ಅತಿಥಿ ದೇವೋ ಭವ: ತಡರಾತ್ರಿ ಕ್ಯಾಬ್ ಚಾಲಕನ ಔದಾರ್ಯಕ್ಕೆ ರಷ್ಯಾ ಮಹಿಳೆ ಭಾವುಕ

Picture of Savistara

Savistara

Bureau Report

ನವದೆಹಲಿ: ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ರಷ್ಯಾದ ಮಹಿಳೆಯೊಬ್ಬರಿಗೆ ತಡರಾತ್ರಿ ಅನುಭವಕ್ಕೆ ಬಂದ ಕ್ಯಾಬ್ ಚಾಲಕನ ಆತಿಥ್ಯ ಮತ್ತು ಮಾನವೀಯತೆ ದೇಶದ ಅತಿಥಿ ದೇವೋ ಭವ’ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ.

ದೆಹಲಿಗೆ ಆಗಮಿಸಿದ ಮಹಿಳೆ ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ತೆರಳಲು ತಡರಾತ್ರಿ ಕ್ಯಾಬ್ ಬುಕ್ ಮಾಡಿದ್ದರು. ಪ್ರಯಾಣ ಆರಂಭಿಸುವಾಗ ಚಾಲಕ ‘ಮೇಡಂ ನಿಮಗೆ ಇಂಗ್ಲಿಷ್ ಗೊತ್ತಿದೆಯೇ? ದಯವಿಟ್ಟು ಒಟಿಪಿ ತೋರಿಸಿ’ ಎಂದು ವಿನಮ್ರನಾಗಿ ಕೇಳಿದ್ದಾನೆ. ಇಂಗ್ಲಿಷ್ ಹೆಚ್ಚು ಬಾರದ ಆಕೆ, ಒಟಿಪಿ ತೋರಿಸಿ ಪ್ರಯಾಣ ಮುಂದುವರಿಸಿದ್ದಾರೆ.

‘ಇದು ನಿಮ್ಮ ಮೊದಲ ಭಾರತ ಪ್ರವಾಸವೇ? ಒಬ್ಬರೇ ಪ್ರಯಾಣಿಸುತ್ತಿದ್ದೀರಾ? ಎಂದು ಚಾಲಕ ವಿಚಾರಿಸಿದ್ದಾನೆ. ಅದಕ್ಕೆ ಹೌದೆಂದು ತಲೆಯಾಡಿಸಿದ ಮಹಿಳೆ, ‘ನನಗೆ ಹಸಿವಾಗಿದೆ, ಈ ಸಮಯದಲ್ಲಿ ಎಲ್ಲಾದರೂ ಪಿಜ್ಜಾ ಶಾಪ್ ತೆರೆದಿರುತ್ತದೆಯೇ? ಎಂದು ಕೇಳಿದ್ದಾರೆ.ಸ್ವಲ್ಪ ದೂರ ಸಾಗಿದ ನಂತರ ಚಾಲಕ ಹೋಟೆಲ್ ಒಂದರ ಬಳಿ ಕಾರು ನಿಲ್ಲಿಸಿ ಹೊರಗೆ ಹೋಗಿದ್ದಾನೆ. ಅಪರಿಚಿತ ದೇಶದಲ್ಲಿ ತಡರಾತ್ರಿ ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿದ್ದನ್ನು ಕಂಡು ಆತಂಕಗೊಂಡ ಮಹಿಳೆ, ಸುರಕ್ಷತೆ ದೃಷ್ಟಿಯಿಂದ ಕ್ಯಾಬ್ ವಿವರಗಳನ್ನು ತಮ್ಮ ಪತಿಗೆ ವಾಟ್ಸ್‌ಆ್ಯಪ್ ಹಂಚಿಕೊಂಡಿದ್ದಾರೆ. ಆದರೆ, ಕೆಲವೇ ನಿಮಿಷಗಳಲ್ಲಿ ಬಿಸಿಬಿಸಿ ಪಿಜ್ಜಾ ಹಿಡಿದು ಬಂದ ಚಾಲಕ, ಅದನ್ನು ಮಹಿಳೆಗೆ ನೀಡಿ ವಾಹನ ಮುನ್ನಡೆಸಿದ್ದಾನೆ.

ಹೋಟೆಲ್ ತಲುಪಿದ ಬಳಿಕವೂ ಚಾಲಕ ಆಕೆಯನ್ನು ಇಳಿಸಿ ಹೋಗಲಿಲ್ಲ. ಪ್ರವೇಶ ದ್ವಾರದವರೆಗೆ ಜೊತೆಯಲ್ಲಿ ಸಾಗಿ, ಆಕೆ ಸುರಕ್ಷಿತವಾಗಿ ಹೋಟೆಲ್ ಒಳಗೆ ಹೋಗುವುದನ್ನು ಖಚಿತಪಡಿಸಿಕೊಂಡಿದ್ದಾನೆ.ಚಾಲಕನ ನಡೆಗೆ ಮನಸೋತ ಮಹಿಳೆ, ಪ್ರಯಾಣದ ಬಾಡಿಗೆ ಹಾಗೂ ಪಿಜ್ಜಾ ಹಣದ ಜೊತೆಗೆ ಹೆಚ್ಚುವರಿಯಾಗಿ ₹1,000 ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಆದರೆ ಅದನ್ನು ನಯವಾಗಿಯೇ ನಿರಾಕರಿಸಿದ ಚಾಲಕ, ಮುಗುಲ್ನಗುತ್ತಾ ಕೈಜೋಡಿಸಿ, ‘ಅತಿಥಿ ದೇವೋ ಭವ’ ಎಂದು ಹೇಳಿದ್ದಾನೆ.ಈ ಘಟನೆಯಿಂದ ಭಾವುಕರಾದ ಮಹಿಳೆ, ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಬಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಚಾಲಕನ ಪ್ರಾಮಾಣಿಕತೆ ಹಾಗೂ ಆತ್ಮೀಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಮುಂದಿನ ಬಾರಿ ನಾನು ಖಂಡಿತವಾಗಿಯೂ ನನ್ನ ಪತಿಯೊಂದಿಗೆ ಮತ್ತೆ ಭಾರತಕ್ಕೆ ಬರುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

[t4b-ticker]
error: Content is protected !!