ಉಡುಪಿ/ದಕ್ಷಿಣ ಕನ್ನಡ:ಕರಾವಳಿ ಹಾಗೂ ತುಳುನಾಡಿನ ಸಂಸ್ಕೃತಿಯಲ್ಲಿ ‘ಆಟಿ ಅಮಾವಾಸ್ಯೆ’ಗೆ (ಆಷಾಢ ಅಮಾವಾಸ್ಯೆ) ಅತ್ಯಂತ ಪವಿತ್ರ ಹಾಗೂ ಧಾರ್ಮಿಕ – ಆರೋಗ್ಯಕರ ಪ್ರಾಮುಖ್ಯತೆಯಿದೆ. ಕೃಷಿ ಕಾಯಕದಿಂದ ವಿಶ್ರಾಂತಿ ಪಡೆಯುವ ಈ ಕಾಲಘಟ್ಟದಲ್ಲಿ ಪ್ರಕೃತಿಯಲ್ಲಿ ದೊರೆಯುವ ಮೂಲಿಕೆಗಳನ್ನು ಬಳಸಿಕೊಂಡು ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ತುಳುನಾಡಿನ ಹಿರಿಯರು ಕಂಡುಕೊಂಡ ಸಂಪ್ರದಾಯ. ಈ ದಿನದಂದು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ‘ಹಾಳೆ ಮರದ (ಪಾಲೆ ಮರ/ಹಾಲೆ ಮರ) ಕೆತ್ತೆಯ ಕಷಾಯ’ ಕುಡಿದು, ತದನಂತರ ದೇಹಕ್ಕೆ ತಂಪು ನೀಡುವ ‘ಮೆಂತ್ಯ ಗಂಜಿ’ ಸವಿಯುವುದು ಪೀಳಿಗೆಯಿಂದ ಪೀಳಿಗೆಗೆ ಸಾಗಿಬಂದ ಕ್ರಮ.ತುಳುನಾಡಿನ ಆಟಿ ಅಮವಾಸ್ಯೆಯು ರಾಜ್ಯದ ಉಳಿದ ಭಾಗಗಳಲ್ಲಿ ಭೀಮನ ಅಮಾವಾಸ್ಯೆ, ಕರ್ಕಾಟಕ ಅಮವಾಸ್ಯೆ ಎಂದೇ ಪ್ರಸಿದ್ಧ. ಆಟಿ ಅಮಾವಾಸ್ಯೆ ಎಂದಾಗ ನೆನಪಾಗುವುದೇ ಹಾಲೆ ಮರದ ಕಷಾಯ. ಈ ಕಷಾಯವನ್ನು ಹಲವರು ಇಷ್ಟಪಟ್ಟು ಕುಡಿದರೆ ಇನ್ನೂ ಕೆಲವರು ಕಷ್ಟಪಟ್ಟು ಕುಡಿಯುವುದು ಇದೆ.ಹಾಗೇ ಅಮಾವಾಸ್ಯೆಯ ದಿನ ತುಳುನಾಡಿನಾದ್ಯಂತ ಜನರು ಕಡಲತೀರಗಳಲ್ಲಿ ಸಮುದ್ರ ಸ್ನಾನ, ತೀರ್ಥಕ್ಷೇತ್ರಗಳಲ್ಲಿ ತೀರ್ಥಸ್ನಾನ ನಡೆಸಿ, ಪಿತೃಗಳಿಗೆ ತರ್ಪಣ ನೀಡಿ ನರಹರಿ ಪರ್ವತ, ಕಾರಿಂಜ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವುದು ಆಚರಣೆಯ ಭಾಗವಾಗಿದೆ.ಎಲ್ಲರ ಮನದಲ್ಲಿ ಮೂಡುವ ಸಾಮಾನ್ಯ ಪ್ರಶ್ನೆ ಎಂದರೆ, ಆಷಾಢ (ಆಟಿ ) ಮಾಸದಲ್ಲಿ ಹಾಲೆ ಮರದ ಕಷಾಯ ಏಕೆ ಕುಡಿಯಬೇಕು? ಅದರಿಂದ ಏನು ಉಪಯೋಗ?
ರೋಗ ನಿರೋಧಕ ಶಕ್ತಿ:ಆಷಾಢ ಮಾಸದ ಆಸುಪಾಸಿನಲ್ಲಿ ರೋಗ ರುಜಿನಗಳು ಬರುವುದು ಹೆಚ್ಚು. ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಕುಂದುತ್ತದೆ. ಈ ಸಂದರ್ಭದಲ್ಲಿ ಕೃಷಿ ಕಾರ್ಯಗಳು ಕಡಿಮೆ. ನಮ್ಮ ಹಿರಿಯರು ಹಾಲೆ ಮರದ ತೊಗಟೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಎಲ್ಲ ರೋಗ ರುಜಿನಗಳಿಗೆ ಇದು ರಾಮಬಾಣ ಎಂಬುದನ್ನು ಮನಗಂಡಿದ್ದರು. ಇದನ್ನು ಒಮ್ಮೆ ಸೇವಿಸಿದರೆ ಒಂದು ವರ್ಷದವರೆಗೆ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂಬುದನ್ನು ಅನುಭವದಿಂದ ಕಂಡುಕೊಂಡಿದ್ದರು.
ಆಟಿ ಅಮಾವಾಸ್ಯೆಯ ದಿನ ನಸುಕಿನ ಜಾವ ಮನೆಯ ಹಿರಿಯರು ಬೆತ್ತಲಾಗಿ ಹೋಗಿ ಹಾಲೆ ಮರದ ತೊಗಟೆಯನ್ನು ಬ್ರಾಹ್ಮೀ ಮುಹೂರ್ತದಲ್ಲೇ ಕಲ್ಲಿನಿಂದ ಕೆತ್ತಿ ತರುತ್ತಾರೆ. ಸೂರ್ಯನ ಬೆಳಕು ಬಿದ್ದ ಬಳಿಕ ತೆಗೆದರೆ ರಸವು ಕಡಿಮೆಯಾಗುತ್ತದೆ ಎಂಬುದು ಇದಕ್ಕೆ ಮುಖ್ಯ ಕಾರಣ. ಹಾಗೇ ತೊಗಟೆಯನ್ನು ತೆಗೆದ ಬಳಿಕ ಅದನ್ನು ತೊಳೆದು, ಕಲ್ಲಿನಿಂದ ಚೆನ್ನಾಗಿ ಗುದ್ದಿ ರಸ ತೆಗೆದು, ಕುಡಿಯುತ್ತಾರೆ. ಕಷಾಯ ಕುಡಿದ ಬಳಿಕ ಮೆಂತ್ಯೆಗಂಜಿ ಕೂಡಾ ಮಾಡಿ ಕುಡಿಯುತ್ತಾರೆ. ಹೀಗೆ ಕುಡಿದರೆ ಕೆಮ್ಮು, ಕಫ, ಮಲೇರಿಯಾದಂತಹ ಜ್ವರ, ಹುಳಬಾಧೆ, ಸಮಸ್ಯೆಗಳನ್ನು ದೂರ ಮಾಡಬಹುದು. ಜೊತೆಗೆ ಜೀರ್ಣಾಂಗವ್ಯೂಹದ ಶುದ್ದಿ, ಆಹಾರದ ಪಚನ ಕ್ರಿಯೆಗೆ ಉತ್ತಮ ಎನ್ನುತ್ತಾರೆ ಹಿರಿಯರು. ಹೀಗಾಗಿ ಈ ದಿವಸ ತುಳುನಾಡಿನ ಪ್ರತೀ ಮನೆಗಳಲ್ಲೂ ಆಟಿ ಕಷಾಯ ಕುಡಿಯುವುದು ಬಹುತೇಕ ಕಡ್ಡಾಯ ಎಂಬಂತೆ ನಡೆಯುತ್ತದೆ.
ಇದು ತುಳುನಾಡಿನ ಹಳೆಯ ಸಂಪ್ರದಾಯಗಳಲ್ಲೊಂದು. ಆಷಾಡ ಮಾಸದ ತೀವ್ರ ಮಳೆಯ ಸಂದರ್ಭ ರೋಗ ರುಜಿನಗಳು ಹೆಚ್ಚು. ಇಂತಹ ಸಂದರ್ಭದಲ್ಲಿ ರೋಗದಿಂದ ಮುಕ್ತರಾಗಲು ಹಿಂದಿನ ತಲೆಮಾರು ಕಂಡುಕೊಂಡ ಔಷಧವೇ ಈ ಹಾಲೆ ಮರದ ರಸ. ಇದನ್ನು ಅತ್ಯಂತ ಶ್ರದ್ಧೆಯಿಂದ ಜಜ್ಜಿ ರಸ ಕುಡಿಯುತ್ತಾರೆ. ಇದು ದೇಹದ ಒಳಗಿನ ರೋಗಗಳನ್ನು ಶಮನ ಮಾಡುವುದರ ಜೊತೆಗೆ ಜೀರ್ಣಕ್ರಿಯೆಗೂ ತುಂಬಾ ಉಪಯುಕ್ತ.
– ಬನ್ನಂಜೆ ಬಾಬು ಅಮೀನ್,
ಜನಪದ ವಿದ್ವಾಂಸ.








































