ಸಿದ್ದರಾಮಯ್ಯ ಮುಂದಿನ 2 ವರ್ಷವೂ ಸಿಎಂ, ಡಿ.ಕೆ.ಶಿವಕುಮಾರ್ ಸಿಎಂ ಆಗಬಾರದೆಂದು ಹೇಳಿಲ್ಲ: ಸಿಎಂ ಆರ್ಥಿಕ ಸಲಹೆಗಾರ
ಬೆಂಗಳೂರು: ‘ನನಗೆ ವಯಸ್ಸಾಗಿದೆ. ಕಷ್ಟ ಆಗಲಿದೆ. ನಾನು ಸಿಎಂಆಗುವುದಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರೇ ಮುಂದಿನ ಎರಡು ವರ್ಷವೂ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವರು ವಿಧಾನಸೌಧಕ್ಕೆ ಬರುವುದು ಕಡಿಮೆ ಆಗಿದೆ. ನೀರು ಹರಿಯುತ್ತಿರಬೇಕು. ನಿಂತರೆ ಕೆಡುತ್ತದೆ. ಹೀಗಾಗಿ ಸಂಪುಟ ಪುನಾರಚನೆ ಆಗಬೇಕು. ಯಾವಾಗ ಆಗುತ್ತದೆ ಎಂದು ಗೊತ್ತಿಲ್ಲ ಎಂದರು.
ಆಗುವುದಾದರೆ ನೀವೇ ಸಿಎಂ ಆಗಿ ಎಂದಿದ್ದೆ:
ನನ್ನ ಪ್ರಕಾರ ಇನ್ನೂ ಎರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಪರಿಸ್ಥಿತಿ ಚರ್ಚಿಸಿದ್ದೆ. ಆಡಳಿತ ವ್ಯವಸ್ಥೆ ಬಗ್ಗೆಯೂ ಹೇಳಿದ್ದೆ. ಮತ್ತೆ ನಾವು ಅಧಿಕಾರಕ್ಕೆ ಬರಬೇಕು. ಮುಂದಿನ ಎರಡು ವರ್ಷ ಪರಿಣಾಮಕಾರಿ ಆಡಳಿತ ಕೊಡಬೇಕಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಬದಲಿಸಬೇಡಿ ಎಂದಿದ್ದೆ. ಅಂತಹ ಪ್ರಸಂಗ ಬಂದರೆ ನೀವೇ ಸಿಎಂ ಆಗಿ. ಬೇರೆ ಯಾರೇ ಸಿಎಂ ಆದರೂ ಆ ಮಟ್ಟಕ್ಕೆ ಆಡಳಿತ ಇರುವುದಿಲ್ಲ ಎಂಬುದಾಗಿ ಮನವಿ ಮಾಡಿದ್ದೆ. ಆದರೆ, ಅವರು ನನಗೆ ಬೇಡ, ವಯಸ್ಸಾಯಿತು, ಕಷ್ಟ ಆಗಲಿದೆ ಎಂದರು. ಈ ಬಗ್ಗೆ ರಾಹುಲ್ ಗಾಂಧಿ, ನಾವು ತೀರ್ಮಾನಿಸುತ್ತೇವೆ’ ಎಂದೂ ಹೇಳಿದ್ದಾಗಿ ರಾಯರಡ್ಡಿ ತಿಳಿಸಿದರು.
ಬೇರೆಯವರು ಆಗಬಾರದು ಎನ್ನಲ್ಲ: ಸಿಎಂ ಸಲಹೆಗಾರ
ಖರ್ಗೆ ಅವರು ಹಿರಿಯರಿದ್ದಾರೆ. ಅನುಭವಸ್ಥರಿದ್ದಾರೆ. ದಲಿತರೊಬ್ಬರು ಮುಖ್ಯಮಂತ್ರಿ ಆದಂತಾಗುತ್ತದೆ ಎಂಬ ದೃಷ್ಟಿಯಿಂದ ಹೇಳಿದ್ದೆ. ಡಿ.ಕೆ.ಶಿವಕುಮಾರ್ ಆಗಬಾರದು ನಾನೆಲ್ಲಿ ಹೇಳಿದ್ದೇನೆ? ಅಥವಾ ಬೇರೆ ಇನ್ಯಾರನ್ನಾದರೂ ಮಾಡಬಾರದು ಎನ್ನಲು ನಾನ್ಯಾರು? ಸಿದ್ದರಾಮಯ್ಯ ಅವರಿದ್ದರೆ ರಾಜ್ಯದ ಪರಿಸ್ಥಿತಿ ಚೆನ್ನಾಗಿರುತ್ತದೆ. ಹೀಗಾಗಿ ಸದ್ಯಕ್ಕಂತೂ 2 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿ ಎನ್ನುತ್ತೇನೆ ಎಂದು ರಾಯರಡ್ಡಿ ಹೇಳಿದರು.













































