ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ.
ದುಬೈ: ಪ್ರತಿಷ್ಟಿತ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಇಂದು ಮೊದಲ ಸೆಮಿಫೈನಲ್ ನಡೆಯಲಿದೆ.ತಾನು ಆಡಿರುವ ಮೂರು ಪಂದ್ಯಗಳನ್ನೂ ಗೆದ್ದು ಅಜೇಯವಾಗಿ ಸೆಮೀಸ್ ಪ್ರವೇಶಿಸಿರುವ ಟೀಂ ಇಂಡಿಯಾ ಇಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಫೈನಲ್ಗೆ ಪ್ರವೇಶ ಪಡೆಯಲಿದೆ. ಸೋತ ತಂಡದ ಅಭಿಯಾನ ಇಲ್ಲಿಗೆ ಕೊನೆಗೊಳ್ಳಲಿದೆ. ಮಹತ್ವದ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣ ಆತಿಥ್ಯ ವಹಿಸಿದೆ.
ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಆಸ್ಟ್ರೇಲಿಯಾ ತಂಡದ ನಾಯಕತ್ವದ ಜವಾಬ್ದಾರಿ ಸ್ಟೀವ್ ಸ್ಪಿತ್‌ಗೆ ನೀಡಲಾಗಿದೆ. ಆಸೀಸ್ ವಿರುದ್ಧದ ಈ ಪಂದ್ಯಕ್ಕೆ ಭಾರತ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ.
ಟಾಪ್ ಆರ್ಡರ್:
ಭಾರತ ಪರ ಟಾಪ್ ಆರ್ಡರ್ನಲ್ಲಿ ನಾಯಕ ರೋಹಿತ್ ಶರ್ಮಾ, ಉಪನಾಯಕ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಇರಲಿದ್ದಾರೆ. ರೋಹಿತ್ ಮತ್ತು ಗಿಲ್ ಇನ್ನಿಂಗ್ಸ್ ಪ್ರಾರಂಭಿಸುವರು. ಒನ್ ಡೌನ್ ಬಳಿಕ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.
ಮಧ್ಯಮ ಕ್ರಮಾಂಕ:
ಮಧ್ಯಮ ಕ್ರಮಾಂಕದ ಜವಾಬ್ದಾರಿ ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ಕೆ.ಎಲ್.ರಾಹುಲ್ ಅವರ ಕೈಯಲ್ಲಿರುತ್ತದೆ. ಅಯ್ಯರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಅಕ್ಷರ್ 5ನೇ ಕ್ರಮಾಂಕ, ವಿಕೆಟ್ ಕೀಪರ್ ರಾಹುಲ್ 6ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಫಿನಿಶಿಂಗ್ ಜವಾಬ್ದಾರಿ:
ಇಬ್ಬರು ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜಾ ಫಿನಿಶಿಂಗ್ ಪಾತ್ರ ವಹಿಸಲಿದ್ದಾರೆ. ಇಬ್ಬರೂ 7 ಮತ್ತು 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಲಿದ್ದಾರೆ.
ಸ್ಪಿನ್ ಬೌಲಿಂಗ್ ಲೈನ್ ಅಪ್:
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ ಬೌಲಿಂಗ್‌ಗೆ ಹೆಚ್ಚು ಆದ್ಯತೆ ನೀಡಿ ಗೆಲುವು ಸಾಧಿಸಿದ್ದ ಭಾರತ ಇಂದೂ ಕೂಡ ಅದೇ ಪ್ಲಾನ್ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಅನುಭವಿ ಆಟಗಾರ ಕುಲದೀಪ್ ಯಾದವ್ ತಂಡದ ಪ್ರಮುಖ ಸ್ಪಿನ್ ಬೌಲರ್ ಆಗಿದ್ದಾರೆ. ಇವರಿಗೆ ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಜೊತೆಯಾಗಲಿದ್ದಾರೆ.
ವೇಗದ ಬೌಲಿಂಗ್:
ಮೊಹಮ್ಮದ್ ಶಮಿ ಅಥವಾ ಅರ್ಷದೀಪ್ ಸಿಂಗ್ ಇಬ್ಬರಲ್ಲಿ ಒಬ್ಬರು ವೇಗದ ಬೌಲಿಂಗ್ ಲೈನ್‌ಅಪ್ ಜವಾಬ್ದಾರಿ ವಹಿಸಿಕೊಳ್ಳುವರು. ಇವರಿಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಬೆಂಬಲ ನೀಡಲಿದ್ದಾರೆ.
ಹೊರಗುಳಿಯುವ ಆಟಗಾರರು:
ರಿಷಭ್ ಪಂತ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್/ಶಮಿ (ಇಬ್ಬರಲ್ಲಿ ಒಬ್ಬರು), ವಾಷಿಂಗ್ಟನ್ ಸುಂದರ್.
ಭಾರತ ಸಂಭಾವ್ಯ ತಂಡ
- ರೋಹಿತ್ ಶರ್ಮಾ (ನಾಯಕ)
- ಶುಭಮನ್ ಗಿಲ್ವಿ
- ವಿರಾಟ್ ಕೊಹ್ಲಿ
- ಶ್ರೇಯಸ್ ಅಯ್ಯರ್
- ಅಕ್ಷರ್ ಪಟೇಲ್
- ಕೆ.ಎಲ್.ರಾಹುಲ್ (ವಿಕೆಟ್ ಕೀಪರ್)
- ಹಾರ್ದಿಕ್ ಪಾಂಡ್ಯ
- ರವೀಂದ್ರ ಜಡೇಜಾ
- ಕುಲದೀಪ್ ಯಾದವ್
- ಮೊಹಮ್ಮದ್ ಶಮಿ/ಅರ್ಷದೀಪ್ ಸಿಂಗ್
- ಅರುಣ್ ಚಕ್ರವರ್ತಿ













































