ಕ್ಯಾಂಪ್ಕೋಗೆ ಸಂಸದ ಬ್ರಿಜೇಶ್ ಚೌಟ ಭೇಟಿ, ಅಡಿಕೆ ಸಮಸ್ಯೆಗಳ ಕುರಿತು ಚರ್ಚೆ

Picture of Savistara

Savistara

Bureau Report

ಲೋಕಸಭಾ ಸದಸ್ಯರಾದ ಬ್ರಿಜೇಶ್ ಚೌಟ ಅವರು ಪುತ್ತೂರಿನ ದರ್ಬೆಯಲ್ಲಿರುವ ಕ್ಯಾಂಪ್ಕೋ (CAMPCO) ಚಾಕಲೇಟ್ ಫ್ಯಾಕ್ಟರಿಯನ್ನು ಭೇಟಿ ನೀಡಿ, ನೂತನವಾಗಿ ಆಯ್ಕೆಯಾದ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರೊಂದಿಗೆ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಮಾತುಕತೆ ನಡೆಸಿದರು.

ಕ್ಯಾಂಪ್ಕೋ ಅಧ್ಯಕ್ಷರಾದ ಎಸ್.ಆರ್. ಸತೀಶ್ ಚಂದ್ರ ಅವರು ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕಿ ರೋಗ, ಹಳದಿ ರೋಗ ಹಾಗೂ ಕಾಳು ಮೆಣಸಿನ ಸೊರಗು ರೋಗಗಳಿಂದ ಅಡಿಕೆ ಮತ್ತು ಸಂಬಂಧಿತ ಬೆಳೆಗಳಲ್ಲಿ ಸುಮಾರು ಶೇಕಡಾ 40 ರಷ್ಟು ನಷ್ಟವಾಗಿರುವುದನ್ನು ಸಂಸದರಿಗೆ ವಿವರಿಸಿದರು. ಈ ಪರಿಸ್ಥಿತಿಯ ನಡುವೆ ವಿಶ್ವ ಆರೋಗ್ಯ ಸಂಸ್ಥೆ (WHO) ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ಸುಳ್ಳು ಆರೋಪ ಮಾಡುತ್ತಿರುವ ಸಂಗತಿಯೂ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿರುವುದಾಗಿ ಅವರು ತಿಳಿಸಿದರು.ಅಲ್ಲದೆ, ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು ಕ್ಯಾಂಪ್ಕೋ ಸಂಸ್ಥೆ ಕೈಗೊಂಡಿರುವ ವಿವಿಧ ಪ್ರಯತ್ನಗಳು, ಸಂಶೋಧನೆಗೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಜಾಗೃತಿ ಕಾರ್ಯಕ್ರಮಗಳ ಕುರಿತು ಸಂಸದರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಿರ್ದೇಶಕ ವಿಶ್ವನಾಥ್ ಹೆಗಡೆ ಕೂಜಳ್ಳಿ ಅವರು ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯಲ್ಲಿ ಇರುವ ಅರೆಕೋಲಿನ್ (Arecoline) ಎಂಬ ಒಂದು ಅಂಶವನ್ನು ಗ್ರೂಪ್ 2B ವಿಭಾಗದಲ್ಲಿ ಸೇರಿಸಿರುವುದಾಗಿ ತಿಳಿಸಿದರು. ಆದರೆ ಸಂಪೂರ್ಣ ಅಡಿಕೆಯನ್ನು ಗ್ರೂಪ್ A ವಿಭಾಗದಲ್ಲಿ ಸೇರಿಸಿರುವುದನ್ನು ಮರುಪರಿಶೀಲಿಸಿ, ಗ್ರೂಪ್ 2B ವಿಭಾಗದಲ್ಲಿ ಮಾತ್ರ ಇರಿಸುವಂತೆ ಪರಿಗಣಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಅಡಿಕೆಯಲ್ಲಿ ಪಾಲಿಫಿನಾಲ್, ಪಾಲಿಸ್ಯಾಡ್, ಫೈಬರ್, ಫ್ಯಾಟಿ ಆಸಿಡ್ ಮುಂತಾದ ಆರೋಗ್ಯಕರ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಬಯೋ-ಆಕ್ಟಿವ್ ಘಟಕಗಳಿವೆ. ಪಾರಂಪರಿಕವಾಗಿ ಅಡಿಕೆಯನ್ನು ಔಷಧೀಯವಾಗಿ ಬಳಸಿಕೊಂಡು ಬಂದಿರುವುದನ್ನೂ ಅವರು ಉಲ್ಲೇಖಿಸಿದರು. ಅಡಿಕೆಯಲ್ಲಿರುವ ಇತರ ಔಷಧೀಯ ಗುಣಗಳ ಕುರಿತಾಗಿ ಆಧುನಿಕ ಸಂಶೋಧನೆ ಇನ್ನಷ್ಟು ಅಗತ್ಯವಿದೆ ಎಂದು ತಿಳಿಸಿದರು.(BLRF) ಈ ಕುರಿತು ಶಿರಸಿಯ ಬಿಎಲ್‌ಆರ್‌ಎಫ್ ಸಂಶೋಧನಾ ಪ್ರಯೋಗಶಾಲೆಯ ತಜ್ಞರಾದ ವಿನಯ್ ಕುಮಾರ್ ಹೆಗಡೆ ಮತ್ತು ಡಾ. ಕೇಶವ್ ಹೆಚ್. ಕೂರ್ಸೆ ಅವರು ನಡೆಸುತ್ತಿರುವ ಸಂಶೋಧನಾ ಪ್ರಯತ್ನಗಳ ಕುರಿತು ಮಾಹಿತಿ ವಿನಿಮಯ ನಡೆಯಿತು. ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ವೈಜ್ಞಾನಿಕ ಆಧಾರಿತ ಅಧ್ಯಯನ ಮತ್ತು ಜಾಗೃತಿ ಅಗತ್ಯವಿದೆ ಎಂದು ಸಭೆಯಲ್ಲಿ ಒತ್ತಿ ಹೇಳಲಾಯಿತು.

ಸಂಸದ ಬ್ರಿಜೇಶ್ ಚೌಟ ಅವರು ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಹಕರಿಸುವ ಭರವಸೆ ನೀಡಿದರು. ಈ ಸಂದರ್ಭಸಂಸ್ಥೆಯ ಮಾಜಿ ಅಧ್ಯಕ್ಷ ಎಸ್ ಆರ್ ರಂಗಮೂರ್ತಿ, ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ, ಕ್ಯಾಂಪ್ಕೋ ಆಡಳಿತ ನಿರ್ದೇಶಕ ಡಾ.ಸತ್ಯನಾರಾಯಣ, ನಿರ್ದೇಶಕರುಗಳಾದ ಪುರುಷೋತ್ತಮ ಭಟ್, ಮುರಳಿಕೃಷ್ಣ ಕೆ ಎನ್, ಮಹೇಶ್ ಚೌಟ, ಸತೀಶ್ಚಂದ್ರ ಭಂಡಾರಿ, ವೆಂಕಟ್ರಮಣ ಭಟ್, ದಯಾನಂದ ಹೆಗ್ಡೆ ಮತ್ತಿತರರು ಇದ್ದರು.

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!