ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 2025-26ನೆ ಸಾಲಿನಲ್ಲಿ ಫೆ. 18ರವರೆಗೆ ಶೇ.71.39ರಷ್ಟು ತೆರಿಗೆ ಸಂಗ್ರಹವಾಗಿದ್ದು, ಈ ವರ್ಷಾಂತ್ಯಕ್ಕೆ ಗುರಿ ತಲುಪುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.ಗುರುವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರು ಅವರು, ಪ್ರಸಕ್ತ ಸಾಲಿನ ಬಾಕಿಯನ್ನು ಮಾರ್ಚ್ ಅಂತ್ಯದೊಳಗೆ ವಸೂಲಾತಿ ಮಾಡಿ ಪ್ರಗತಿ ಸಾಧಿಸಲಾಗುವುದು. ಹಿಂದಿನ ಸಾಲುಗಳ ತೆರಿಗೆ ಬಾಕಿ 3352.4 ಕೋಟಿ ರೂ.ಗಳಿದ್ದು ಆಸ್ತಿ ವರ್ಗೀಕರಣವಾರು ತೆರಿಗೆ ಬಾಕಿ ಪ್ರತ್ಯೇಕಿಸಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕಳೆದ 5 ವರ್ಷಗಳಲ್ಲಿ ತೆರಿಗೆ ಬೇಡಿಕೆ ದ್ವಿಗುಣವಾಗಿದ್ದು, ತೆರಿಗೆ ವಸೂಲಾತಿಯ ಮೊತ್ತ ಕೂಡ ಹೆಚ್ಚಳವಾಗಿದೆ. ಆದುದರಿಂದ, 2024-25ನೆ ಸಾಲಿನಲ್ಲಿ ರಾಜ್ಯವು ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಆಂದೋಲನಗಳನ್ನು ವಿನೂತನವಾಗಿ ಹಮ್ಮಿಕೊಂಡು ಮಾಹಿತಿ, ಶಿಕ್ಷಣ, ಸಂವಹನದ ಮೂಲಕ ಹಾಗೂ ಸಾಮಾಜಿಕ ಮಾಧ್ಯಮಗಳಾದ ಇನ್ಸಾಗ್ರಾಮ್, ಫೇಸ್ ಬುಕ್, ಎಕ್ಸ್-ಘಿ, ವೃತ್ತ ಪತ್ರಿಕೆಗಳು ಇತರೆ ಮಾಧ್ಯಮಗಳ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಪಾವತಿ ಬಗ್ಗೆ ವಿನಾಯಿತಿಗಳ ಬಗ್ಗೆ ಸಾಕಷ್ಟು ಪ್ರಚಾರಗಳನ್ನು ಮಾಡಿ, ತೆರಿಗೆ ವಸೂಲಾತಿ ಹೆಚ್ಚಳಕ್ಕೆ ಕ್ರಮವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.ವಿಜಯನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 137 ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗಿರುವ ‘ವಿಶೇಷ ತೆರಿಗೆ ವಸೂಲಾತಿ ಅಭಿಯಾನ’ದಲ್ಲಿ ಒಟ್ಟು 3.07 ಕೋಟಿ ರೂ. ಗಳಷ್ಟು ತೆರಿಗೆ ವಸೂಲಾತಿ ಮಾಡಲಾಗಿದೆ. ಯಾದಗಿರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 122 ಗ್ರಾಮ ಪಂಚಾಯತಿಗಳಲ್ಲಿ ‘ಒಂದು ದಿನ ಆಸ್ತಿ ತೆರಿಗೆ ಅಭಿಯಾನ’ದಲ್ಲಿ ಒಟ್ಟು 3.12 ಕೋಟಿ ರೂ.ಗಳಷ್ಟು ತೆರಿಗೆಯನ್ನು ವಸೂಲಾತಿ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ವಿಜಯನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 137 ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗಿರುವ ‘ವಿಶೇಷ ತೆರಿಗೆ ವಸೂಲಾತಿ ಅಭಿಯಾನ’ದಲ್ಲಿ ಒಟ್ಟು 3.07 ಕೋಟಿ ರೂ. ಗಳಷ್ಟು ತೆರಿಗೆ ವಸೂಲಾತಿ ಮಾಡಲಾಗಿದೆ. ಯಾದಗಿರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 122 ಗ್ರಾಮ ಪಂಚಾಯತಿಗಳಲ್ಲಿ ‘ಒಂದು ದಿನ ಆಸ್ತಿ ತೆರಿಗೆ ಅಭಿಯಾನ’ದಲ್ಲಿ ಒಟ್ಟು 3.12 ಕೋಟಿ ರೂ.ಗಳಷ್ಟು ತೆರಿಗೆಯನ್ನು ವಸೂಲಾತಿ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.ಸಾರ್ವಜನಿಕರು ತಾವಿರುವಲ್ಲಿಯೆ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿಗಾಗಿ ಫೋನ್ ಪೆ, ಗೂಗಲ್ ಪೆ,, ಇಲಾಖೆಯ ‘ಬಾಪೂಜಿ ಸೇವಾ ಕೇಂದ್ರ’ಗಳ ಮೂಲಕ ತೆರಿಗೆ ಪಾವತಿ ಬಗ್ಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಆಸ್ತಿ ತೆರಿಗೆ ಸಂಬಂಧ ಪಾವತಿಸಬೇಕಾದ ತೆರಿಗೆಯ ವಿವರಗಳನ್ನು ವೀಕ್ಷಿಸಲು ಪಂಚಮಿತ್ರ ತಂತ್ರಾಂಶದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಗಳನ್ನು ನಿಡಿದ್ದಾರೆ.
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮಠಾಣಗಳ ಹೊರಗೆ ಭೂಪರಿವರ್ತನೆ ಮಾಡಿಸದೆ, ಮನೆ ನಿರ್ಮಿಸಿಕೊಂಡು ವಾಸಿಸುವ ಜನರಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಇತ್ಯಾದಿ ನಾಗರಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ, ಗ್ರಾಮ ಪಂಚಾಯಿತಿಗಳಿಗೆ ಇದು ಆರ್ಥಿಕವಾಗಿ ಹೊರೆಯಾಗುತ್ತಿತ್ತು. ಈ ಹಿನ್ನಲೆಯಲ್ಲಿ ಸರಕಾರ ದೃಢನಿರ್ಧಾರ ತೆಗೆದುಕೊಂಡು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ-1993 ಪ್ರಕರಣ 199ಕ್ಕೆ ತಿದ್ದುಪಡಿ ತಂದು, ಪ್ರಕರಣ 199ಬಿ ಹಾಗೂ 199ಸಿ ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತಿದ್ದುಪಡಿಯನ್ನು 2025ನೆ ಸಾಲಿನ ಎ.7ರಂದು ಅಧಿಸೂಚಿಸಲಾಗಿದೆ. ಅದರನ್ವಯ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು-2025 ಅನ್ನು ರೂಪಿಸಲಾಗಿದೆ. ಈ ನಿಯಮಗಳು 2025ನೆ ಸಾಲಿನ ಅ.17ರಿಂದ ಜಾರಿಗೆ ಬಂದಿದ್ದು, ತನ್ಮೂಲಕ ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲ ಹೆಚ್ಚಿಸಲು ಹಲವಾರು ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇ-ಸ್ವತ್ತು ನಿಯಮಗಳನ್ವಯ 2.0 ತಂತ್ರಾಂಶವನ್ನು ಮಾರ್ಪಾಡು ಮಾಡಲಾಗಿದ್ದು ಕೆಲವು ತಾಂತ್ರಿಕ ತೊಡಕಗಳು ಉಂಟಾಗಿರುವುದು ಗಮನಕ್ಕೆ ಬಂದಿದೆ, ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಿಂದಿನ ಸಾಲುಗಳಿಗೆ ಹೋಲಿಸಿದರೆ ತೆರಿಗೆ ಬೇಡಿಕೆ ಮೊತ್ತ ಹಾಗೂ ವಸೂಲಾತಿ ಮೊತ್ತ ಹೆಚ್ಚಾಗಿದೆ ಎಂಬ ಅವರು ಮಾಹಿತಿ ನೀಡಿದ್ದಾರೆ.ತೆರಿಗೆ ವಸೂಲಾತಿಯಿಂದ ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲ ವೃದ್ಧಿಯಾಗಲಿದ್ದು, ಅದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುಕೂಲವಾಗುತ್ತದೆ ಹಾಗೂ ಸ್ಥಳೀಯ ಸರಕಾರಗಳಾದ ಗ್ರಾಮ ಪಂಚಾಯಿತಿಗಳ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.













































