ಐವರ್ನಾಡು: ವನ್ಯಜೀವಿ ಮತ್ತು ಮಾನವನ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಕೇವಲ ಆರೋಪ-ಪ್ರತ್ಯಾರೋಪಗಳಿಗೆ ಸೀಮಿತವಾಗದೆ ರೈತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒಂದೇ ವೇದಿಕೆಗೆ ತಂದು ಸಂವಾದ ಏರ್ಪಡಿಸುವ ವಿಭಿನ್ನ ಪ್ರಯತ್ನವೊಂದು ದಕ್ಷಿಣ ಕನ್ನಡ ಜಿಲ್ಲೆಯ ಐವರ್ನಾಡಿನಲ್ಲಿ ನಡೆದಿದೆ. ‘ಕೃಷಿಕ ಹಿತರಕ್ಷಣಾ ಸಮಿತಿ’ಯ ಮುಂದಾಳತ್ವದಲ್ಲಿ ಸೆಪ್ಟೆಂಬರ್ 22ರಂದು ನಡೆದ ಈ ಮಾಹಿತಿ-ಕಾರ್ಯಾಗಾರವು ಸಂಘರ್ಷ ನಿರ್ವಹಣೆಯಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಅಹವಾಲು ಸಲ್ಲಿಕೆಯಿಂದ ವೈಜ್ಞಾನಿಕ ಸಂವಾದದತ್ತ:
ಕಾರ್ಯಕ್ರಮದ ಸಂಚಾಲಕರಾದ ಕೃಷ್ಣ ಪ್ರಸಾದ್ ಮಡ್ತಿಲ ಅವರು ರೈತರ ಪರವಾಗಿ ಸಲ್ಲಿಸಿದ ಮನವಿಯಲ್ಲಿ ಕೇವಲ ಕಾಡಾನೆ ಹಾವಳಿ ಮಾತ್ರವಲ್ಲದೆ ಕಾಡುಹಂದಿ, ಕೋತಿಗಳ ಕಿರುಕುಳ, ಬೆಳೆಹಾನಿ ಪರಿಹಾರ ಹೆಚ್ಚಳ, ಗಡಿಭಾಗದಲ್ಲಿ ಬೆಳಕಿನ ವ್ಯವಸ್ಥೆ, ಅಪಾಯಕಾರಿ ಮರಗಳ ತೆರವು ಹಾಗೂ ಕೋವಿ ಪರವಾನಗಿ ಪ್ರಕ್ರಿಯೆ ಸರಳೀಕರಣ ಸೇರಿದಂತೆ ಹಲವು ಮುಖ್ಯ ವಿಚಾರಗಳನ್ನು ಪ್ರಸ್ತಾಪಿಸಿದರು.
ಈ ವೇಳೆ ಪುತ್ತೂರು ವಲಯ ಅರಣ್ಯಾಧಿಕಾರಿ (RFO) ಕಿರಣ್ ಅವರು ಪಿಪಿಟಿ (PPT) ಮೂಲಕ ವನ್ಯಜೀವಿಗಳ ವರ್ತನೆ ಹಾಗೂ ಆನೆ ಕಂದಕ, ಸೋಲಾರ್ ಬೇಲಿ, ಟೆಂಟಾಕಲ್ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್‌ಗಳ ಪರಿಣಾಮಕಾರಿ ಬಳಕೆಯ ಕುರಿತು ರೈತರಿಗೆ ಸವಿಸ್ತಾರ ಮಾಹಿತಿ ನೀಡಿದರು. ಸಂಜೆಯ ನಂತರ ಅಗತ್ಯವಿಲ್ಲದೇ ಹೊರಗೆ ಸಂಚರಿಸದಿರಲು ಹಾಗೂ ರಾತ್ರಿ ತೋಟಕ್ಕೆ ನೀರು ಹಾಯಿಸುವಾಗ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವಂತೆ ಸುರಕ್ಷತಾ ಸಲಹೆಗಳನ್ನು ನೀಡಿದರು.
ಬರಿ ತಡೆಗೋಡೆಯಲ್ಲ, ಮುನ್ನೆಚ್ಚರಿಕೆ ವ್ಯವಸ್ಥೆ ಮುಖ್ಯ:
ಸ್ವತಂತ್ರ ಸಾಕ್ಷ್ಯಚಿತ್ರ ನಿರ್ಮಾಪಕ ಅನಿಂದಿತ್ ಕೆ.ಎಸ್. ಅವರು ಈ ಸಂವಾದದ ಕುರಿತು ವಿಶ್ಲೇಷಿಸುತ್ತಾ, “ವನ್ಯಜೀವಿ ಸಂಘರ್ಷವನ್ನು ಕೇವಲ ‘ಆನೆ ಕಾಡಿನಿಂದ ಹೊರಬರುತ್ತಿದೆ’ ಎಂಬ ಒಂದೇ ಕೋನದಲ್ಲಿ ನೋಡಲಾಗದು.
ಅರಣ್ಯದೊಳಗಿನ ಆಹಾರ-ನೀರಿನ ಲಭ್ಯತೆ, ಭೂಬಳಕೆ ಮತ್ತು ಮೂಲಸೌಕರ್ಯಗಳ ಬೆಳವಣಿಗೆಯೂ ಇದಕ್ಕೆ ಕಾರಣ. ಕೇವಲ ಹಾನಿಯಾದ ನಂತರ ಪರಿಹಾರ ನೀಡುವುದಕ್ಕಿಂತ, ಆನೆಗಳ ಚಲನವಲನದ ಬಗ್ಗೆ ‘ಮುನ್ನೆಚ್ಚರಿಕೆ ಮಾಹಿತಿ’ (Early Warning System) ನೀಡುವ ತಂತ್ರಜ್ಞಾನ ಹಾಗೂ ರೈತರನ್ನು ಈ ನಿರ್ವಹಣೆಯ ಪಾಲುದಾರರನ್ನಾಗಿ ಮಾಡುವುದು ಇಂದಿನ ಅಗತ್ಯ,” ಎಂದು ಅಭಿಪ್ರಾಯಪಟ್ಟಿದ್ದಾರೆ.2026ರ ‘ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ ಮತ್ತು ‘ಪ್ರಾಜೆಕ್ಟ್ ಎಲಿಫೆಂಟ್’ ವರದಿಯನ್ನು ಉಲ್ಲೇಖಿಸಿದ ಅವರು, ಕಂದಾಯ, ಅರಣ್ಯ, ಪೊಲೀಸ್ ಹಾಗೂ ಸ್ಥಳೀಯ ಆಡಳಿತಗಳು ಒಟ್ಟಾಗಿ ಶ್ರಮಿಸಿದಾಗ ಮಾತ್ರ ಈ ಸಮಸ್ಯೆಗೆ ದೀರ್ಘಕಾಲದ ಮೂಲ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದರು.
















































