ಮಂಗಳೂರು MRPL ಗುತ್ತಿಗೆ ಕಾರ್ಮಿಕರಿಗೆ 5 ಲಕ್ಷ ಆರೋಗ್ಯ ವಿಮೆ: ಸಂಸದ ಕ್ಯಾ. ಬ್ರಿಜೇಶ್ ಚೌಟ ನೇತೃತ್ವದಲ್ಲಿ ಮಹತ್ವದ ನಿರ್ಧಾರ

Picture of Savistara

Savistara

Bureau Report

ಮಂಗಳೂರು: ನವರಾತ್ರಿಯ ಶುಭ ಸಂದರ್ಭದಲ್ಲಿ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಸಂತಸದ ಸುದ್ದಿ ಲಭಿಸಿದೆ.

MRPL ನ ಗುತ್ತಿಗೆ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ 5 ಲಕ್ಷ ರೂ. ಆರೋಗ್ಯ ವಿಮೆ ಒದಗಿಸುವ ಪ್ರಸ್ತಾವನೆಗೆ ಕೊನೆಗೂ ಒಪ್ಪಿಗೆ ದೊರೆತಿದೆ.

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಮಂಗಳೂರಿನ ಅವರ ಅಧಿಕೃತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಈ ಆರೋಗ್ಯ ವಿಮಾ ಯೋಜನೆಯಿಂದ MRPL ನಲ್ಲಿ ದುಡಿಯುತ್ತಿರುವ 2,000ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರ ಕುಟುಂಬಗಳಿಗೆ ಅನುಕೂಲವಾಗಲಿದೆ. ಕಾರ್ಮಿಕರು ಹಾಗೂ ಅವರ ಕುಟುಂಬಗಳ ಆರೋಗ್ಯ ಭದ್ರತೆ ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಮಹತ್ವ ಪಡೆದಿದೆ.

8 ವರ್ಷಗಳ ಬೇಡಿಕೆಗೆ ಸ್ಪಂದನೆ:
MRPL ಗುತ್ತಿಗೆ ಕಾರ್ಮಿಕರಿಗೆ ಆರೋಗ್ಯ ವಿಮೆ ಒದಗಿಸಬೇಕೆಂಬ ಬೇಡಿಕೆ ಕಳೆದ 8 ವರ್ಷಗಳಿಂದ ಕೇಳಿಬರುತ್ತಿತ್ತು. ಈ ವಿಚಾರವಾಗಿ ಕಳೆದ ವರ್ಷ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು. ಆ ಸಂದರ್ಭದಲ್ಲಿ ಗುತ್ತಿಗೆ ಕಾರ್ಮಿಕರಿಗೆ ಆರೋಗ್ಯ ವಿಮೆ ಒದಗಿಸುವ ಅಗತ್ಯದ ಕುರಿತು ಚರ್ಚೆ ನಡೆದಿತ್ತು. ಈಗ ಸಂಸದರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ವಿಮೆ ಒದಗಿಸುವ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದ್ದು, ಕಾರ್ಮಿಕರ ಬಹುಕಾಲದ ಬೇಡಿಕೆ ಈಡೇರಿಕೆಯತ್ತ ಮಹತ್ವದ ಪ್ರಗತಿ ಸಾಧಿಸಿದಂತಾಗಿದೆ.

ಮಹಿಳಾ ಕಾರ್ಮಿಕರಿಗೆ ವಿಶೇಷ ಸೌಲಭ್ಯ:
ಆರೋಗ್ಯ ವಿಮೆಯ ಜೊತೆಗೆ MRPL ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಗುತ್ತಿಗೆ ಕಾರ್ಮಿಕರ ಸೌಲಭ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಮಹಿಳಾ ಕಾರ್ಮಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಪ್ರತ್ಯೇಕ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ಒದಗಿಸಲು ಒಪ್ಪಿಗೆ ಸೂಚಿಸಲಾಗಿದೆ.

ಸಭೆಯಲ್ಲಿ ಉಪಸ್ಥಿತಿ:
ಸಂಸದರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ರಾಜು, MRPL ನ ಉನ್ನತಾಧಿಕಾರಿಗಳು ಹಾಗೂ ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

“ಕಾರ್ಮಿಕರ ರಕ್ಷಣೆ ನಮ್ಮ ಕರ್ತವ್ಯ” – ಕ್ಯಾ. ಬ್ರಿಜೇಶ್ ಚೌಟ:
ಸಭೆಯ ಬಳಿಕ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, “ಇದೊಂದು ಐತಿಹಾಸಿಕ ಕ್ರಮ. MRPL ಗುತ್ತಿಗೆ ಕಾರ್ಮಿಕರ ಸಮಸ್ಯೆ ನನ್ನ ಗಮನಕ್ಕೆ ಬಂದ ತಕ್ಷಣ ಅವರ ಪರವಾಗಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಿ, ಇದೀಗ ಆರೋಗ್ಯ ವಿಮೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕರ ರಕ್ಷಣೆ ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸಹಕಾರ ನೀಡಿದ MRPL ಸಂಸ್ಥೆಯ ಉನ್ನತಾಧಿಕಾರಿಗಳಿಗೆ, ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಧನ್ಯವಾದಗಳು” ಎಂದು ಹೇಳಿದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!