ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಿಂದ ಕವಲೊಡೆಯುವ ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಗೆ ಹಳೆಗೇಟು ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು, ಇಲ್ಲಿಗೆ ಬಿಜೆಪಿ ಪ್ರತಿನಿಧಿಗಳ ನಿಯೋಗವೂ ಆಗಮಿಸಿ, ಕಾಮಗಾರಿ ವೀಕ್ಷಿಸಿ, ಎಂಜಿನಿಯರ್‌ಗೆ ಕಾಮಗಾರಿ ಬಗ್ಗೆ ಮಾರ್ಗದರ್ಶನ ನೀಡಿತು.

ಇಲ್ಲಿ ಕುಸಿಯುವ ಭೀತಿಯಲ್ಲಿರುವ ತೋಡಿನ ಮೇಲೆಯೇ ಕಾಂಕ್ರೀಟ್ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಗಮನಕ್ಕೆ ತರಲಾಗಿತ್ತು. ಈ ಬಗ್ಗೆ ಸ್ಪಂದಿಸಿದ ಸಂಸದರು ಸಂಬಂಧಪಟ್ಟ ಎಂಜಿನಿಯರ್ ಹಾಗೂ ಪ್ರಸನ್ನ ದರ್ಬೆ ಅವರನ್ನು ಸ್ಥಳಕ್ಕೆ ಕಳುಹಿಸಿದ್ದರು. ಆ.11ರಂದು ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಪ್ರತಿನಿಧಿಗಳು ಎಂಜಿನಿಯರ್ ಅವರೊಂದಿಗೆ ಸಮಾಲೋಚನೆ ನಡೆಸಿ ಈ ರೀತಿ ಕಾಮಗಾರಿ ನಡೆಸುವುದರಿಂದ ಇಲ್ಲಿ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ವಿವರಿಸಿದರು. ಎಂಜಿನಿಯರ್ ಅವರು ಇದನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿ ರಸ್ತೆಯ ಸಮಸ್ಯೆಯನ್ನು ಬಗೆಹರಿಸಿ ರಸ್ತೆಯನ್ನುಅಗಲಗೊಳಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಬಿಜೆಪಿ ಉಪ್ಪಿನಂಗಡಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರಮಜಲ್, ಪುತ್ತೂರು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆದೇಶ ಶೆಟ್ಟಿ, ಹಿರಿಯರಾದ ಜಯಂತ್ ಪುರೋಳಿ, ಸ್ಥಳೀಯರಾದ ಪ್ರತಾಪ್ ಪೆರಿಯಡ್ಕ, ಧರ್ನಪ್ಪ ನಾಯ್ಕ, ಸುಚಿತ್, ಉದಿತ್‌ರಂಗಾಜೆ, ಗಿರೀಶ್, ಪ್ರಶಾಂತ್ ರಾಮಕುಂಜ, ನವೀನ್, ಹರೀಶ್ ಪಟ್ಲ ಉಪಸ್ಥಿತರಿದ್ದರು.







































