ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿಶೇಷ ಸಮಗ್ರಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ತಮ್ಮ ವಿವರಗಳನ್ನು ದೃಢೀಕರಿಸದಿದ್ದರೆ, ನಗರದ ಸುಮಾರು ಅರ್ಧದಷ್ಟು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ.ಅಂದರೆ ಉದ್ಯಾನ ನಗರಿಯಲ್ಲಿ ಮತದಾರರ ಪಟ್ಟಿಯಿಂದ ಪ್ರತಿ ಎರಡನೇ ಮತದಾರನ ಹೆಸರು ಹೊರಗಿಡುವ ಆತಂಕವಿದೆ.
ಎಸ್‌ಐಆರ್ ಭಾಗವಾಗಿ ಬೆಂಗಳೂರಿನಲ್ಲಿ ಕರಡು ಪರಿಶೀಲನೆ ವೇಳೆ ಸುಮಾರು 48.90 ಲಕ್ಷ ಮತದಾರರನ್ನು ‘ಪತ್ತೆಯಾಗದ, ಸ್ಥಳಾಂತರ, ಹೆಚ್ಚು ಕಡೆ ನೋಂದಣಿ, ಮರಣ ಹಾಗೂ ಇತರೆ -ಎಎಸ್‌ಡಿಡಿಒ’ ಎಂದು ವರ್ಗೀಕರಿಸಲಾಗಿದ್ದು, ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗಿದೆ.ಇದು ನಗರದ ಒಟ್ಟು ಮತದಾರರ ಪೈಕಿ ಶೇ 47.08 ರಷ್ಟಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಅಧಿಕೃತ ವೆಬ್‌ಸೈಟ್‌ನಲ್ಲಿ ವಿಧಾನಸಭಾ ಕ್ಷೇತ್ರವಾರು ಎಸ್‌ಡಿಡಿಒ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ತೆರಳಿ ನಡೆಸಿದ ಗಣತಿ ನಮೂನೆಗಳ ವಿತರಣೆ ಮತ್ತು ಸಂಗ್ರಹಣೆ ಮಾಹಿತಿಯ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.ಅಧಿಕೃತ ಅಂಕಿ-ಅಂಶಗಳ ಪ್ರಕಾರ, 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1.03 ಕೋಟಿ ಮತದಾರರಿದ್ದಾರೆ. ಇವರಲ್ಲಿ ಶೇ 52.92 ರಷ್ಟು, ಅಂದರೆ 54.97 ಲಕ್ಷ ಮತದಾರರ ವಿವರಗಳು ಯಶಸ್ವಿಯಾಗಿ ಡಿಜಿಟಲೀಕರಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ಇವರ ಹೆಸರುಗಳು ಖಾತರಿಯಾಗಲಿವೆ.
ಸ್ಥಳಾಂತರ ಸಂಖ್ಯೆಯೇ ಹೆಚ್ಚು:ಗುರುತಿಸಲಾದ 48.90 ಲಕ್ಷ ಮತದಾರರಲ್ಲಿ, ಶಾಶ್ವತವಾಗಿ ಸ್ಥಳಾಂತರಗೊಂಡವರ ಸಂಖ್ಯೆಯೇ ಅಧಿಕವಾಗಿದ್ದು (33.56 ಲಕ್ಷ) ಮೊದಲ ಸ್ಥಾನದಲ್ಲಿದೆ. ಕ್ಷೇತ್ರ ಪರಿಶೀಲನೆ ವೇಳೆ 7.85 ಲಕ್ಷ ಮತದಾರರು ಗೈರುಹಾಜರಾಗಿದ್ದರೆ, 3.15 ಲಕ್ಷ ಮೃತರು ಮತ್ತು 60,683 ನಕಲಿ ನೋಂದಣಿಗಳನ್ನು ಗುರುತಿಸಲಾಗಿದೆ. ಉಳಿದಂತೆ 3.72 ಲಕ್ಷ ಮತದಾರರನ್ನು ‘ಇತರೆ’ ವರ್ಗದಲ್ಲಿ ವರ್ಗೀಕರಿಸಲಾಗಿದೆ.ಸಂಖ್ಯೆಯ ಆಧಾರದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗರಿಷ್ಠ 3.80 ಲಕ್ಷ ಮತದಾರರ ಹೆಸರುಗಳು ಎಸ್‌ಡಿಡಿಒ ಪಟ್ಟಿಯಲ್ಲಿದ್ದರೆ, ಮಹದೇವಪುರ (3.10 ಲಕ್ಷ) ಮತ್ತು ಬೊಮ್ಮನಹಳ್ಳಿ (2.74 ಲಕ್ಷ) ನಂತರದ ಸ್ಥಾನದಲ್ಲಿವೆ. ಶೇಕಡಾವಾರು ಆಧಾರದಲ್ಲಿ ಬೊಮ್ಮನಹಳ್ಳಿ ಶೇ 56.68 ರಷ್ಟು ಮತದಾರರ ಹೆಸರುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದಾಸರಹಳ್ಳಿ (ಶೇ 53.25), 2 ( 53.18), ໖ ໖ ( 53.00) ಮತ್ತು ಸಿ.ವಿ.ರಾಮನ್ ನಗರ (ಶೇ 52.77) ಕ್ಷೇತ್ರಗಳು ಇವೆ.
ಕಾಲಾವಕಾಶ:ಈಗಾಗಲೇ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಚುನಾವಣಾ ಅಧಿಕಾರಿಗಳು, ಮತದಾರರು ತಮ್ಮ ಅರ್ಹತೆಯನ್ನು ದೃಢೀಕರಿಸಲು ಇನ್ನೂ ಅವಕಾಶ ನೀಡಲಾಗಿದೆ ಎಂದಿದ್ದಾರೆ. ಈ ಅವಧಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸದಿದ್ದರೆ ಮಾತ್ರ ಅಂತಿಮ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗುತ್ತದೆ.ರಾಜಕೀಯ ಪಕ್ಷಗಳು ತಮ್ಮ ಕ್ಷೇತ್ರದ ಎಸ್‌ಡಿಡಿಒ ಪಟ್ಟಿಯನ್ನು ಪರಿಶೀಲಿಸಿ, ಯಾವುದೇ ಆಕ್ಷೇಪಣೆಗಳಿದ್ದರೆ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗೆ (ಇಆರ್‌ಒ) ಸಲ್ಲಿಸುವಂತೆ ಕೋರಲಾಗಿದೆ.










































