ಕೊಪ್ಪಳ: ಸೀಮಿತ ಸೌಲಭ್ಯಗಳ ನಡುವೆ ಬದುಕು ನಡೆಸುತ್ತಿರುವ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಪುಟ್ಟರಾಜ ಭೀಮನೂರು ‘ನೀಟ್’ ಪರೀಕ್ಷೆಯ ಕೆಟಗೆರಿ ವಿಭಾಗದಲ್ಲಿ 694ನೇ ರಾಂಕ್ ಪಡೆಯುವ ಮೂಲಕ ಅನನ್ಯ ಸಾಧನೆ ಮಾಡಿದ್ದಾರೆ.
ಈ ಮೂಲಕ ಪುಟ್ಟರಾಜ ಛಲವೊಂದಿದ್ದರೆ ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಮನೆಯಲ್ಲಿ ಸರಿಯಾದ ಬೆಳಕಿಲ್ಲ, ತೋಟದ ಮನೆಯೇ ಆಸರೆ, ಕೈಯಲ್ಲಿ ಪುಸ್ತಕ ಹಿಡಿಯುವ ಜೊತೆಗೆ ಕುರಿ ಕಾಯುವ ಜವಾಬ್ದಾರಿಯನ್ನೂ ನಿರ್ವಹಿಸಿ ಈ ಸಾಧನೆ ಮಾಡಿದ್ದಾರೆ.ಮನೆ ಮುಂದೆ ಕುರಿಯ ದೊಡ್ಡಿ, ಕಸ ಗುಡಿಸಬೇಕು, ಮೇವು ಹಾಕಬೇಕು, ಕುರಿಗಳ ಮೇಯಿಸಬೇಕು, ಇದೆಲ್ಲವನ್ನೂ ಮಾಡಿಯೂ ಓದಿನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ನೀಟ್‌ನ ಒಟ್ಟು 720 ಅಂಕಗಳಿಗೆ 511 ಅಂಕಗಳನ್ನು ಗಳಿಸಿದ್ದಾರೆ. ಪಿಯುಸಿಯಲ್ಲಿ ಶೇ 98ರಷ್ಟು ಫಲಿತಾಂಶ ಪಡೆದಿದ್ದ ಪುಟ್ಟರಾಜ ತಂದೆ ಮಹಾಬಳೇಶ ಕೃಷಿ ಜೊತೆಗೆ ಊರೂರು ಸುತ್ತಿ ಬೋರ್‌ವೆಲ್ ರಿಪೇರಿ ಕೆಲಸ ಮಾಡುತ್ತಾ ಮಗನನ್ನು ಓದಿಸಿದ್ದಾರೆ.ಯಲಬುರ್ಗಾ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ್ದು, ಪಿಯುಸಿ ಗಂಗಾವತಿ ವಿದ್ಯಾನಿಕೇತನ ಕಾಲೇಜಿನಲ್ಲಿ ಓದಿದ್ದಾರೆ. ಇವರು ಮಹಾಬಳೇಶ್ವರ-ಸುವರ್ಣ ದಂಪತಿಯ ಪುತ್ರ.’ಪೋಷಕರ ಶ್ರಮದಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ಎಲ್ಲ ಕಷ್ಟಗಳ ಜೊತೆಗೆ ಅಪ್ಪ-ಅಮ್ಮ ಜೊತೆಯಾಗಿ ನಿಂತಿದ್ದಾರೆ. ಅವರ ಬದುಕಿನ ಸಂಕಷ್ಟಗಳೇ ನನಗೆ ಸಾಧನೆ ಮಾಡಲು ಪ್ರೇರಣೆ’ ಎಂದು ಪುಟ್ಟರಾಜ ಹೇಳಿದರು.







































