ತಿರುವನಂತಪುರಂ: ನಿನ್ನೆ (ಶನಿವಾರ 8) ಕೇರಳದಲ್ಲಿ ನಡೆದವಂದೇ ಭಾರತ್ ರೈಲ್ವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಡಿದ ಆರ್‌ಎಸ್‌ಎಸ್ ಗೀತೆ (RSS Song) ಬಗ್ಗೆ ವಿವಾದ ಉಂಟಾಗಿದ್ದು, ಈ ಹಿನ್ನಲೆಯಲ್ಲಿ ಶಾಲೆ ಆಡಳಿತ ಮಂಡಳಿ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ, ಇದು ದೇಶಭಕ್ತಿಯ ಮಲಯಾಳಂ ಹಾಡು, ಇದರಲ್ಲಿ ರಾಷ್ಟ್ರೀಯ ಏಕತೆಯನ್ನು ಪ್ರಶ್ನಿಸುವ ಯಾವುದೇ ಪದಗಳಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡುವುದು ತಪ್ಪೇ ಎಂದು ಪತ್ರದಲ್ಲಿ ಪ್ರಶ್ನಿಸಿದ್ದು, ನಮ್ಮ ಮಕ್ಕಳು, ನಮ್ಮ ಮಾತೃಭೂಮಿಯನ್ನು ಹೊಗಳುವ ದೇಶಭಕ್ತಿ ಗೀತೆಯನ್ನು ಹಾಡಲು ಸಾಧ್ಯವಿಲ್ಲವೇ? ಇಂತಹ ಕ್ರಮಗಳು ಯುವ ಮನಸ್ಸುಗಳಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ನಿರುತ್ಸಾಹಗೊಳಿಸುತ್ತವೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೆಲ ಮಾಧ್ಯಮಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ಸಂಬಂಧ ಹೊಂದಿದೆ ಎಂದು ಟೀಕಿಸಿದ ಬಳಿಕ, ದಕ್ಷಿಣ ರೈಲ್ವೆ ತನ್ನ ಅಧಿಕೃತ ಎಕ್ಸ್ ಖಾತೆಯಿಂದ ಪೋಸ್ಟ್ ಅಳಿಸಿ ಹಾಕಿದೆ ಎಂದು ಶಾಲೆಯ ಪ್ರಾಂಶುಪಾಲ ಡಿಂಟೊ ಕೆಪಿ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈ ಹಾಡಿನಲ್ಲಿ ಜಾತ್ಯತೀತತೆ ಅಥವಾ ರಾಷ್ಟ್ರೀಯ ಏಕತೆಯ ವಿರುದ್ಧ ಯಾವುದೇ ಪದಗಳು ಅಥವಾ ಭಾವನೆಗಳಿಲ್ಲ. ಇದು ಭಾರತ ಮಾತೆಯ ಬಗ್ಗೆ ಗೌರವ ಮತ್ತು ನಮ್ಮ ರಾಷ್ಟ್ರದ ಬಗ್ಗೆ ಹೆಮ್ಮೆಯನ್ನು ಮಾತ್ರ ವ್ಯಕ್ತಪಡಿಸುತ್ತದೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ರೈಲ್ವೆ ಪೋಸ್ಟ್…
ದಕ್ಷಿಣ ರೈಲ್ವೆ, ವಿದ್ಯಾರ್ಥಿಗಳು ಹಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿ, “ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಪ್ರಯಾಣದ ಸಮಯದಲ್ಲಿ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಶಾಲಾ ಹಾಡನ್ನು ಸುಂದರವಾಗಿ ಪ್ರದರ್ಶಿಸಿದರು ಶನಿವಾರ ( ನ 8) ಸಂಜೆ ಬರೆದುಕೊಂಡಿದೆ.
ವಿಪಕ್ಷಗಳ ಆಕ್ರೋಶ..
ಕೇರಳದ ಆಡಳಿತಾರೂಢ ಸಿಪಿಎಂ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ದಕ್ಷಿಣ ರೈಲ್ವೆ ನಡೆಯನ್ನು ತೀವ್ರವಾಗಿ ಟೀಕಿಸಿದವು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕ್ರಮವನ್ನು ತೀವ್ರ ಖಂಡನೀಯ ಮತ್ತು ಸಾಂವಿಧಾನಿಕ ತತ್ವಗಳ ಸ್ಪಷ್ಟ ಉಲ್ಲಂಘನೆ ಎಂದು ಕರೆದರು.ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು ರೈಲ್ವೆ ಸಚಿವರಿಗೆ ಪತ್ರ ಬರೆದು, ಶಾಲಾ ವಿದ್ಯಾರ್ಥಿಗಳನ್ನು ಉದ್ಘಾಟನಾ ಸಮಾರಂಭದಲ್ಲಿ ಆರ್‌ಎಸ್‌ಎಸ್ ಹಾಡನ್ನು ಹಾಡಲು ಏಕೆ ಕೇಳಲಾಯಿತು ಎಂಬುದರ ಕುರಿತು ವಿವರಣೆ ಕೋರಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವನ್ನು, ಆರ್‌ಎಸ್‌ಎಸ್ ಕಾರ್ಯಕ್ರಮವಾಗಿ ಬದಲಾಯಿಸಲಾಗಿದೆ, ಆ ಹಾಡಿನ ವಿಡಿಯೋವನ್ನು ದಕ್ಷಿಣ ರೈಲ್ವೆ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದೆ. ಇದು ಯಾವುದೇ ವಿಭಜಕ ಸಿದ್ಧಾಂತವಲ್ಲ, ಪ್ರತಿಯೊಬ್ಬ ನಾಗರಿಕರಿಗೂ ಸೇರಿದ ರಾಷ್ಟ್ರೀಯ ಸಂಸ್ಥೆಯಾದ ಭಾರತೀಯ ರೈಲ್ವೆಯ ಸ್ಪಷ್ಟ ದುರುಪಯೋಗವಾಗಿದೆ ಎಂದು ತಿಳಿಸಿದ್ದಾರೆ.











































