ದೆಹಲಿ : ಲೋಕಸಭೆಯಲ್ಲಿ ತೋಟಗಾರಿಕಾ ಬೆಳೆಗಾರರ ಪರ ಧ್ವನಿಯೆತ್ತಿದ ಕ್ಯಾ. ಚೌಟ

Picture of Savistara

Savistara

Bureau Report

ನವದೆಹಲಿ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳು ಎದುರಿಸುತ್ತಿರುವ ನಾನಾ ರೀತಿಯ ಹವಾಮಾನ ಸವಾಲುಗಳಿಗೆ ತಕ್ಕಂತೆ ‘ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ’ (RWBCIS) ರೂಪಿಸಬೇಕೆಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ನಿಯಮ 377ರಡಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.

ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸಂಸದರು, ಬಹು ವಾರ್ಷಿಕ ತೋಟಗಾರಿಕಾ ಬೆಳೆಗಳು ಸಾಮಾನ್ಯ ಋತುಮಾನದ ಬೆಳೆಗಳಿಗಿಂತ ಬಹಳ ವಿಭಿನ್ನ ಆಪತ್ತು ಎದುರಿಸುತ್ತವೆ. ನಿರಂತರ ಮಳೆ, ಆರ್ದ್ರತೆ, ರೋಗಬಾಧೆ ಹಾಗೂ ಪಾತಿಯಲ್ಲಿ ನೀರು ನಿಲ್ಲುವಿಕೆ ಮುಂತಾದ ಸ್ಥಳೀಯ ಹವಾಮಾನ ವ್ಯತ್ಯಾಸಗಳಿಂದ ಬೆಳೆಗಳಿಗೆ ಹಾನಿಯಾಗುತ್ತದೆ. ಹತ್ತಿರದ ಹವಾಮಾನ ಕೇಂದ್ರದಲ್ಲಿ ನಿಯಮಿತ ಮಳೆ ಅಥವಾ ತಾಪಮಾನದ ಮಿತಿ ದಾಟದಿದ್ದರೂ, ತೋಟಗಳಲ್ಲಿ ಬೆಳೆ ಸಂಪೂರ್ಣ ನಾಶವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ತೋಟಗಾರಿಕಾ ಬೆಳೆಗಳ ನೈಜ ನಷ್ಟದ ಸ್ವರೂಪಕ್ಕೆ ತಕ್ಕಂತೆ ವಿಮಾ ಯೋಜನೆಗಳನ್ನು ರೂಪಿಸುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ಸಂಸದರು ಸದನದಲ್ಲಿ ಮಂಡಿಸಿದ ವಿಷಯಗಳ ಪ್ರಕಾರ, ಕೇಂದ್ರ ಕೃಷಿ ಸಚಿವಾಲಯವು ಕೃಷಿ ವಿಜ್ಞಾನಿಗಳು ಹಾಗೂ ವಿಮಾ ಆಡಿಟರ್‌ಗಳ ಜಂಟಿ ಸಮಿತಿಯನ್ನು ರಚಿಸಿ, ಹವಾಮಾನ ಕೇಂದ್ರಗಳ ಸಾಂದ್ರತೆ, ಅಧಿಸೂಚಿತ ಯೂನಿಟ್‌ಗಳ ಗಾತ್ರ, ಮಳೆ-ಆರ್ದ್ರತೆಯ ಮಾನಿಟರಿಂಗ್‌ ವ್ಯವಸ್ಥೆ, ವಿಮಾ ಮೊತ್ತ ಮತ್ತು ಪರಿಹಾರ ಪಾವತಿಯ ಕಾಲಮಿತಿಗಳಂತಹ ತಾಂತ್ರಿಕ ಅಂಶಗಳನ್ನು ಒಳಗೊಂಡಂತೆ RWBCIS ಯೋಜನೆಯ ರೂಪುರೇಷೆ ಸಿದ್ಧಪಡಿಸಬೇಕು; ಈ ಪ್ರಕ್ರಿಯೆಯಲ್ಲಿ ICAR ಸಂಸ್ಥೆಗಳು, ಕೃಷಿ/ತೋಟಗಾರಿಕಾ ವಿಶ್ವವಿದ್ಯಾಲಯಗಳು, ವಿಮಾ ಕಂಪನಿಗಳು, ಕರ್ನಾಟಕ ಸರ್ಕಾರ ಹಾಗೂ ಬೆಳೆಗಾರರ ಒಕ್ಕೂಟಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಹವಾಮಾನ ಆಧಾರಿತ ಈ ಬೆಳೆ ವಿಮಾ ವ್ಯವಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುವ ಮುನ್ನ ಕರಾವಳಿ ಮತ್ತು ಮಲೆನಾಡಿನ ಆಯ್ದ ಜಿಲ್ಲೆಗಳಲ್ಲಿ ಇದನ್ನು ಬೆಳೆ ನಾಶ ಆಧರಿಸಿ ಅನುಷ್ಠಾನಗೊಳಿಸುವುದರ ಜೊತೆಗೆ ಟ್ರಿಗರ್ ಆಧಾರಿತ ಪಾವತಿಯ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಕಟಿಸಬೇಕು. ಅಲ್ಲದೆ ರಾಜ್ಯ ಸರ್ಕಾರಗಳಿಗೆ ಸೂಕ್ತ ತೋಟಗಾರಿಕಾ ಬೆಳೆಗಳನ್ನು ವಿಮೆ ವ್ಯಾಪ್ತಿಗೆ ತರಲು ಮಾದರಿ ಅಧಿಸೂಚನೆ ಟೆಂಪ್ಲೇಟ್‌ ಮತ್ತು ಕಾಲಮಿತಿಯನ್ನು ಒದಗಿಸಿ ಕೊಡಬೇಕೆಂದು ಅವರು ಸಲಹೆ ನೀಡಿದ್ದಾರೆ.

[t4b-ticker]
error: Content is protected !!