ಮತ್ತೆ ಶಾಸಕರ ವೇತನ ಹೆಚ್ಚಳ?: ಬಿಎಸಿ ಸಭೆಯಲ್ಲಿ ವೇತನ ಪರಿಷ್ಕರಣೆಗೆ ಮನವಿ ಮಾಡಿದ ಶಾಸಕರು!

Picture of Savistara

Savistara

Bureau Report

ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಸದನ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ವೇತನ ಪರಿಷ್ಕರಣೆಗೆ ಶಾಸಕರು ಮನವಿ ಮಾಡಿದ್ದಾರೆ.

ಬೆಂಗಳೂರು: ಜನಸಾಮಾನ್ಯರು ಬೆಲೆ ಏರಿಕೆಯಿಂದ ಕಂಗೆಟ್ಟು ಹೋಗಿದ್ದರೆ, ಇತ್ತ ಶಾಸಕರು ಮತ್ತೆ ತಮ್ಮ ವೇತನ ಪರಿಷ್ಕರಣೆಯ ಇಂಗಿತವನ್ನು ಹೊರ ಹಾಕಿದ್ದಾರೆ. ಶಾಸಕರ ವೇತನ ಪರಿಷ್ಕರಣೆಯಾಗಿ ಮೂರು ವರ್ಷನೂ ಕಳೆದಿಲ್ಲ, ಆಗಲೇ ಮತ್ತೆ ವೇತನ ಪರಿಷ್ಕರಣೆಯ ಮನವಿಯನ್ನು ಮುಂದಿಟ್ಟಿದ್ದಾರೆ.ಈಗಾಗಲೇ ರಾಜ್ಯದ ಜನರು ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡಿ ಜನರ ಮೇಲೆ ಹೊರೆ ಹಾಕುತ್ತಿದೆ. ಈ ಮಧ್ಯೆ ಶಾಸಕರು ಇದೀಗ ಜನರ ದುಡ್ಡಿನಿಂದ ಮತ್ತೆ ತಮ್ಮ ವೇತನ ಹೆಚ್ಚಳ ಮಾಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಸದನ ಕಾರ್ಯಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ವೇತನ ಪರಿಷ್ಕರಣೆಯ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಸುಮಾರು ಶೇ 50ರಷ್ಟು ವೇತನ ಹೆಚ್ಚಿಸುವಂತೆ ಸಭೆಯಲ್ಲಿ ಮನವಿ ಮಾಡಿದ್ದಾರೆ.

ಬೆಲೆ ಏರಿಕೆ ಹೆಚ್ಚಾಗಿದ್ದು, ಈ ಹಿನ್ನೆಲೆ ಶಾಸಕರ ವೇತನವನ್ನು ಹೆಚ್ಚಿಸುವಂತೆ ಕೋರಿದ್ದಾರೆ. ಸಭೆಯಲ್ಲಿದ್ದ ಜೆಡಿಎಸ್, ಕಾಂಗ್ರೆಸ್ ಶಾಸಕರೂ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಶಾಸಕರ ವೇತನ ಪರಿಷ್ಕರಣೆಯ ಪ್ರಸ್ತಾವನೆಯನ್ನು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಇತ್ತ ಸಭಾಪತಿ ಬಸವರಾಜ್ ಹೊರಟ್ಟಿ, ಬಿಜೆಪಿ ಸರ್ಕಾರದಲ್ಲಿ 2022ರಲ್ಲಿ ಶಾಸಕರ ವೇತನ ಹೆಚ್ಚಳ ಸಂಬಂಧ ವಿಧೇಯಕ ಮಂಡಿಸಲಾಗಿದೆ. ಅದರಲ್ಲಿ 5 ವರ್ಷಕ್ಕೆ ವೇತನ ಹೆಚ್ಚಳ ಮಾಡುವ ಕಾಯ್ದೆ ಅವಕಾಶ ನೀಡಿದೆ. ಹೀಗಾಗಿ, ವೇತನ ಹೆಚ್ಚಳ ಮಾಡಿದರೆ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯತೆ ಇದೆ ಎಂದು ತಿಳಿಸಿದ್ದಾರೆ.‌

2022ರಲ್ಲಿ ಹೆಚ್ಚಳವಾದ ಶಾಸಕರ ವೇತನ: 2022ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2022 ಹಾಗೂ ‘ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2022’ ವಿಧಾನಮಂಡಲದಲ್ಲಿ ಅಂಗೀಕೃತಗೊಂಡಿತ್ತು.

ಏಪ್ರಿಲ್ 1, 2022ರಿಂದ ಈ ವೇತನ ಹೆಚ್ಚಳ ಅನ್ವಯವಾಗಿತ್ತು. ಅದರಂತೆ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರ ವೇತನದಲ್ಲಿ ಶೇ 60ರಷ್ಟು, ಮುಖ್ಯಮಂತ್ರಿ ಮತ್ತು ಸಚಿವರ ವೇತನದಲ್ಲಿ 50%, ಸಭಾಧ್ಯಕ್ಷರು, ಸಭಾಪತಿ ಮತ್ತು ವಿರೋಧ ಪಕ್ಷಗಳ ನಾಯಕರ ವೇತನದಲ್ಲಿ 50%ರಷ್ಟು ಹೆಚ್ಚಳವಾಗಿತ್ತು.

ಇದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 92.40 ಕೋಟಿ ರೂ. ಹೆಚ್ಚುವರಿ ಹೊರೆ ಬಿದ್ದಿತ್ತು. ಈ ಕಾಯ್ದೆ ಪ್ರಕಾರ, ಇನ್ನು ಮುಂದೆ ಮುಖ್ಯಮಂತ್ರಿ, ಸಚಿವರು, ವಿರೋಧಪಕ್ಷದ ನಾಯಕರು, ಸಭಾಪತಿ, ಸಭಾಧ್ಯಕ್ಷರು ಮತ್ತು ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ನಿಯಮಿತವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ಆಗುವಂತೆ ನಿಯಮ ರೂಪಿಸಲಾಗಿತ್ತು.

[t4b-ticker]
error: Content is protected !!