ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉಲ್ಬಣಿಸಿರುವ ಸಂಘರ್ಷವನ್ನು ಹಂತ ಹಂತವಾಗಿ ಶಮನಗೊಳಿಸಲು ಇರಾನ್ ಮುಂದಿಟ್ಟಿರುವ ಹೊಸ ಸಂಧಾನ ಪ್ರಸ್ತಾವನೆಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸುವ ಸಾಧ್ಯತೆಯಿದೆ.ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಮೊದಲೇ ಕೈಬಿಡಬೇಕೆಂಬ ವಾಷಿಂಗ್ಟನ್‌ನ ಪ್ರಮುಖ ಬೇಡಿಕೆಯನ್ನು ಈ ಪ್ರಸ್ತಾವನೆಯು ಪೂರೈಸುತ್ತಿಲ್ಲ ಎಂಬುದು ಅಮೆರಿಕದ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ.
ಇರಾನ್ ಪ್ರಸ್ತಾಪಿಸಿದ ‘ತ್ರಿಸೂತ್ರ’ ಏನು?
ಸಂಧಾನ ಮಾತುಕತೆಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಇರಾನ್ ಮೂರು ಷರತ್ತುಗಳ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು.
1.ಅಮೆರಿಕಾ ಮತ್ತು ಇಸ್ರೇಲ್ ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧವನ್ನು ತಕ್ಷಣ ನಿಲ್ಲಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ದಾಳಿಗಳು ನಡೆಯದಂತೆ ಭರವಸೆ ನೀಡಬೇಕು.
2. ಅಮೆರಿಕಾ ವಿಧಿಸಿರುವ ನೌಕಾ ದಿಗ್ವಂಧನವನ್ನು ತೆರವುಗೊಳಿಸಿ, ಹೊರ್ಮುಜ್ ಜಲಸಂಧಿ ಸೇರಿದಂತೆ ಪ್ರಮುಖ ಹಡಗು ಮಾರ್ಗಗಳನ್ನು ಮುಕ್ತಗೊಳಿಸಬೇಕು.
3. ಈ ಮೇಲಿನ ಎರಡೂ ಪ್ರಕ್ರಿಯೆಗಳು ಮುಗಿದ ನಂತರವಷ್ಟೇ ಇರಾನ್‌ನ ಪರಮಾಣು ಚಟುವಟಿಕೆಗಳು ಮತ್ತು ಯುರೇನಿಯಂ ಪುಷ್ಟಿಕರಣದ ಹಕ್ಕುಗಳ ಬಗ್ಗೆ ಚರ್ಚಿಸಬೇಕು.
ಟ್ರಂಪ್ ಮತ್ತು ಮಾರ್ಕೊ ರೂಬಿಯೋ ಆಕ್ಷೇಪ
ಇರಾನ್‌ನ ಈ ಹಂತ ಹಂತದ ಯೋಜನೆಯನ್ನು ಟ್ರಂಪ್ ಆಡಳಿತ ಬಲವಾಗಿ ವಿರೋಧಿಸಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಸಭೆ ನಡೆಸಿದ ಟ್ರಂಪ್, “ಪರಮಾಣು ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಮೊದಲು ಅದರ ಬಗ್ಗೆ ನಿರ್ಧಾರವಾಗಬೇಕು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.”ಇರಾನ್ ಈ ಯೋಜನೆಯ ಮೂಲಕ ಜಾರಿಕೊಳ್ಳಲು ನಾವು ಬಿಡುವುದಿಲ್ಲ. ಯಾವುದೇ ಒಪ್ಪಂದವಾದರೂ ಅದು ಇರಾನ್ ಪರಮಾಣು ಅಸ್ತ್ರ ತಯಾರಿಸುವುದನ್ನು ಖಚಿತವಾಗಿ ತಡೆಯುವಂತಿರಬೇಕು,” ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಗುಡುಗಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆ ಮೇಲೆ ಪ್ರಭಾವ
ಇತ್ತ ಅಮೆರಿಕಾ ಮತ್ತು ಇರಾನ್ ನಡುವಿನ ಈ ಬಿಕ್ಕಟ್ಟು ತೈಲ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಹೊರ್ಮುಜ್ ಜಲಸಂಧಿಯ ಮುಕ್ತ ಸಂಚಾರದ ಬಗ್ಗೆ ಇರಾನ್ ಇಟ್ಟಿರುವ ಶರತ್ತುಗಳನ್ನು ಅಮೆರಿಕಾ ಒಪ್ಪದ ಕಾರಣ, ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.
ಪಾಕಿಸ್ತಾನ ಮತ್ತು ರಷ್ಯಾದಂತಹ ರಾಷ್ಟ್ರಗಳು ಈ ಸಂಧಾನಕ್ಕಾಗಿ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದ್ದರೂ, ಸದ್ಯಕ್ಕೆ ಯಾವುದೇ ಸುಧಾರಣೆ ಕಂಡುಬರುತ್ತಿಲ್ಲ.












































