟಿ ರೂ. ಅನರ್ಹರ ಪಾಲಾಗುತ್ತಿದೆ ಎಂಬ ಅಂದಾಜಿದೆ. ಅರ್ಹರಿಗೆ ಮಾತ್ರ ಯೋಜನೆ ಲಾಭ ತಲುಪಿದರೆ ವಾರ್ಷಿಕ ಒಂದು ಸಾವಿರ ಕೋಟಿ ರೂ. ಉಳಿತಾಯವಾಗಲಿದೆ ಎಂಬುದು ಅಧಿಕಾರಿಗಳ ವಿವರಣೆಯಾಗಿದೆ.











































