ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶವು ಅಕ್ಷರಶಃ ಇಡೀ ದೇಶವನ್ನೇ ಬೆರಗುಗೊಳಿಸಿದೆ. ಸ್ವತಃ ಮುಖ್ಯಮಂತ್ರಿ ಮತ್ತು ಡಿಎಂಕೆ ಅಧಿನಾಯಕ ಎಂ.ಕೆ. ಸ್ಟಾಲಿನ್ ಅವರು ತಮ್ಮ ಭದ್ರಕೋಟೆ ಎನಿಸಿಕೊಂಡಿದ್ದ ಕೊಳತ್ತೂರು ಕ್ಷೇತ್ರದಲ್ಲಿ ಆಘಾತಕಾರಿ(Stalin Loses) ಸೋಲು ಅನುಭವಿಸಿದ್ದಾರೆ.
ರಾಜ್ಯ ರಾಜಕಾರಣದ ದೈತ್ಯ ಶಕ್ತಿಯಾಗಿದ್ದ ಸ್ಟಾಲಿನ್ ಅವರ ಪತನವು ದ್ರಾವಿಡ ರಾಜಕಾರಣದ ದಿಕ್ಕನ್ನೇ ಬದಲಿಸುವ ಮುನ್ಸೂಚನೆ ನೀಡಿದೆ. ಅಷ್ಟೇ ಅಲ್ಲದೆ, ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಪೆರಂಬೂರ್ ಮತ್ತು ತಿರುಚಿ ಕ್ಷೇತ್ರಗಳಲ್ಲಿ ಭಾರಿ ಮುನ್ನಡೆ ಸಾಧಿಸುವ ಮೂಲಕ ರಾಜ್ಯದಲ್ಲಿ ಹೊಸ ಪವರ್ ಸೆಂಟರ್ ಆಗಿ ಹೊರಹೊಮ್ಮಿದೆ.
ಆಟೋ ಚಾಲಕನಿಗೆ ಮಣಿದ ಮಾಜಿ ಸಚಿವರು!
ಇನ್ನೊಂದು ರೋಚಕ ಬೆಳವಣಿಗೆಯಲ್ಲಿ, ರಾಯಪುರಂ ಕ್ಷೇತ್ರದಲ್ಲಿ ಟಿವಿಕೆ ಪಕ್ಷದ ಅಭ್ಯರ್ಥಿ, ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ವಿಜಯ್ ಧಾಮು ಅವರು ರಾಜಕೀಯ ದಿಗ್ಗಜರಿಗೆ ಮಣ್ಣು ಮುಕ್ಕಿಸಿದ್ದಾರೆ. ಎಐಎಡಿಎಂಕೆಯ ಪ್ರಭಾವಿ ನಾಯಕ, ಮಾಜಿ ಸಚಿವ ಡಿ. ಜಯಕುಮಾರ್ ಮತ್ತು ಡಿಎಂಕೆ ಅಭ್ಯರ್ಥಿ ಸುಬೈರ್ ಖಾನ್ ಅವರನ್ನು ಸೋಲಿಸುವ ಮೂಲಕ ಧಾಮು ಅವರು ‘ಜೈಂಟ್ ಕಿಲ್ಲರ್’ ಆಗಿ ಹೊರಹೊಮ್ಮಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ಮಾಜಿ ಸಚಿವರನ್ನು ಸೋಲಿಸಿರುವುದು ರಾಜ್ಯದ ಮತದಾರರ ಬದಲಾದ ಮನಸ್ಥಿತಿಗೆ ಸಾಕ್ಷಿಯಾಗಿದೆ.
ಸಿಎಂ ಸ್ಟಾಲಿನ್ ಅವರ ಸೋಲು ಮತ್ತು ವಿಜಯ್ ಪಕ್ಷದ ಈ ಅಭೂತಪೂರ್ವ ಪ್ರದರ್ಶನವು ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಗಳ ಸುದೀರ್ಘ ಆಳ್ವಿಕೆಗೆ ದೊಡ್ಡ ಸವಾಲು ಒಡ್ಡಿದೆ.











































