ಬೆಂಗಳೂರು :ಕಾನೂನಿಗೆ ವಿರುದ್ಧವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ಮಾಡಿಸುವ ಮತ್ತು ಅದಕ್ಕೆ ಕುಮ್ಮಕ್ಕು ನೀಡುವ ಪೋಷಕರ ನಡೆ ಆತಂಕಕಾರಿ ಎಂದು ಹೈಕೋರ್ಟ್ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.
ನ್ಯಾಯಾಂಗ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಶಾಶ್ವತ ವಿಳಾಸ ಹೊಂದಿರುವ ಆರೋಪಿ ಹಬೀಬರ್ ಅಲಿಯಾಸ್ ಹಬೀಬ್ ಸಲ್ಲಿಸಿದ್ದ ಅರ್ಜಿ ಕುರಿತು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.ಅರ್ಜಿದಾರರ ಪರ ವಕೀಲರು, “ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಈಗಾಗಲೇ ಮದುವೆ ಯಾಗಿದ್ದಾರೆ. ಮದುವೆಯಾದಾಗ ಸಂತ್ರಸ್ತೆ ವಯಸ್ಸು 17 ವರ್ಷ 10 ತಿಂಗಳಾಗಿತ್ತು. ದೂರು ದಾರಳೂ ಆದ ಪತ್ನಿ ಈಗ ಗರ್ಭಿಣಿಯಾಗಿದ್ದಾಳೆ. ಅಂತಿಮವಾಗಿ ಪರಸ್ಪರ ಒಪ್ಪಂದದ ಮೂಲಕ ಪ್ರಕರಣ ಇತ್ಯರ್ಥಗೊಳಿಸಲು ಆಕೆ ಇಚ್ಛಿಸಿದ್ದು, ಯುವಕನನ್ನು ಪೋಕ್ರೋದಿಂದ ಮುಕ್ತಿಗೊಳಿಸ ಬೇಕು,” ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ”ಪ್ರಕರಣದಲ್ಲಿ ಸೆಟಲ್‌ಮೆಂಟ್ ಮಾಡಿಕೊಳ್ಳು ತೇವೆಂಬ ಅರ್ಜಿದಾರರ ವಾದ ಒಪ್ಪುವಂಥದ್ದಲ್ಲ. ಈ ಪ್ರಕರಣದಲ್ಲಿ ಪೋಷಕರೇ ಮುಂದಾಗಿ ಮದುವೆ ಮಾಡಿಸಿದ್ದು, ಅವರ ವಿರುದ್ದದ ಬಾಲ್ಯ ವಿವಾಹ ನಿಷೇಧ ಕಾಯಿದೆ-2006ರ ಕಲಂ 9. 10 ಮತ್ತು 11ರಡಿ ಕಠಿಣ ಕ್ರಮಕ್ಕೆ ಆದೇಶಿಸಬೇಕು,” ಎಂದು ಕೋರಿದರು.ಅದಕ್ಕೆ ನ್ಯಾಯಪೀಠ, “ಇಂತಹ ಪ್ರಕರಣಗಳಲ್ಲಿ ಸಲುಗೆ ತೋರುವುದು ತರವಲ್ಲ
ಈ ರೀತಿ ಅಪ್ರಾಪ್ತ ಮಕ್ಕಳ ಮದುವೆ ಮಾಡಿಸಿದರೆ ಅಸ್ತಿತ್ವದಲ್ಲಿರುವ ಬಾಲ್ಯ ವಿವಾಹ ನಿಷೇಧ ಕಾಯಿದೆಗೆ ಬೆಲೆಯೇನು ಬಂದಿತು? ಈ ಕುರಿತು ವಿಸ್ತ್ರತವಾದ ತೀರ್ಪು ಪ್ರಕಟಿಸಲಾಗು ವುದು,” ಎಂದು ಹೇಳಿ ವಿಚಾರಣೆ ಮುಂದೂಡಿತು.ಪ್ರಕರಣದ ಹಿನ್ನೆಲೆ: ಸಂತ್ರಸ್ತ ಬಾಲಕಿ ಹೊಟ್ಟೆನೋವು ಎಂದು ಸ್ಥಳೀಯ ಆಸ್ಪತ್ರೆಗೆ ಹೋದಾಗ ವೈದ್ಯರು ಆಕೆ ಗರ್ಭಿಣಿ ಎಂಬುದನ್ನು ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಯುವಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 64, ಪೋಕ್ಸ್ ಕಾಯಿದೆಯ ಕಲಂ 5(ಜೆ) (ಜಿಜಿ) ಮತ್ತು 6 ಹಾಗೂ ಬಾಲ್ಯ ವಿವಾಹ ನಿಷೇಧ ಕಾಯಿದೆಯಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಗಾಗಿ ನಗರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಕುರಿತಂತೆ ನಗರದ ಶೀಘ್ರ ವಿಲೇವಾರಿ ವಿಶೇಷ ನ್ಯಾಯಾಲಯದಲ್ಲಿನ ನ್ಯಾಯಿಕ ವಿಚಾರಣೆ ರದ್ದುಪಡಿಸುವಂತೆ ಆರೋಪಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ.













































