ಹೊಸದಿಲ್ಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ತೆರವಾಗಲಿರುವ ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಹಾಗೂ ಪಶ್ಚಿಮ ಬಂಗಾಳದಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗ (ECI) ವೇಳಾಪಟ್ಟಿ ಪ್ರಕಟಿಸಿದೆ.ಹಾಲಿ ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ 10 ಮತ್ತು ಉತ್ತರಾಖಂಡದ 1 ಸೇರಿದಂತೆ ಒಟ್ಟು 11 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯಲಿದೆ. ಈ ಸ್ಥಾನಗಳು ನವೆಂಬರ್ ನಲ್ಲಿ ತೆರವಾಗಲಿವೆ.
ಇದೇ ವೇಳೆ, ಪಶ್ಚಿಮ ಬಂಗಾಳದ ಒಂದು ರಾಜ್ಯಸಭಾ ಸ್ಥಾನಕ್ಕೆ ಮಾತ್ರ ಉಪಚುನಾವಣೆ ನಡೆಯಲಿದೆ. TMC ಸಂಸದೆ ರುಕ್ಮಿಣಿ ಮಲ್ಲಿಕ್ ರಾಜೀನಾಮೆ ನೀಡಿರುವುದರಿಂದ ಈ ಸ್ಥಾನ ತೆರವಾಗಿದೆ.
ರಾಜ್ಯಸಭಾ ಚುನಾವಣೆಗಳ ಅಧಿಸೂಚನೆ ಸೆಪ್ಟೆಂಬರ್ 29ರಂದು ಪ್ರಕಟವಾಗಲಿದೆ. ಅಕ್ಟೋಬರ್ 6 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಅಕ್ಟೋಬರ್ 7ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 9ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಅಕ್ಟೋಬರ್ 16ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಅಕ್ಟೋಬರ್ 16 ರಂದು ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.














































