ಅಗರ್ತಲಾ: ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ಅಥವಾವೈದ್ಯಕೀಯ ಸೇವೆ ನೀಡುವುದನ್ನು ರಾಜ್ಯ ಸರ್ಕಾರವು ನಿಷೇಧಿಸಿದೆ. ತ್ರಿಪುರಾದ ಅತಿದೊಡ್ಡ ಆಸ್ಪತ್ರೆಗಳಾದ ಅಗರ್ತಲಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಜಿಬಿ ಪಂತ್ ಆಸ್ಪತ್ರೆ ಸೇರಿದಂತೆಹಲವು ಆಸ್ಪತ್ರೆಗಳಿಗೆ ಈ ನಿಯಮ ಹೇರಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಗರ್ತಲಾ ವೈದ್ಯಕೀಯ ಕಾಲೇಜು ಶಿಕ್ಷಕರ ವೇದಿಕೆಯ ಅಧ್ಯಕ್ಷ ಡಾ. ತಮನ್ ಮಜುಮುದಾರ್ ‘ಸರ್ಕಾರದ ಈ ಆದೇಶವನ್ನು ನಾವು ತಿರಸ್ಕರಿಸುವುದಿಲ್ಲ. ಈ ಆಸ್ಪತ್ರೆಯನ್ನು ಏಮ್ಸ್ ಸಂಸ್ಥೆಯಾಗಿ ಮಾಡಲು ಸರ್ಕಾರ ಸಜ್ಜಾಗಿದೆ. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ವೈದ್ಯರಿಗೆ ಸರಿಯಾಗಿ ವೇತನ ನೀಡಿ, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.ಸರ್ಕಾರದ ಈ ನಿರ್ಧಾರದಿಂದ ಸುಮಾರು 350 ವೈದ್ಯರ ಮೇಲೆ ಪರಿಣಾಮ ಬೀರಿದೆ. ವೈದ್ಯರು ತಮ್ಮ ರಜಾದಿನಗಳಲ್ಲಿ ಖಾಸಗಿ ಕ್ಲಿನಿಕ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ವೈದ್ಯರನ್ನು ನಂಬಿ ಬರುತ್ತಿದ್ದ ರೋಗಿಗಳು ಈಗ ಸರ್ಕಾರದ ಈ ನಿರ್ಧಾರದಿಂದ ತೊಂದರೆಯಲ್ಲಿ ಸಿಲುಕಿದ್ದಾರೆ ಎಂದಿದ್ದಾರೆ.ಈ ಕುರಿತು ವೈದ್ಯರ ಸಂಘ ಹಾಗೂ ವೈದ್ಯಕೀಯ ಕಾಲೇಜು ಶಿಕ್ಷಕರ ವೇದಿಕೆ ತುರ್ತು ಸಭೆ ನಡೆಸಿದೆ. ಈ ಸಭೆಯಲ್ಲಿ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ವೇತನ ಹೆಚ್ಚಿಸುವಂತೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತರಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ವೈದ್ಯರ ಮನವಿ ಸ್ವೀಕರಿಸಿದ ಎಟಿಜಿಡಿಎ ಪ್ರಧಾನ ಕಾರ್ಯದರ್ಶಿ ಡಾ. ಕನಕ್ ಚೌದರಿ, ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಷಾ ಅವರು ಹೊರರಾಜ್ಯದಲ್ಲಿ ಇದ್ದಾರೆ. ಅವರು ಬಂದ ಕೂಡಲೇ ವೈದ್ಯರ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದಿದ್ದಾರೆ.











































