ಅಡ್ಡ ಮತದಾನ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಶಾಸಕ ಎಸ್. ಆರ್. ವಿಶ್ವನಾಥ್ ಅವರು ಸದಾನಂದ ಗೌಡರ ವಿರುದ್ಧ “ಅವರದ್ದು ವಕ್ರ ಬುದ್ಧಿ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.ಅವರು ಕೇಂದ್ರ ಸಚಿವರಾಗಿ, ಮುಖ್ಯಮಂತ್ರಿಗಳಾಗಿದ್ದಾಗ ನಾವು ಅವರಿಗಾಗಿ ಗಂಟೆಗಟ್ಟಲೆ ಬಾಗಿಲು ಕಾಯ್ದು ನಿಲ್ಲುತ್ತಿದ್ದೆವು. ಆದರೆ, ಇಂದು ಅವರ ವರ್ತನೆ ಪಕ್ಷಕ್ಕೆ ಶೋಭೆ ತರುವಂತದ್ದಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ನೀವು ಒಬ್ಬ ಹಿರಿಯ ಬಿಜೆಪಿ ನಾಯಕರಾಗಿದ್ದುಕೊಂಡು ಕಾಂಗ್ರೆಸ್‌ನವರು ಆಯೋಜಿಸಿದ್ದ ಸಭೆ ಅಥವಾ ಕಾರ್ಯಕ್ರಮಕ್ಕೆ ಹೇಗೆ ಹೋಗುತ್ತೀರಿ? ನಾವು ಹೋಗಬೇಡಿ ಎಂದು ಮನವಿ ಮಾಡಿದರೂ ಕೇಳಲಿಲ್ಲ.
ಇವತ್ತು ಅವರಿಗೆ ದಿಢೀರನೆ ಜಾತಿ ಅಭಿಮಾನ ಬಂದುಬಿಟ್ಟಿದೆ. ಸದಾನಂದ ಗೌಡರು ಮಂಗಳೂರು ಕಡೆಯವರಾಗಿದ್ದು, ಸಾಮಾನ್ಯವಾಗಿ ಹಳೇ ಮೈಸೂರು ಭಾಗದವರನ್ನು ಮಾತ್ರ ಒಕ್ಕಲಿಗರು ಎನ್ನಲಾಗುತ್ತದೆ, ಅವರೇನೂ ದೊಡ್ಡ ಗೌಡರಲ್ಲ ಎಂದು ಲೇವಡಿ ಮಾಡಿದ್ದಾರೆ. ಕೆಂಪೇಗೌಡ ಜಯಂತಿಗೆ ಸಂಬಂಧಿಸಿದಂತೆ ತಾವು ಆಹ್ವಾನ ನೀಡಿದ ತಕ್ಷಣ ಮುಖ್ಯಮಂತ್ರಿಗಳು ಬಂದು ಸನ್ಮಾನ ಸ್ವೀಕರಿಸಿದರು. ಆದರೆ, ಸದಾನಂದ ಗೌಡರು ಮಾತ್ರ ಬೇರೆಯದೇ ರೀತಿ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ.











































