WhatsApp accounts ‘ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ರೇಕ್: 9,400 ವಾಟ್ಸ್‌ಆ್ಯಪ್ ಖಾತೆಗಳನ್ನು ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ

Picture of Savistara

Savistara

Bureau Report

ನವದೆಹಲಿ: ದೇಶಾದ್ಯಂತ ಭೀತಿ ಹುಟ್ಟಿಸಿರುವ ಡಿಜಿಟಲ್ ಅರೆಸ್ಟ್’ ಹೆಸರಿನ ಆನ್‌ಲೈನ್ ವಂಚನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮತ್ತು ವಾಟ್ಸ್ಆ್ಯಪ್ ಸಂಸ್ಥೆ ಬಿಗಿ ಕ್ರಮ ಕೈಗೊಂಡಿವೆ. ಈ ವಂಚನೆ ಜಾಲದಲ್ಲಿ ಭಾಗಿಯಾಗಿದ್ದ ಸುಮಾರು 9.400 ವಾಟ್ಸ್ಆ್ಯಪ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಸುಪ್ರೀಂ ಕೋರ್ಟ್ ನಿರ್ದೇಶನ:ಡಿಜಿಟಲ್ ವಂಚನೆಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಫೆಬ್ರವರಿ 9ರಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ‘ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ’ವು (I4C) ಕೈಗೊಂಡಿರುವ ಕ್ರಮಗಳ ಕುರಿತು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರ ಮೂಲಕ ಸ್ಥಿತಿಗತಿ ವರದಿಯನ್ನು ಸಲ್ಲಿಸಿದೆ.

ವರದಿಯಲ್ಲಿರುವ ಪ್ರಮುಖ ಅಂಶಗಳು:ಕೇಂದ್ರದ ವರದಿಯ ಪ್ರಕಾರ, ಸೈಬರ್ ಅಪರಾಧಗಳನ್ನು ತಡೆಯಲು ಆರ್‌ಬಿಐ, ಸಿಬಿಐ, ದೂರಸಂಪರ್ಕ ಇಲಾಖೆ ಹಾಗೂ ಟೆಕ್‌ ಸಂಸ್ಥೆಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಮುಖವಾಗಿ ವಾಟ್ಸ್‌ಆ್ಯಪ್ ಸಂಸ್ಥೆಯು ಬಳಕೆದಾರರ ರಕ್ಷಣೆಗಾಗಿ ಈ ಕೆಳಗಿನ ತಾಂತ್ರಿಕ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ

ನಕಲಿ ಲೋಗೊ ಪತ್ತೆ: ಪ್ರೊಫೈಲ್ ಪಿಕ್ಟರ್‌ನಲ್ಲಿ (DP)ಪೊಲೀಸ್‌ ಅಥವಾ ಸರ್ಕಾರದ ಅಧಿಕೃತ ಲೋಗೊಗಳನ್ನು ಬಳಸಿ ವಂಚಿಸುವ ಖಾತೆಗಳನ್ನು ಗುರುತಿಸಿ ಸ್ವಯಂಚಾಲಿತವಾಗಿ ಅಳಿಸಿಹಾಕುವ ವ್ಯವಸ್ಥೆ ಜಾರಿಯಾಗಿದೆ.

ಹೊಸ ಖಾತೆಗಳ ಬಗ್ಗೆ ಎಚ್ಚರಿಕೆ: ಹೊಸದಾಗಿರಚನೆಯಾದ ವಾಟ್ಸ್ಆ್ಯಪ್ ಖಾತೆಯಿಂದ ಕರೆ ಬಂದ ತಕ್ಷಣ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ.

ಫೋಟೊ ಹೈಡಿಂಗ್: ಸಂಶಯಾಸ್ಪದ ಅಥವಾ ಅಪರಿಚಿತ ಕರೆದಾರರ ಪ್ರೊಫೈಲ್ ಫೋಟೊಗಳು ಬಳಕೆದಾರರಿಗೆ ಕಾಣಿಸದಂತೆ ಮರೆಮಾಡುವ ಫೀಚ‌ರ್ ಅಳವಡಿಸಲಾಗಿದೆ.

ಸಿಮ್ ಬೈಂಡಿಂಗ್‌ (Sim Binding): ಮುಂದಿನ 4 ರಿಂದ 6 ವಾರಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದ್ದು. ಮೊಬೈಲ್‌ನಲ್ಲಿ ನೋಂದಾಯಿತ ಸಿಮ್ ಕಾರ್ಡ್ ಸಕ್ರಿಯವಾಗಿದ್ದಲ್ಲಿ ಮಾತ್ರ ವಾಟ್ಸ್‌ಆ್ಯಪ್ ಕಾರ್ಯನಿರ್ವಹಿಸಲಿದೆ. ಇದರಿಂದ ಬೇರೆ ದೇಶಗಳಲ್ಲಿ ಕುಳಿತು ಭಾರತೀಯ ನಂಬರ್‌ಗಳ ಮೂಲಕ ವಂಚಿಸುವುದನ್ನು ತಡೆಯಬಹುದು.ಈ ಸಮಗ್ರ ಕ್ರಮಗಳ ಮೂಲಕ ಸಾರ್ವಜನಿಕರ ಹಣ ಮತ್ತು ನೆಮ್ಮದಿಯನ್ನು ಕಬಳಿಸುತ್ತಿರುವ ಡಿಜಿಟಲ್ ವಂಚಕರಿಗೆ ಬಿಸಿ ಮುಟ್ಟಿಸಲು ಸರ್ಕಾರ ಮುಂದಾಗಿದೆ.

[t4b-ticker]
error: Content is protected !!