ಕ್ವಾಡ್ ಗ್ರೂಪ್ ಫೋಟೋ ವೇಳೆ ಮೋದಿ ನಡೆಗೆ ಟ್ರಂಪ್ ಮೆಚ್ಚುಗೆ – ‘ಸೇವ್ ಇಟ್’ ಎಂದ ಅಮೆರಿಕ ಅಧ್ಯಕ್ಷ

ಮನಿಲಾ, ನ.18:ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ನಡೆದ ಕ್ವಾಡ್ ನಾಯಕರ ಶೃಂಗಸಭೆಯ ಗ್ರೂಪ್ ಫೋಟೋ ವೇಳೆ, ನಾಯಕರು ನಿಲ್ಲಬೇಕಾದ ಜಾಗವನ್ನು ಗುರುತಿಸಲು ನೆಲದ ಮೇಲೆ ಇರಿಸಲಾಗಿದ್ದ ಭಾರತದ ರಾಷ್ಟ್ರಧ್ವಜವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೆಳಕ್ಕೆ ಬಾಗಿ ಎತ್ತಿಕೊಂಡ ಘಟನೆ ಮಂಗಳವಾರ ನಡೆದಿದೆ.


ಗ್ರೂಪ್ ಫೋಟೋಗಾಗಿ ವೇದಿಕೆಯ ಮೇಲೆ ಬಂದ ಪ್ರಧಾನಿ ಮೋದಿ, ತಮ್ಮ ಕಾಲಿನ ಬಳಿ ನೆಲದ ಮೇಲೆ ಭಾರತದ ತ್ರಿವರ್ಣ ಧ್ವಜದ ಗುರುತಿನ ಕಾರ್ಡ್ ಇರುವುದನ್ನು ಗಮನಿಸಿದರು. ತಕ್ಷಣವೇ ಬಾಗಿ ಆ ಕಾರ್ಡ್ ಅನ್ನು ಗೌರವದಿಂದ ಎತ್ತಿಕೊಂಡು ತಮ್ಮ ಜೇಬಿನಲ್ಲಿ ಇರಿಸಿಕೊಂಡರು.


“ನಾನು ಧ್ವಜವನ್ನು ನೆಲದ ಮೇಲೆ ಬಿಡಲು ಸಾಧ್ಯವಿಲ್ಲ” ಎಂದು ಮೋದಿ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, “ಅದನ್ನು ರಕ್ಷಿಸಿ” (ಸೇವ್ ಇಟ್) ಎಂದು ಹೇಳಿ ಮೋದಿ ಅವರ ಬೆನ್ನು ತಟ್ಟಿ ಮೆಚ್ಚುಗೆ ಸೂಚಿಸಿದರು. ಆ ವೇಳೆ ಪಕ್ಕದಲ್ಲೇ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಸನಾಯೆ ತಕೈಚಿ ಉಪಸ್ಥಿತರಿದ್ದರು.


ಕ್ವಾಡ್ ಸಭೆಯಲ್ಲಿ ಚರ್ಚೆ: 2024ರ ನಂತರ ಮೊದಲ ಬಾರಿಗೆ ಕ್ವಾಡ್ ನಾಯಕರು ನೇರವಾಗಿ ಸೇರಿದ್ದ ಈ ಸಭೆಯಲ್ಲಿ ಪ್ರಧಾನಿ ಮೋದಿ, ಕ್ವಾಡ್ ಅನ್ನು ‘ರಚನಾತ್ಮಕ ಮತ್ತು ವಿಶ್ವಾಸಾರ್ಹ ಪಾಲುದಾರಿಕೆ’ ಎಂದು ಬಣ್ಣಿಸಿದರು. ಇಂಡೋ-ಪೆಸಿಫಿಕ್ ಕಣ್ಗಾವಲು, ವಿರಳ ಖನಿಜ ಸಹಕಾರ ಹಾಗೂ ಪ್ರಾದೇಶಿಕ ಭದ್ರತೆಗೆ ಒತ್ತು ನೀಡಲಾಯಿತು.ಅಂತಾರಾಷ್ಟ್ರೀಯ ವೇದಿಕೆಯಲ್ಲಿಯೂ ರಾಷ್ಟ್ರಧ್ವಜ ಕಾಲಡಿಯಲ್ಲಿ ತುಳಿಯದಂತೆ ಎಚ್ಚರ ವಹಿಸಿದ ಮೋದಿ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.










































