ಶಿರಾಡಿಘಾಟ್‌ನಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ; ಸಕಲೇಶಪುರ- ಕುಕ್ಕೆ ಸಂಚರಿಸಿದ ಟ್ರೈನ್

Picture of Savistara

Savistara

Bureau Report

ಅತ್ಯಂತ ಕಠಿಣ ಹಾಗೂ ತಿರುವುಗಳಿಂದ ಕೂಡಿದ ಶಿರಾಡಿಘಾಟ್ ಮಾರ್ಗದಲ್ಲಿ ಈ ರೈಲು ಸಂಚರಿಸುವ ಮೂಲಕ ಇತಿಹಾಸ ಬರೆದಿದೆ.

ಹಾಸನ (ಸಕಲೇಶಪುರ): ಜಿಲ್ಲೆಯ ಜನರ ಬಹುದಿನಗಳಕನಸು ಕೊನೆಗೂ ನನಸಾಗುವ ದಿನಗಳು ಹತ್ತಿರವಾಗಿವೆ. ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಪ್ರಾಯೋಗಿಕ ಸಂಚಾರವು ಹಾಸನ ಜಿಲ್ಲೆಯ ಸಕಲೇಶಪುರ ನಿಲ್ದಾಣದಿಂದ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯದವರೆಗೆ ಯಶಸ್ವಿಯಾಗಿ ಆರಂಭಗೊಂಡಿದೆ. ಅತ್ಯಂತ ಕಠಿಣ ಹಾಗೂ ತಿರುವುಗಳಿಂದ ಕೂಡಿದ ಶಿರಾಡಿಘಾಟ್ ಮಾರ್ಗದಲ್ಲಿ ಈ ರೈಲು ಸಂಚರಿಸುವ ಮೂಲಕ ಇತಿಹಾಸ ಬರೆದಿದೆ.

ಟ್ರಯಲ್ ರನ್ ಪ್ರಕ್ರಿಯೆ ಚಾಲನೆ: ಸಕಲೇಶಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ್ ರೈಲಿನ ಪ್ರಾಯೋಗಿಕ ಚಾಲನೆಗೆ ಸ್ಥಳೀಯ ಶಾಸಕ ಸಿಮೆಂಟ್ ಮಂಜು ಅವರು ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಘಾಟಿನಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಅತ್ಯಂತ ಸಾವಲುದಾಯಕ ಮತ್ತು ಮಹತ್ವದ್ದಾಗಿದೆ. ದುರ್ಗಮವಾಗಿರುವ ಶಿರಾಡಿ ಘಾಟಿ ಹಳಿಯಲ್ಲಿ ವಂದೇ ಭಾರತ್‌ ರೈಲಿನ ಸಂಚಾರದ ಬಗ್ಗೆ ಅಪಾರ ನಿರೀಕ್ಷೆ ಕೂಡ ಇದೆ.

ಈ ವೇಳೆ ಮಾತನಾಡಿದ ಶಾಸಕರು, ಈ ಭಾಗದಲ್ಲಿ ವಂದೇ ಭಾರತ್‌ ರೈಲು ಸಂಚಾರ ಆರಂಭಿಸಲು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ, ನಿರಂತರವಾಗಿ ಮನವಿ ಸಲ್ಲಿಸಿದ್ದೆವು. ಅದಕ್ಕೆ ಪೂರಕವಾಗಿ ಸಕಲೇಶಪುರ ಮಾರ್ಗದವರೆಗಿನ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿಗಳು ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಈಗ ಟ್ರಯಲ್ ರನ್ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ವಿಶೇಷ ವಂದೇ ಭಾರತ್ ರೈಲು 20 ಬೋಗಿಗಳನ್ನು ಹೊಂದಿದ್ದು, ಏಕಕಾಲಕ್ಕೆ 1,080 ಪ್ರಯಾಣಿಕರು ಅತ್ಯಂತ ಸುಖಕರವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಘಾಟ್ ಪ್ರದೇಶದ ಕಡಿದಾದ ಇಳಿಜಾರಿನಲ್ಲಿ ಸುರಕ್ಷಿತವಾಗಿ ಚಲಿಸಲು ಈ ರೈಲಿನಲ್ಲಿ ಅತ್ಯಾಧುನಿಕ ‘ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್‌’ (AEB) ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಐಷಾರಾಮಿ ಸಾರಿಗೆ ವ್ಯವಸ್ಥೆ: ಬೆಂಗಳೂರು ಹಾಗೂ ಕರಾವಳಿ ಭಾಗದ ಪ್ರಯಾಣಿಕರಿಗೆ ಇನ್ನು ಮುಂದೆ ಅತ್ಯಂತ ವೇಗದ ಮತ್ತು ಐಷಾರಾಮಿ ಸಾರಿಗೆ ವ್ಯವಸ್ಥೆ ಸಿಗಲಿದೆ. ಈ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ಬೆನ್ನಲ್ಲೇ, ಶೀಘ್ರದಲ್ಲೇ ಈ ರೈಲು ಸಾರ್ವಜನಿಕರ ಸೇವೆಗೆ ಮುಕ್ತವಾಗುವ ಸಾಧ್ಯತೆ ಇದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಪ್ರತಿದಿನ ನಿಯಮಿತವಾಗಿ ಸಂಚಾರ ಆರಂಭಿಸಲಿ ಎಂಬುದು ಹಾಸನ ಹಾಗೂ ಕರಾವಳಿ ಜಿಲ್ಲೆಗಳ ಪ್ರಯಾಣಿಕರ ಆಶಯವಾಗಿದೆ.

[t4b-ticker]
error: Content is protected !!