ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶವು ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಅಲುಗಾಡಿಸುತ್ತಿದೆ. ಈ ರಾಜಕೀಯ ಮಹಾಸಮರದ ಕೇಂದ್ರಬಿಂದುವಾಗಿರುವ ಬಿಜೆಪಿ (Suvendu Adhikari) ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭವಾನಿಪುರದಲ್ಲಿ ಸವಾಲು ಹಾಕಿದ್ದಲ್ಲದೆ, ನಂದಿಗ್ರಾಮದಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಆದರೆ, ರಾಜಕೀಯವಾಗಿ ಇಷ್ಟು ಪ್ರಬಲವಾಗಿರುವ ನಾಯಕನ ಆಸ್ತಿ ವಿವರಗಳು ಮಾತ್ರ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ವಾರ್ಷಿಕ ಆದಾಯ ದುಪ್ಪಟ್ಟು, ಆದರೆ ಆಸ್ತಿ ಇಳಿಕೆ!
ಸುವೆಂದು ಅಧಿಕಾರಿ ಅವರ ವಾರ್ಷಿಕ ಆದಾಯವು ಕಳೆದ ಐದು ವರ್ಷಗಳಲ್ಲಿ ಗಮನಾರ್ಹ ಏರಿಕೆ ಕಂಡಿದೆ. 2020-21ರಲ್ಲಿ 8.13 ಲಕ್ಷ ಇದ್ದ ಅವರ ಆದಾಯವು, 2024-25ರ ಆರ್ಥಿಕ ವರ್ಷದಲ್ಲಿ 17.38 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಅವರ ಗಳಿಕೆ ಬಹುತೇಕ ದುಪ್ಪಟ್ಟಾಗಿದೆ. ಆದರೆ, ಆದಾಯ ಹೆಚ್ಚಾದರೂ ಅವರ ಒಟ್ಟು ಆಸ್ತಿಯ ಮೌಲ್ಯ ಮಾತ್ರ ಕಳೆದ ಚುನಾವಣೆಗಿಂತ ಗಣನೀಯವಾಗಿ ಕುಸಿದಿದೆ.
2021ಕ್ಕೆ ಹೋಲಿಸಿದರೆ ಆಸ್ತಿ ಪಾತಾಳಕ್ಕೆ
2021ರ ಚುನಾವಣೆಯ ವೇಳೆ ಶುಭೇಂದು ಅಧಿಕಾರಿ ಅವರ ಚರ ಆಸ್ತಿಯ ಮೌಲ್ಯ 59.31 ಲಕ್ಷ ಇತ್ತು. ಆದರೆ, ಈ ಬಾರಿಯ ಅಫಿಡವಿಟ್‌ನಲ್ಲಿ ಇದು ಕೇವಲ 24.57 ಲಕ್ಷಕ್ಕೆ ಇಳಿಕೆಯಾಗಿದೆ. ಇದರಲ್ಲಿ ಅವರ ಜೀವ ವಿಮೆ (LIC), ಮ್ಯೂಚುವಲ್ ಫಂಡ್ ಹಾಗೂ ಇತರ ಸಣ್ಣ ಹೂಡಿಕೆಗಳು ಸೇರಿವೆ. ಅಷ್ಟೇ ಅಲ್ಲದೆ, ಸ್ಥಿರ ಆಸ್ತಿಯ ಮೌಲ್ಯವೂ 61.30 ಲಕ್ಷದಿಂದ 46.21 ಲಕ್ಷಕ್ಕೆ ಕುಸಿದಿದೆ.
ಐಷಾರಾಮಿ ಬಂಗಲೆಗಳಿಲ್ಲ, ಕೃಷಿ ಭೂಮಿಯೇ ಆಸ್ತಿ
ಬಂಗಾಳ ರಾಜಕಾರಣದ ಪ್ರಭಾವಿ ನಾಯಕನಾಗಿದ್ದರೂ ಇವರ ಬಳಿ ಯಾವುದೇ ಐಷಾರಾಮಿ ಬಂಗಲೆಗಳಿಲ್ಲ.ಆಗ್ರಾದಲ್ಲಿ ಆನುವಂಶಿಕವಾಗಿ ಬಂದ ಕೃಷಿ ಭೂಮಿಯ ಪಾಲು (ಮೌಲ್ಯ 1.05 ಲಕ್ಷ) ಮತ್ತು ನಂದಿಗ್ರಾಮದಲ್ಲಿ ದೇಣಿಗೆಯಾಗಿ ಬಂದ 1.98 ಎಕರೆ ಕೃಷಿ ಭೂಮಿ (ಮೌಲ್ಯ 8 ಲಕ್ಷ) ಇವರ ಪ್ರಮುಖ ಸ್ಥಿರ ಆಸ್ತಿಗಳಾಗಿವೆ. ಒಟ್ಟಾರೆಯಾಗಿ ಇವರು 2.46 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ.
ಸುವೇಂದು ‘ಸರಳ’ ಜೀವನ!
ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾದ ದಾಖಲೆಗಳ ಪ್ರಕಾರ, ಸುವೇಂದು ಅಧಿಕಾರಿ ಯಾವುದೇ ನಾಲ್ಕು ಚಕ್ರದ ವಾಹನ ಅಥವಾ ಮೌಲ್ಯಯುತವಾದ ಚಿನ್ನ-ಬೆಳ್ಳಿಯ ಆಭರಣಗಳನ್ನು ಹೊಂದಿಲ್ಲ. ಮಮತಾ ಬ್ಯಾನರ್ಜಿ ಅವರಂತಹ ಪ್ರಬಲ ನಾಯಕಿ ಎದುರು ತೊಡೆತಟ್ಟಿ ನಿಂತಿರುವ ನಾಯಕನ ಆಸ್ತಿ ವಿವರಗಳು ಇಷ್ಟು ಸರಳವಾಗಿರುವುದು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರಸ್ತುತ ಟ್ರೆಂಡ್‌ಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 192 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಲು ಹೊರಟಿದೆ. ಈ ಗೆಲುವಿನ ರೂವಾರಿಯಾಗಿರುವ ಶುಭೇಂದು ಅವರ ಆಸ್ತಿ ಗ್ರಾಫ್ ಮಾತ್ರ ಕುಸಿತದ ಹಾದಿಯಲ್ಲಿರುವುದು ಕುತೂಹಲಕಾರಿಯಾಗಿದೆ,












































