ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ

Picture of Savistara

Savistara

Bureau Report

ಪಶ್ಚಿಮ ಘಟ್ಟ ಸಂರಕ್ಷಣೆ ಅಗತ್ಯವೇ ಸರಿ. ಆದರೆ ಪರಿಸರ ಸೂಕ್ಷ್ಮ ಪ್ರದೇಶಗಳ ಹೆಸರಿನಲ್ಲಿ ಹಲವು ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರುವಂತಿಲ್ಲ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಆಗ್ರಹಿಸಿದೆ. ಕಸ್ತೂರಿ ರಂಗನ್ ವರದಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ ಪತ್ರ ಬರೆಯಲು ಸಂಘ ನಿರ್ಧರಿಸಿದೆ.

ಅಡಿಕೆ ಬೆಳೆಗಾರರ ಸಂಘದ ಸಭೆಯಲ್ಲಿ ಪಶ್ಚಿಮ ಘಟ್ಟ ಸಂರಕ್ಷಣೆ ಹಾಗೂ ಕೃಷಿಕರ ಬದುಕಿನ ಕುರಿತು ಚರ್ಚೆ ನಡೆದಿದ್ದು, ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೃಷಿ ಚಟುವಟಿಕೆಗಳಿಗೆ ಪ್ರತಿಕೂಲ ಪರಿಣಾಮ ಬೀರುವ ನೀತಿಗಳನ್ನು ಜಾರಿಗೊಳಿಸಬಾರದು ಎಂದು ಸಂಘ ಅಭಿಪ್ರಾಯಪಟ್ಟಿದೆ. ಪಶ್ಚಿಮ ಘಟ್ಟ ದೇಶದ ಪ್ರಮುಖ ಪರಿಸರ ಸಂಪತ್ತು. ಅದರ ಜೀವವೈವಿಧ್ಯ, ಅರಣ್ಯ, ಜಲಮೂಲಗಳು ಮತ್ತು ಪರಿಸರ ಸಮತೋಲನವನ್ನು ಸಂರಕ್ಷಿಸುವ ಅಗತ್ಯವೂ ಇದೆ. ಆದರೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಹಲವು ದಶಕಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವ ಜನರನ್ನು ಪರಿಸರ ಸಂರಕ್ಷಣೆಗೆ ಅಡ್ಡಿಯಾಗಿರುವವರಂತೆ ನೋಡುವುದು ಸರಿಯಲ್ಲ ಎಂದು ಸಂಘ ಹೇಳಿದೆ. “ಪಶ್ಚಿಮ ಘಟ್ಟ ಉಳಿಯಬೇಕು; ಆದರೆ ಅದರೊಂದಿಗೆ ಬದುಕುತ್ತಿರುವ ಕೃಷಿಕರ ಬದುಕೂ ಉಳಿಯಬೇಕು” ಎನ್ನುವುದು ಸಂಘದ ನಿಲುವಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ ಗುರುತಿಸುವಿಕೆ ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ವಿಷಯ. ಕಸ್ತೂರಿ ರಂಗನ್‌ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಪಶ್ಚಿಮ ಘಟ್ಟದ ಕೆಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳಾಗಿ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಂತಹ ಪ್ರದೇಶಗಳಲ್ಲಿ ಕೈಗಾರಿಕೆ, ಗಣಿಗಾರಿಕೆ ಮತ್ತು ಕೆಲವು ಅಭಿವೃದ್ಧಿ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರುವ ಉದ್ದೇಶವಿದೆ. ಆದರೆ ಈ ನಿರ್ಬಂಧಗಳು ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತವೆಯೇ? ಎಂಬ ಆತಂಕ ಪಶ್ಚಿಮ ಘಟ್ಟದ ಗ್ರಾಮೀಣ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ವ್ಯಕ್ತವಾಗುತ್ತಿದೆ. ಅಡಿಕೆ, ಕಾಫಿ, ಕಾಳುಮೆಣಸು, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಆಧರಿಸಿ ಸಾವಿರಾರು ಕುಟುಂಬಗಳು ತಮ್ಮ ಜೀವನ ಕಟ್ಟಿಕೊಂಡಿರುವ ಪ್ರದೇಶಗಳಲ್ಲಿ ಈ ಆತಂಕ ಇನ್ನಷ್ಟು ಗಂಭೀರವಾಗಿದೆ ಎಂದು ಸಂಘ ಹೇಳಿದೆ.

ಪಶ್ಚಿಮ ಘಟ್ಟದ ಸಂರಕ್ಷಣೆಯಲ್ಲಿ ಸ್ಥಳೀಯ ಕೃಷಿಕರ ಪಾತ್ರವನ್ನು ಕಡೆಗಣಿಸಬಾರದು. ಹಲವು ತಲೆಮಾರುಗಳಿಂದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ವಾಸಿಸುತ್ತಿರುವ ಕೃಷಿಕರು ಕೃಷಿ, ಪ್ರಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ನಡುವೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದಾರೆ. ಕೃಷಿ ಭೂಮಿಯಲ್ಲಿರುವ ಮರಗಳು, ತೋಟಗಾರಿಕೆ ಪದ್ಧತಿ, ಮಣ್ಣಿನ ಸಂರಕ್ಷಣೆ, ನೀರಿನ ಬಳಕೆ ಮತ್ತು ಸ್ಥಳೀಯ ಪರಿಸರದೊಂದಿಗೆ ಹೊಂದಿಕೊಂಡಿರುವ ಕೃಷಿ ಪದ್ಧತಿಗಳೂ ಪರಿಸರದ ಭಾಗವಾಗಿವೆ. ಹೀಗಾಗಿ ಪಶ್ಚಿಮ ಘಟ್ಟ ಸಂರಕ್ಷಣೆಯ ನೀತಿ ರೂಪಿಸುವಾಗ ಸ್ಥಳೀಯ ಜನರನ್ನು ಹೊರಗಿಟ್ಟು ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸಂಘ ಒತ್ತಾಯಿಸಿದೆ. ಕೃಷಿಕರನ್ನು ಸಂರಕ್ಷಣೆಯ ಸಮಸ್ಯೆಯಾಗಿ ನೋಡುವ ಬದಲು, ಸಂರಕ್ಷಣೆಯ ಪ್ರಮುಖ ಭಾಗವಾಗಿ ಪರಿಗಣಿಸಬೇಕು ಹಾಗೂ ಸ್ಥಳೀಯ ಕೃಷಿಕರ ಅನುಭವ, ಗ್ರಾಮೀಣ ಪ್ರದೇಶಗಳ ವಾಸ್ತವ ಸ್ಥಿತಿ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ಸಂರಕ್ಷಣಾ ನೀತಿ ರೂಪಿಸಬೇಕು ಎಂದು ಸಂಘ ಹೇಳಿದೆ.

ಕಸ್ತೂರಿ ರಂಗನ್ ವರದಿಯ ಶಿಫಾರಸುಗಳಿಂದ ಕೃಷಿಕರ ಜೀವನೋಪಾಯಕ್ಕೆ ಪ್ರತಿಕೂಲ ಉಂಟಾಗಬಹುದು ಎಂಬ ಆತಂಕವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನಕ್ಕೆ ತರಲು ಸಂಘ ನಿರ್ಧರಿಸಿದೆ. ಈ ಕುರಿತು ಎರಡೂ ಸರ್ಕಾರಗಳಿಗೆ ಪತ್ರ ಬರೆಯಲಾಗುವುದು ಎಂದು ಸಂಘ ತಿಳಿಸಿದೆ. ಸಂರಕ್ಷಣಾ ನೀತಿ ರೂಪಿಸುವಾಗ ಕೃಷಿಕರ ಪ್ರತಿನಿಧಿಗಳು, ಸ್ಥಳೀಯ ಸಮುದಾಯಗಳು, ವಿಜ್ಞಾನಿಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳ ನಡುವೆ ಪರಿಣಾಮ ಸಮಾಲೋಚನೆ ನಡೆಯಬೇಕು ಎಂಬುದು ಸಂಘದ ಬೇಡಿಕೆ.

[t4b-ticker]
error: Content is protected !!