ಬೆಂಗಳೂರು: ‘ಖಾಸಗಿ ಸಂಘ-ಸಂಸ್ಥೆಗಳು, ಸಂಘಟನೆಗಳುಸರ್ಕಾರದ ಸ್ಥಳ, ಆವರಣ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಬಳಸುವ ಮುನ್ನ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು’ ಎಂಬ ರಾಜ್ಯ ಸರ್ಕಾರದ ಆದೇಶದ ಅನುಷ್ಠಾನಕ್ಕೆ ಏಕಸದಸ್ಯ ನ್ಯಾಯಪೀಠ ನೀಡಿರುವ ಮಧ್ಯಂತರ ತಡೆ ತೆರವುಗೊಳಿಸಲು ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ.
ಈ ಸಂಬಂಧ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ಕೆ.ಬಿ.ಗೀತಾ ಅವರಿದ್ದ ವಿಭಾಗೀಯ ನ್ಯಾಯಪೀಠ (ಧಾರವಾಡ) ಗುರುವಾರ ಪ್ರಕಟಿಸಿದ್ದು, ‘ಮಧ್ಯಂತರ ತಡೆ ಆದೇಶ ತೆರವು ಕೋರಿ ಏಕಸದಸ್ಯ ಪೀಠದಲ್ಲೇ ಅರ್ಜಿ ಸಲ್ಲಿಸಲು ಸರ್ಕಾರ ಮುಕ್ತವಾಗಿದೆ’ ಎಂದು ಹೇಳಿದೆ.ರಾಜ್ಯ ಸಚಿವ ಸಂಪುಟದ ನಿರ್ಣಯವನ್ನು ಪ್ರಶ್ನಿಸಿ ಹುಬ್ಬಳ್ಳಿಯ, ‘ಪುನಃಶ್ಚತನ ಸೇವಾ ಸಂಸ್ಥೆ’ ಅಧ್ಯಕ್ಷ ವಿನಾಯಕ ಮತ್ತು ‘ವಿ ಕೇರ್ ಫೌಂಡೇಶನ್’ ಅಧ್ಯಕ್ಷ ಗಂಗಾಧರಯ್ಯ, ಧಾರವಾಡದ ರಾಜೀವ ಮಲ್ಲಾರ ಕುಲಕರ್ಣಿ ಹಾಗೂ ಬೆಳಗಾವಿಯ ಉಮಾ ಸತ್ಯಜಿತ್ ಚವಾಣ್ ಸಲ್ಲಿಸಿದ್ದರು.ಈ ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.












































