19 ನೇ ಓವರ್ ನಲ್ಲಿ ಪಂದ್ಯದ ಚಿತ್ರಣ ಬದಲಿಸಿದ ಹ್ಯಾಝಲ್ ವುಡ್!
ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಗುರುವಾರ ನಡೆದ ರೋಚಕ ಪಂದ್ಯದಲ್ಲಿ ಆರ್ ಸಿಬಿ ರಾಜಸ್ಥಾನ ರಾಯಲ್ಸ್ ಎದುರು 11 ರನ್ ಜಯಭೇರಿ ಬಾರಿಸಿದೆ. ಇದು ಪ್ರಸಕ್ತ ಐಪಿಎಲ್‌ನಲ್ಲಿ ಆರ್‌ಸಿಬಿ ಬೆಂಗಳೂರಿನಲ್ಲಿ ಆಡಿದ 4ನೇ ಪಂದ್ಯ. ಹಿಂದಿನ ಮೂರರಲ್ಲೂ ಸೋಲನುಭವಿಸಿತ್ತು.ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೊಹ್ಲಿ, ಪಡಿಕ್ಕಲ್ ಅವರ ಅಮೋಘ ಅರ್ಧ ಶತಕಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 205 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 9 ವಿಕೆಟ್ ನಷ್ಟಕ್ಕೆ 194ರನ್ ಮಾತ್ರ ಗಳಿಸಿತು. ಆರ್ ಸಿಬಿ ಗೆ ಇದು 9ನೇ ಪಂದ್ಯದಲ್ಲಿ 6 ನೇ ಜಯ. ಅಂಕಪಟ್ಟಿ ಯಲ್ಲಿ 3 ನೇ ಸ್ಥಾನದಲ್ಲಿದೆ. ರಾಜಸ್ಥಾನಕ್ಕೆ ಇದು 9ನೇ ಪಂದ್ಯದಲ್ಲಿ 7 ನೇ ಸೋಲು.
ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 6 ಎಸೆತಗಳಲ್ಲಿ 17 ರನ್ ಬೇಕಿತ್ತು.19 ನೇ ಓವರ್ ಎಸೆದ ಹ್ಯಾಝಲ್ ವುಡ್ ಪಂದ್ಯದ ಚಿತ್ರಣ ಬದಲಿಸಿದರು. ಬಿಗಿ ದಾಳಿ ನಡೆಸಿ ಕೇವಲ 1 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು.47 ರನ್ ಗಳಿಸಿದ್ದ ಧ್ರುವ್ ಜುರೇಲ್ ಔಟಾದದ್ದು ಪಂದ್ಯದ ದಿಕ್ಕು ಬದಲಿಸಿತು. ಕೊನೆಯ ಓವರ್ ಎಸೆದ ಯಶ್ ದಯಾಳ್ ಅವರು ಶುಭಂ ದುಬೆ ಅವರ ವಿಕೆಟ್ ಪಡೆದು ಗೆಲುವಿನಲ್ಲಿ ಕೊಡುಗೆ ಸಲ್ಲಿಸಿದರು. ಹ್ಯಾಝಲ್ ವುಡ್ 4 ಪ್ರಮುಖ ವಿಕೆಟ್ ಕಿತ್ತರು.ರಾಜಸ್ಥಾನ್ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ ಅಬ್ಬರಿಸಿದರು. ಜೈಸ್ವಾಲ್ 49(19 ಎಸೆತ)ಔಟಾದರು. ವೈಭವ್ ಸೂರ್ಯವಂಶಿ16, ನಿತೀಶ್ ರಾಣಾ 28, ನಾಯಕ ರಿಯಾನ್ ಪರಾಗ್ 22, ಧ್ರುವ್ ಜುರೆಲ್ 47 ರನ್ ಗಳಿಸಿ ಔಟಾದರು.
ಆರ್ ಸಿಬಿ ಇನ್ನಿಂಗ್ಸ್ ನಲ್ಲಿ ಸಾಲ್ಟ್ 26(23 ಎಸೆತ) ಗಳಿಸಿ ಔಟಾದರು. ಆಬಳಿಕ ಅಬ್ಬರದ ಆಟವಾಡಿದ ಕೊಹ್ಲಿ 70(42ಎಸೆತ) ರನ್ ಗಳಿಸಿ ಔಟಾದರು.ಸಾಥ್ ನೀಡಿದ ಪಡಿಕ್ಕಲ್ 50(27ಎಸೆತ)ಗಳಿಸಿ ನಿರ್ಗಮಿಸಿದರು.ಟಿಮ್ ಡೇವಿಡ್ 23 ರನ್, ಜಿತೇಶ್ ಶರ್ಮ 20 ರನ್ ಗಳಿಸಿ ಔಟಾಗದೆ ಉಳಿದರು.ಕೊಹ್ಲಿ 50 ಪ್ಲಸ್ ದಾಖಲೆಕೊಹ್ಲಿ ಈ ಸೀಸನ್‌ನಲ್ಲಿ ದಾಖಲಿಸಿದ 5ನೇ ಅರ್ಧ ಶತಕ ಇದಾಗಿದೆ. ಟಿ20ಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೇಳೆ ಸರ್ವಾಧಿಕ 62 ಸಲ 50 ಪ್ಲಸ್ ರನ್ ಬಾರಿಸಿದ ದಾಖಲೆ ಕೊಹ್ಲಿ ಅವರದ್ದಾಯಿತು. ಬಾಬರ್ ಆಜಂ ಅವರ ದಾಖಲೆ ಪತನಗೊಂಡಿತು (61), ಫಸ್ಟ್ ಬ್ಯಾಟಿಂಗ್ ವೇಳೆ 50ಕ್ಕೂ ಹೆಚ್ಚು ಸಲ ಫಿಫ್ಟಿ ಪ್ಲಸ್ ರನ್ ಬಾರಿಸಿದ ಇತರರೆಂದರೆ ಕ್ರಿಸ್ ಗೇಲ್ (57), ಡೇವಿಡ್ ವಾರ್ನರ್ (55), ಜಾಸ್ ಬಟ್ಲರ್ (52) ಮತ್ತು ಫಾ ಡು ಪ್ಲೆಸಿಸ್ (52). 16ನೇ ಓವರ್‌ನಲ್ಲಿ 2ನೇ ಸ್ಪೆಲ್ ದಾಳಿಗಿಳಿದ ಆರ್ಚರ್, ಮೊದಲ ಎಸೆತದಲ್ಲೇ ಕೊಹ್ಲಿ ವಿಕೆಟ್ ಉರುಳಿಸಿದರು.













































