
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ನೆನಪಿಸಲು ವಾಟರ್ ಬೆಲ್(ನೀರಿನ ಗಂಟೆ)ಬಾರಿಸುವ ಕುರಿತು ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಕೋರಿಕೆ ಮೇರೆಗೆ ರಾಜ್ಯ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ.
ಶಾಲೆಗಳಲ್ಲಿ ಮಕ್ಕಳಿಗೆ ಆಗಾಗೆ, ನೀರು ಕುಡಿಯಬೇಕೆಂಬ ಅರಿವು ಅಷ್ಟಾಗಿ ಇರುವುದಿಲ್ಲ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ಆಗಾಗೆ, ನೀರು ಕುಡಿಯುವಂತೆ ಜ್ಞಾಪಿಸಲು “ವಾಟರ್ ವೆಲ್ (ನೀರಿನ ಗಂಟೆ ಬಾರಿಸುವುದು ಸೂಕ್ತವಾಗಿರುತ್ತದೆ.
ಮಕ್ಕಳ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ನೀರು ಅತ್ಯವಶ್ಯಕವಾಗಿರುತ್ತದೆ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುವುದರ ಜೊತೆಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಸುರಕ್ಷಿತ ನೀರು ಕುಡಿಯುವುದರಿಂದ ನೀರಿನಿಂದ ಹರಡಬಹುದಾದ ಕಾಯಿಲೆಗಳನ್ನು ತಡೆಗಟ್ಟುತ್ತದೆ ಮಕ್ಕಳು ಆಟವಾಡಲು ಮತ್ತು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಕುಡಿಯುವುದು ಅವಶ್ಯಕವಾಗಿರುತ್ತದೆ.
ರಾಜ್ಯದಲ್ಲಿರುವ ಎಲ್.ಕೆ.ಜಿ. ಯು.ಕೆ.ಜಿ ಒಳಗೊಂಡಂತೆ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ಆಗಾಗೆ, ನೀರು ಕುಡಿಯುವಂತೆ ಜ್ಞಾಪಿಸಲು “ವಾಟರ್ ಬೆಲ್” (ನೀರಿನ ಗಂಟೆ) ಬಾರಿಸುವ ನಿಯಮವನ್ನು ಅನುಷ್ಠಾನಗೊಳಿಸಲು ಈ ಮೂಲಕ ತಿಳಿಸಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಪಿಎಂ ಪೋಷಕ ಆಯುಕ್ತರ ಕಚೇರಿಯಿಂದ ರಾಜ್ಯದ ಎಲ್ಲಾ ಶಾಲೆಗಳಿಗೆ, ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸುತ್ತೋಲೆಯನ್ನು ಹೊರಡಿಸಿರುತ್ತದೆ.













































