ಬೆಂಗಳೂರು, ಫೆ. 19: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಪರಿಚಯಿಸಿದ್ದ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಿಸುವ ಯೋಜನೆಯನ್ನು ಮರುಜಾರಿಗೊಳಿಸಬೇಕು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ಸರಕಾರಕ್ಕೆ ಶಿಫಾರಸು ಮಾಡಿದೆ.
ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ನೇತೃತ್ವದಲ್ಲಿ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಸಹಿತ 5 ಉಪಸಮಿತಿಗಳನ್ನು ರಚಿಸಲಾಗಿತ್ತು. ಆ ಎಲ್ಲ ಉಪಸಮಿತಿಗಳು” ನೀಡಿದ ಶಿಫಾರಸುಗಳನ್ನು ಕ್ರೋಡೀಕರಿಸಿ ಗುರುವಾರ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿ ನೀಡಿತು. ಅದರಲ್ಲಿ ಪರೀಕ್ಷೆಯಲ್ಲಿ ದಾಖಲಾತಿ ಹೆಚ್ಚಿಸಲು ವಿದ್ಯಾರ್ಥಿನಿಯರಿಗೆ ಉಚಿತ ಬೈಸಿಕಲ್ ಯೋಜನೆ ಮರುಜಾರಿಗೊಳಿಸಬೇಕು ಎಂದು ಶಿಫಾರಸು ಮಾಡಲಾಗಿದೆ.ಈಗಾಗಲೇ ಮಕ್ಕಳ ದಾಖಲಾತಿ ಹೆಚ್ಚಿಸಲು ಸರಕಾರ ಉಚಿತ ಬಸ್ ಪಾಸ್, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಒಳಗೊಂಡಂತೆ ಹಲವು ಯೋಜನೆಗಳಿವೆ. ಇದರ ಹೊರತಾಗಿಯೂ ಈ ಹಿಂದೆ ಇದ್ದ ಉಚಿತ ಸೈಕಲ್ ವಿತರಣೆ ಯೋಜನೆಯನ್ನು
ಮರುಪರಿಚಯಿಸುವ ಅಗತ್ಯ ಇದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗ ತನ್ನ ಶಿಫಾರಸಿನಲ್ಲಿ ಹೇಳಿದೆ.2008-09ರಲ್ಲಿ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಅನುಕೂಲ ಆಗಲಿ ಹಾಗೂ ಆ ಮೂಲಕ ಮಕ್ಕಳ ದಾಖಲಾತಿ ಹೆಚ್ಚಲಿ ಎಂಬ ಉದ್ದೇಶದಿಂದ ಬಿಪಿಎಲ್ ಕುಟಂಬಗಳ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ಯೋಜನೆ ಪರಿಚಯಿಸಲಾಗಿತ್ತು. ಆಗ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಇತ್ತು. 2019-20ರಿಂದ ಈ ಯೋಜನೆ ಸ್ಥಗಿತಗೊಂಡಿದೆ.ಆದರೆ, ಈ ಹಿಂದೆ ಅಧಿವೇಶನದಲ್ಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಶಾಲಾ ಮಕ್ಕಳಿಗೆ ಉಚಿತ ಸೈಕಲ್ ಯೋಜನೆಯನ್ನು ಮರುಪರಿಚಯಿಸುವ ಯೋಚನೆ ಇದೆ’ ಎಂದು ಹೇಳಿದ್ದರು.ಶಿಕ್ಷಣ ಹಕ್ಕು ವ್ಯಾಪ್ತಿ ವಿಸ್ತರಿಸಿ ಶಿಕ್ಷಣ ಹಕ್ಕು (ಆರ್ ಟಿಇ)ಗೆ ಸಂಬಂಧಿಸಿ ಸಮಗ್ರ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಹಾಗೂ 3ರಿಂದ 16 ವರ್ಷದ ಒಳಗಿನ ಮಕ್ಕಳನ್ನು ಆರ್‌ಟಿಇ ವ್ಯಾಪ್ತಿಗೆ ತರುವುದರ ಜತೆಗೆ ಈಗಿರುವ ಆರ್‌ಟಿಇ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದೂ ಆಯೋಗ ಶಿಫಾರಸು ಮಾಡಿದೆ.













































