ಅಕ್ಟೊಬರ್ 15 ರಿಂದ ಉದ್ದೇಶಿತ ಸ್ಟಾರ್-ಏರ್ ನ ಶಿವಮೊಗ್ಗ-ಬೆಂಗಳೂರು ಸೇವೆಗೆ ತ್ವರಿತ ಅನುಮೋದನೆ ನೀಡಲು ಕೋರಿಕೆ
ನವದೆಹಲಿ, 11 ಆಗಸ್ಟ್ 2026:ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ರಾಮ್ ಮೋಹನ್ ನಾಯ್ಡು ಅವರನ್ನು ನಿನ್ನೆ ನವದೆಹಲಿಯಲ್ಲಿ ಭೇಟಿ ಮಾಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು, ಶಿವಮೊಗ್ಗಕ್ಕೆ ವಿಮಾನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ, ಮಲೆನಾಡಿನ ಹಾಗೂ ಮಧ್ಯ ಕರ್ನಾಟಕ ಹಾಗೂ ಜನರಿಗೆ ನಿರಂತರ ಮತ್ತು ವಿಶ್ವಾಸಾರ್ಹ ವಿಮಾನ ಸೇವೆಗಳನ್ನು ಖಚಿತಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಆದಷ್ಟು ಶೀಘ್ರವಾಗಿ ಕೈಗೊಳ್ಳುವಂತೆ ಸಚಿವಾಲಯವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಸದರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿ, ಅವುಗಳ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ವಿವರವಾದ ಮನವಿಯನ್ನು ಸಲ್ಲಿಸಿದರು.
ಸ್ಟಾರ್ ಏರ್ ಸಂಸ್ಥೆಯ ಶಿವಮೊಗ್ಗ-ಬೆಂಗಳೂರು ಸೇವೆಗೆ ತ್ವರಿತ ಅನುಮೋದನೆ: ಅಕ್ಟೋಬರ್ 15ರಿಂದ ಶಿವಮೊಗ್ಗ–ಬೆಂಗಳೂರು ನಡುವೆ ವಿಮಾನ ಸೇವೆ ಆರಂಭಿಸಲು ಸ್ಟಾರ್ ಏರ್ ಮುಂದಾಗಿರುವ ಹಿನ್ನೆಲೆಯಲ್ಲಿ, ಈ ಸೇವೆ ಶೀಘ್ರವಾಗಿ ಆರಂಭವಾಗಲು ಅಗತ್ಯ ಅನುಮತಿ ಹಾಗೂ ಅನುಮೋದನೆಗಳನ್ನು ಆದ್ಯತೆಯ ಮೇರೆಗೆ ನೀಡುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸಚಿವರನ್ನು ಒತ್ತಾಯಿಸಿದರು.
ನವೆಂಬರ್ ನಂತರವೂ ವಿಮಾನ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ತೆಗೆದುಕೊಳ್ಳಿ: ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ ಹಾಗೂ ಗೋವಾಕ್ಕೆ ಸಂಪರ್ಕ ಕಲ್ಪಿಸುತ್ತಿರುವ ಸ್ಟಾರ್ ಏರ್‌ನ ಪ್ರಸ್ತುತ ವಿಮಾನ ಸೇವೆಯನ್ನು ನವೆಂಬರ್ 2026ರ ನಂತರವೂ ಮುಂದುವರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಒತ್ತಾಯಿಸಿದ್ದಾರೆ. ಈ ಸೇವೆಯು ನವೆಂಬರ್ 2023ರಿಂದ RCS-UDAN ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಲಭ್ಯವಿರುವ ಏಕೈಕ ನಿಗದಿತ ವಿಮಾನ ಸೇವೆಯಾಗಿದೆ. ಈ ಸೇವೆಗೆ ದೊರೆಯುತ್ತಿರುವ ಮೂರು ವರ್ಷಗಳ ಪ್ರಸ್ತುತ ಆರ್ಥಿಕ ಬೆಂಬಲವು ಇದೇ ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರಿಗೆ ವಿಮಾನ ಸಂಪರ್ಕದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಹೊಸದಾಗಿ ಜಾರಿಗೊಂಡಿರುವ UDAN ಯೋಜನೆಯಡಿ ಈ ವಿಮಾನ ಮಾರ್ಗವನ್ನು ಮುಂದುವರಿಸುವಂತೆ ಸಂಸದರು ಮನವಿ ಮಾಡಿದರು.
ವಿಮಾನ ಕಾರ್ಯಾಚರಣೆಗಳ ವಿಶ್ವಾಸಾರ್ಹತೆ ಹೆಚ್ಚಿಸಲು DVOR ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಮನವಿ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿನ ಡಾಪ್ಲರ್ ವೆರಿ ಹೈ ಫ್ರೀಕ್ವೆನ್ಸಿ ಓಮ್ನಿಡೈರೆಕ್ಷನಲ್ ರೇಂಜ್ (DVOR) ನ್ಯಾವಿಗೇಷನ್ ವ್ಯವಸ್ಥೆಗೆ ಸಂಬಂಧಿಸಿದ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆಯೂ ಸಂಸದ ಕೇಂದ್ರ ಸಚಿವರನ್ನು ಒತ್ತಾಯಿಸಿದರು. DVOR ವ್ಯವಸ್ಥೆಗೆ ಸಂಬಂಧಿಸಿದ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಆ್ಯಂಟೆನಾ ಅಳವಡಿಕೆ, ವಿಮಾನಗಳ ಆಗಮನದ ಮಾರ್ಗಕ್ಕೆ (Approach Procedure) ಅಗತ್ಯ ವಿನ್ಯಾಸ ಹಾಗೂ ವಿಮಾನ ಹಾರಾಟದ ಮೂಲಕ ನಡೆಸಬೇಕಾದ ಅಂತಿಮ ಮಾಪನ-ಪರಿಶೀಲನೆ (Flight Calibration) ಸೇರಿದಂತೆ ಉಳಿದ ಕಾಮಗಾರಿಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಪೂರ್ಣಗೊಳಿಸಬೇಕಿದೆ.ಈ ಕಾಮಗಾರಿಗಳನ್ನು ನಾಗರಿಕ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ AAIಗೆ ನಿರ್ದೇಶನ ನೀಡಬೇಕೆಂದು ಸಂಸದರು ಕೇಂದ್ರ ಸಚಿವರನ್ನು ಕೋರಿದರು. ಈ ಕಾಮಗಾರಿಗಳು ಇನ್‌ಸ್ಟ್ರುಮೆಂಟ್ ಫ್ಲೈಟ್ ರೂಲ್ಸ್ (IFR) ಆಧಾರಿತ ವಿಮಾನ ಕಾರ್ಯಾಚರಣೆಗಳಿಗೆ ನೆರವಾಗುವುದರ ಜೊತೆಗೆ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೇರಿದಂತೆ ವಿಮಾನ ಸೇವೆಗಳನ್ನು ಹೆಚ್ಚಿಸಲು ಪ್ರಮುಖವಾಗಿವೆ.
ಭವಿಷ್ಯದ ವಿಮಾನ ಸಂಪರ್ಕಕ್ಕಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಆದ್ಯತೆ: ಭವಿಷ್ಯದಲ್ಲಿ ಹೊಸ ವಿಮಾನ ಮಾರ್ಗಗಳು ಹಾಗೂ ಹೆಚ್ಚಿನ ನಗರಗಳಿಗೆ ಸಂಪರ್ಕ ಕಲ್ಪಿಸುವ ಸಾಧ್ಯತೆಗಳನ್ನು ಹೆಚ್ಚಿಸಲು, ಶಿವಮೊಗ್ಗ ವಿಮಾನ ನಿಲ್ದಾಣವನ್ನು ವಿಮಾನಯಾನ ಸಂಸ್ಥೆಗಳ ನೆಟ್‌ವರ್ಕ್ ಯೋಜನಾ ದತ್ತಾಂಶ ವ್ಯವಸ್ಥೆಗಳಲ್ಲಿ (Network Planning Databases) ಸೇರಿಸುವಂತೆ ಸಂಸದರು ಸಚಿವರನ್ನು ಒತ್ತಾಯಿಸಿದ್ದಾರೆ. ಪ್ರಸ್ತುತ ಇಂತಹ ನೆಟ್‌ವರ್ಕ್ ಯೋಜನಾ ದತ್ತಾಂಶ ವ್ಯವಸ್ಥೆಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವು ಪ್ರತಿಫಲಿಸುತ್ತಿಲ್ಲ. ಇದರಿಂದ ವಿಮಾನಯಾನ ಸಂಸ್ಥೆಗಳು ಭವಿಷ್ಯದ ವಿಮಾನ ಮಾರ್ಗಗಳನ್ನು ಯೋಜಿಸುವ ಸಂದರ್ಭದಲ್ಲಿ ಶಿವಮೊಗ್ಗದ ಪರಿಗಣನೆಗೆ ಅಗತ್ಯವಾದ ಗಮನ ಸಿಗದಂತಾಗಿದೆ ಎಂದು ಅವರು ಸಚಿವರ ಗಮನಕ್ಕೆ ತಂದರು.
ಆದ್ದರಿಂದ, ವಿಮಾನಯಾನ ಸಂಸ್ಥೆಗಳು ತಮ್ಮ ನೆಟ್‌ವರ್ಕ್ ಯೋಜನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರಿಸುವಂತೆ ಅಗತ್ಯ ನಿರ್ದೇಶನ ನೀಡಬೇಕು. ಇದರಿಂದ ಹೊಸ ವಿಮಾನ ಮಾರ್ಗಗಳಿಗಾಗಿ ಶಿವಮೊಗ್ಗವನ್ನು ಪರಿಗಣಿಸಲು ಹಾಗೂ ಇತರ ಪ್ರಮುಖ ತಾಣಗಳಿಗೆ ವಿಮಾನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಅವಕಾಶ ಕಲ್ಪಿಸಲಿದೆ ಎಂದು ಸಂಸದರು ತಿಳಿಸಿದರು.ಕೇಂದ್ರ ಸಚಿವರ ಭೇಟಿ ನಂತರ ಪ್ರತಿಕ್ರಿಯಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರು, _“ನಮ್ಮ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಈ ವಿಚಾರಗಳನ್ನು ಆದಷ್ಟು ಶೀಘ್ರವಾಗಿ ಕೈಗೆತ್ತಿಕೊಳ್ಳಲು ಸಹಕಾರ ನೀಡುವುದಾಗಿ ಭರವಸೆ ನೀಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹಾಗೂ ನಾಗರಿಕ ವಿಮಾನಯಾನ ಸಚಿವ ಶ್ರೀ ರಾಮ್ ಮೋಹನ್ ನಾಯ್ಡು ಜಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಶಿವಮೊಗ್ಗ ವಿಮಾನ ನಿಲ್ದಾಣ ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಜನರ ಅಭಿವೃದ್ಧಿಗೆ ಪ್ರಮುಖ ಹೆಬ್ಬಾಗಿಲಾಗಿದೆ. ಬೆಂಗಳೂರು ಶಿವಮೊಗ್ಗ ನಡುವೆ ವಿಮಾನ ಸೇವೆ, ನವೆಂಬರ್ ನಂತರವೂ ಪ್ರಸ್ತುತ ವಿಮಾನ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುವುದು ನಮ್ಮ ತಕ್ಷಣದ ಆದ್ಯತೆಯಾಗಿದೆ. ಇದರ ಜೊತೆಗೆ, ನಿಲ್ದಾಣದ ವಿಮಾನ ಕಾರ್ಯಾಚರಣೆಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಬಾಕಿ ಇರುವ ನ್ಯಾವಿಗೇಷನ್ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕಾಗಿದೆ. ಭವಿಷ್ಯದ ವಿಮಾನ ಮಾರ್ಗಗಳ ಯೋಜನೆಯಲ್ಲಿಯೂ ಶಿವಮೊಗ್ಗಕ್ಕೆ ದೊರೆಯಬೇಕಾದ ಆದ್ಯತೆ ದೊರೆಯಬೇಕು. ನಮ್ಮ ಪ್ರದೇಶದ ಜನರ ಹಿತದೃಷ್ಟಿಯಿಂದ ಈ ಎಲ್ಲ ವಿಚಾರಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದೇನೆ”_ ಎಂದಿದ್ದಾರೆ. ಶಿವಮೊಗ್ಗಕ್ಕೆ ನಿರಂತರ ವಿಮಾನ ಸೇವೆಗಳ, ಹೆಚ್ಚು ವಿಶ್ವಾಸಾರ್ಹ ವಿಮಾನ ಕಾರ್ಯಾಚರಣೆಗೆ ಆಧುನಿಕ ಸೌಲಭ್ಯಗಳು ಹಾಗೂ ಭವಿಷ್ಯದಲ್ಲಿ ಮತ್ತಷ್ಟು ಬಲಿಷ್ಠ ವಿಮಾನ ಸಂಪರ್ಕವನ್ನು ಖಚಿತಪಡಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳು ಮುಂದುವರಿಯಲಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.







































